ಬಾಡಿಗೆ ಮನೆಯಲ್ಲಿ ವಾಸಿಸುವವರಿಗೆ ಮತ್ತು ಮನೆ ಮಾಲೀಕರಿಗೆ ಸರ್ಕಾರವು ಭರ್ಜರಿ ಸಿಹಿಸುದ್ದಿ ನೀಡಿದ್ದು, ಬಾಡಿಗೆ ಮಾರುಕಟ್ಟೆಯಲ್ಲಿ ಪಾರದರ್ಶಕತೆ ತರಲು ‘ಹೊಸ ಬಾಡಿಗೆ ಕಾಯ್ದೆ-2026’ (New Rental Rules) ಅನ್ನು ಜಾರಿಗೆ ತಂದಿದೆ. ಇನ್ಮುಂದೆ ಮನೆ ಮಾಲೀಕರು ತಮ್ಮ ಇಚ್ಛೆಯಂತೆ ಸೆಕ್ಯೂರಿಟಿ ಡೆಪಾಸಿಟ್ ಪಡೆಯುವಂತಿಲ್ಲ ಅಥವಾ ಬಾಡಿಗೆದಾರರಿಗೆ ಕಿರುಕುಳ ನೀಡುವಂತಿಲ್ಲ. ಮುಖ್ಯವಾಗಿ ಬೆಂಗಳೂರಿನಂತಹ ನಗರಗಳಲ್ಲಿ ಬಾಡಿಗೆದಾರರು ಎದುರಿಸುತ್ತಿದ್ದ ಡೆಪಾಸಿಟ್ ಸಮಸ್ಯೆ ಮತ್ತು ಖಾಸಗಿತನದ ಉಲ್ಲಂಘನೆಗೆ ಈ ಕಾನೂನು ಬ್ರೇಕ್ ಹಾಕಲಿದೆ.
ಹೌದು. ಬಾಡಿಗೆದಾರರಿಗೆ ನೆಮ್ಮದಿ ನೀಡುವ ನಿಟ್ಟಿನಲ್ಲಿ ಹೊಸ ಬಾಡಿಗೆ ನಿಯಮಗಳು ಜಾರಿಗೆ ಬಂದಿವೆ. ಇನ್ಮುಂದೆ ಬಾಡಿಗೆ ವಿಷಯದಲ್ಲಿ ಮನೆ ಮಾಲೀಕರಿಂದ ಯಾವುದೇ ಕಿರುಕುಳ ಇರುವುದಿಲ್ಲ. ಹೊಸ ಬಾಡಿಗೆ ಕಾಯ್ದೆಯಡಿ ನೀವು ತಿಳಿದುಕೊಳ್ಳಲೇಬೇಕಾದ 7 ಪ್ರಮುಖ ನಿಯಮಗಳು ಇಲ್ಲಿವೆ.
ಹೊಸ ಬಾಡಿಗೆ ಕಾಯ್ದೆಯ 7 ಪ್ರಮುಖ ನಿಯಮಗಳು:
- ಮನೆಗೆ ಬರುವ 24 ಗಂಟೆ ಮುಂಚಿತವಾಗಿ ಮಾಹಿತಿ ನೀಡಬೇಕು: ಮನೆ ಮಾಲೀಕರು ಬಾಡಿಗೆಗೆ ಕೊಟ್ಟಿರುವ ಮನೆಗೆ ಪ್ರವೇಶಿಸಬೇಕಾದರೆ 24 ಗಂಟೆಗಳ ಮುಂಚಿತವಾಗಿ ಬಾಡಿಗೆದಾರರಿಗೆ ಮಾಹಿತಿ ನೀಡಬೇಕು. ತುರ್ತು ಸಂದರ್ಭಗಳನ್ನು ಹೊರತುಪಡಿಸಿ ಉಳಿದ ಸಮಯದಲ್ಲಿ ಈ ನಿಯಮ ಪಾಲಿಸುವುದು ಕಡ್ಡಾಯ. ಇದು ಬಾಡಿಗೆದಾರರ ಖಾಸಗಿತನವನ್ನು ಕಾಪಾಡುತ್ತದೆ.
- ವರ್ಷಕ್ಕೊಮ್ಮೆ ಮಾತ್ರ ಬಾಡಿಗೆ ಹೆಚ್ಚಳ: ಮನೆ ಬಾಡಿಗೆಯನ್ನು ಪ್ರತಿ 12 ತಿಂಗಳಿಗೊಮ್ಮೆ ಮಾತ್ರ ಹೆಚ್ಚಿಸಬೇಕು. ಬಾಡಿಗೆ ಹೆಚ್ಚಿಸುವ ಮೊದಲು ಮಾಲೀಕರು 90 ದಿನಗಳ ಮುಂಚಿತವಾಗಿ ಲಿಖಿತ ನೋಟಿಸ್ ನೀಡಬೇಕು.
