ಬೆಂಗಳೂರು: ರಾಜ್ಯದಲ್ಲಿ ನಾಳೆಯಿಂದ ಆರಂಭವಾಗಬೇಕಿದ್ದ ಮುಷ್ಕರವನ್ನು ಸರ್ಕಾರಿ ವೈದ್ಯಾಧಿಕಾರಿಗಳ ಸಂಘ ಹಿಂಪಡೆದುಕೊಂಡಿದೆ.
ನಾಳೆಯಿಂದ ರಾಜ್ಯಾದ್ಯಂತ ಕರೆ ನೀಡಿದ್ದ ವೈದ್ಯರ ಮುಷ್ಕರವನ್ನು ಹಿಂಪಡೆಯಲಾಗಿದೆ. 14 ಬೇಡಿಕೆಗಳ ಪೈಕಿ 13 ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಲಾಗಿದೆ. ಮೂರು ತಿಂಗಳಲ್ಲಿ ಎಲ್ಲಾ ಬೇಡಿಕೆ ಈಡೇರಿಸುವುದಾಗಿ ಸರ್ಕಾರ ಭರವಸೆ ನೀಡಿದೆ. ರಾಜ್ಯ ಸರ್ಕಾರದ ಭರವಸೆ ಬೆನ್ನಲ್ಲೇ ವೈದ್ಯರು ಮುಷ್ಕರ ಹಿಂಪಡೆದುಕೊಂಡಿದ್ದಾರೆ.
ತಮ್ಮ ವಿವಿಧ ಬೇಡಿಕೆಗಳ ಈಡೇರಿಸಲು ಒತ್ತಾಯಿಸಿ ರಾಜ್ಯ ಆರೋಗ್ಯ ಇಲಾಖೆ ನೌಕರರು ನಾಳೆಯಿಂದ ಮುಷ್ಕರ ಕೈಗೊಂಡಿದ್ದರು. ಆರೋಗ್ಯ ಇಲಾಖೆ ಅಧಿಕಾರಿಗಳು, ವೈದ್ಯರು, ನೌಕರರು, ಹೊರ ರೋಗಿಗಳ ವಿಭಾಗ(ಒಪಿಡಿ) ಕರ್ತವ್ಯ ಸ್ಥಗಿತಗೊಳಿಸುವುದಾಗಿ ಹೇಳಲಾಗಿತ್ತು. ವೈದ್ಯರು, ಆರೋಗ್ಯ ಇಲಾಖೆ ಸಿಬ್ಬಂದಿ ತಮ್ಮ ಬೇಡಿಕೆ ಈಡೇರಿಸುವಂತೆ ಎರಡು ವಾರದ ಹಿಂದೆಯೇ ಮುಷ್ಕರ ನಡೆಸುವ ನಿರ್ಧಾರ ಪ್ರಕಟಿಸಲಾಗಿದ್ದರೂ ಸರ್ಕಾರದಿಂದ ಯಾವುದೇ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ ಮುಷ್ಕರ ಕೈಗೊಳ್ಳಲಾಗಿತ್ತು. ಮುಷ್ಕರಕ್ಕೆ ರಾಜ್ಯ ಸರ್ಕಾರಿ ನೌಕರರ ಸಂಘದವರು ಕೂಡ ಬೆಂಬಲ ನೀಡಿದ್ದು, ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿಯೂ ಮುಷ್ಕರ ನಡೆಸಲು ತೀರ್ಮಾನಿಸಲಾಗಿತ್ತು.
ವೈದ್ಯರು, ವೈದ್ಯಕೀಯ ಸಿಬ್ಬಂದಿಗೆ ವೈದ್ಯಕೀಯ ಶಿಕ್ಷಣ ಇಲಾಖೆ ಮಾದರಿಯಲ್ಲಿ ವೇತನ ಕೊಡಬೇಕು. ಗುತ್ತಿಗೆ ವೈದ್ಯರು, ನೌಕರರು, ಎನ್.ಹೆಚ್.ಎಂ. ಗುತ್ತಿಗೆ ನೌಕರರಿಗೆ ಭದ್ರತೆ ನೀಡಿ ವೇತನ ಹೆಚ್ಚಳ ಮಾಡಬೇಕು. ಕೇಂದ್ರ ಪುರಸ್ಕೃತ ಯೋಜನೆಯಡಿ 6,000 ನೌಕರರಿಗೆ ವೇತನ ಭತ್ಯೆ ಕೊಡಬೇಕು. ಖಾಲಿ ಇರುವ 39 ಸಾವಿರ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಬೇಕು. ವೃಂದ ಮತ್ತು ನೇಮಕಾತಿ ನಿಯಮಕ್ಕೆ ತಿದ್ದುಪಡಿ ಮಾಡಿ ಜೇಷ್ಠತಾ ಪಟ್ಟಿ ಪ್ರಕಟಿಸಬೇಕು ಎಂದು ಒತ್ತಾಯಿಸಲಾಗಿತ್ತು.
ಬೇಡಿಕೆ ಈಡೇರಿಸಲು ಸರ್ಕಾರ ಭರವಸೆ ನೀಡಿದ ಹಿನ್ನೆಲೆಯಲ್ಲಿ ಮುಷ್ಕರ ಕೈಬಿಡಲು ವೈದ್ಯರು ನಿರ್ಧರಿಸಿದ್ದಾರೆ.