- ಸೆಕ್ಯೂರಿಟಿ ಡೆಪಾಸಿಟ್ ಮಿತಿ: ಮನೆ ಮಾಲೀಕರು ಬಾಡಿಗೆದಾರರಿಂದ ಗರಿಷ್ಠ ಎರಡು ತಿಂಗಳ ಬಾಡಿಗೆಯನ್ನು ಮಾತ್ರ ಸೆಕ್ಯೂರಿಟಿ ಡೆಪಾಸಿಟ್ ಆಗಿ ಪಡೆಯಬೇಕು. ಇದರಿಂದ ಬಾಡಿಗೆದಾರರ ಮೇಲಿನ ಆರ್ಥಿಕ ಹೊರೆ ತಗ್ಗಲಿದೆ.
- ಬಲವಂತವಾಗಿ ಮನೆ ಖಾಲಿ ಮಾಡಿಸುವಂತಿಲ್ಲ: ಮನೆ ಮಾಲೀಕರು ಬಾಡಿಗೆದಾರರನ್ನು ಬಲವಂತವಾಗಿ ಅಥವಾ ಬೆದರಿಕೆ ಹಾಕಿ ಮನೆ ಖಾಲಿ ಮಾಡಿಸುವಂತಿಲ್ಲ. ಮನೆ ಖಾಲಿ ಮಾಡಿಸಬೇಕೆಂದರೆ ಬಾಡಿಗೆ ಒಪ್ಪಂದ (Rent Agreement) ಮತ್ತು ಕಾನೂನಿನ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.
- ಬಾಡಿಗೆ ಒಪ್ಪಂದದ ನೋಂದಣಿ ಕಡ್ಡಾಯ: ಬಾಡಿಗೆ ಒಪ್ಪಂದಕ್ಕೆ ಸಹಿ ಹಾಕಿದ 60 ದಿನಗಳ ಒಳಗೆ ಡಿಜಿಟಲ್ ಸ್ಟಾಂಪ್ ಮಾಡಿ ಅಧಿಕೃತವಾಗಿ ನೋಂದಣಿ (Register) ಮಾಡಿಸಬೇಕು. ಇದು ಮಾಲೀಕ ಮತ್ತು ಬಾಡಿಗೆದಾರರ ನಡುವೆ ಪಾರದರ್ಶಕತೆ ಕಾಪಾಡುತ್ತದೆ.
- ಮನೆಯ ದುರಸ್ತಿ ಮತ್ತು ನಿರ್ವಹಣೆ: ಮನೆಯಲ್ಲಿ ಯಾವುದೇ ಅಗತ್ಯ ದುರಸ್ತಿಗಳಿದ್ದರೆ ಮಾಲೀಕರು 30 ದಿನಗಳೊಳಗೆ ಪೂರೈಸಬೇಕು. ಒಂದು ವೇಳೆ ಮಾಲೀಕರು ಮಾಡದಿದ್ದರೆ, ಬಾಡಿಗೆದಾರರೇ ದುರಸ್ತಿ ಮಾಡಿಸಿ ಆ ವೆಚ್ಚವನ್ನು ಮಾಸಿಕ ಬಾಡಿಗೆಯಿಂದ ಕಡಿತಗೊಳಿಸಿಕೊಳ್ಳಬಹುದು.
- ಕಿರುಕುಳ ನೀಡಿದರೆ ಕಾನೂನು ಕ್ರಮ: ಬಾಡಿಗೆದಾರರಿಗೆ ಕಿರುಕುಳ ನೀಡುವುದು, ಮನೆಯ ಬೀಗ ಬದಲಾಯಿಸುವುದು, ನೀರು ಅಥವಾ ವಿದ್ಯುತ್ ಸಂಪರ್ಕ ಕಡಿತಗೊಳಿಸುವುದು ಶಿಕ್ಷಾರ್ಹ ಅಪರಾಧ. ಇಂತಹ ಕೃತ್ಯ ಎಸಗುವ ಮಾಲೀಕರು ಕಾನೂನು ರೀತ್ಯಾ ದಂಡ ಪಾವತಿಸಬೇಕಾಗುತ್ತದೆ.
ಯಾರಿಗೆ ಲಾಭ ?
ಈ ಹೊಸ ನಿಯಮಗಳು ಹೈದರಾಬಾದ್, ಬೆಂಗಳೂರಿನಂತಹ ನಗರಗಳಲ್ಲಿ ಬಾಡಿಗೆ ಮಾರುಕಟ್ಟೆಯನ್ನು ಹೆಚ್ಚು ಪಾರದರ್ಶಕಗೊಳಿಸಲಿವೆ. ಮಾಲೀಕರು ಮತ್ತು ಬಾಡಿಗೆದಾರರ ನಡುವಿನ ವಿವಾದಗಳನ್ನು ಕಡಿಮೆ ಮಾಡಲು ಮತ್ತು ಕಾನೂನು ರಕ್ಷಣೆ ನೀಡಲು ಈ ಕಾಯ್ದೆ ಸಹಕಾರಿಯಾಗಿದೆ.

