ಸಾಮಾನ್ಯವಾಗಿ ಸಂಜೆ ಹೊತ್ತಿನಲ್ಲಿ ಏನಾದರೂ ಖಾರವಾಗಿ ಹಾಗೂ ರುಚಿಕರವಾಗಿ ತಿನ್ನಬೇಕು ಎನಿಸುವುದು ಸಹಜ. ಅಂತಹ ಸಮಯದಲ್ಲಿ ಹೊರಗಿನ ಜಂಕ್ ಫುಡ್ ಮೊರೆ ಹೋಗುವ ಬದಲು ಮನೆಯಲ್ಲೇ ರೆಸ್ಟೋರೆಂಟ್ ಶೈಲಿಯ ತಿಂಡಿಗಳನ್ನು ತಯಾರಿಸಬಹುದು. ಅದರಲ್ಲೂ ಚಿಕನ್ ಇಷ್ಟಪಡುವವರಿಗಾಗಿ ಸ್ಪೈಸಿ ಪೆರಿ ಪೆರಿ ಚಿಕನ್ ರೋಲ್ ಒಂದು ಅತ್ಯುತ್ತಮ ಆಯ್ಕೆ. ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಎಲ್ಲರೂ ಇಷ್ಟಪಟ್ಟು ಸವಿಯುವ ಈ ರೋಲ್ ತಯಾರಿಸುವುದು ಬಹಳ ಸುಲಭ.
ಬೇಕಾಗುವ ಪದಾರ್ಥಗಳು
ಅರ್ಧ ಕೆಜಿ ಮೂಳೆ ಇಲ್ಲದ ಚಿಕನ್, ರುಚಿಗೆ ತಕ್ಕಷ್ಟು ಉಪ್ಪು, ಬೆಳ್ಳುಳ್ಳಿ ಪುಡಿ, ಪಪ್ರಿಕಾ ಪುಡಿ, ಕಾಳುಮೆಣಸಿನ ಪುಡಿ, ಎಣ್ಣೆ ಅಥವಾ ಬೆಣ್ಣೆ, ಸ್ವಲ್ಪ ವಿನೆಗರ್ ಮತ್ತು ಸೋಯಾ ಸಾಸ್. ಮುಖ್ಯವಾಗಿ ಪೆರಿ ಪೆರಿ ಸಾಸ್ ಮತ್ತು ಅಗತ್ಯವಿದ್ದರೆ ಪೆರಿ ಪೆರಿ ಸೀಸನಿಂಗ್ ಬಳಸಬಹುದು. ಪರೋಟ ತಯಾರಿಸಲು ಮೈದಾ ಹಿಟ್ಟು ಮತ್ತು ನೀರು ಬೇಕಾಗುತ್ತದೆ. ರೋಲ್ ಒಳಗೆ ಹಾಕಲು ಟೊಮೆಟೊ, ಈರುಳ್ಳಿ, ಕ್ಯಾಪ್ಸಿಕಂ, ಬೇಯಿಸಿದ ಸ್ವೀಟ್ ಕಾರ್ನ್, ಮಯೋನೈಸ್ ಹಾಗೂ ಟೊಮೆಟೊ ಕೆಚಪ್ ಸಿದ್ಧಪಡಿಸಿಕೊಳ್ಳಿ.
ತಯಾರಿಸುವ ಸರಳ ವಿಧಾನ
ಮೊದಲಿಗೆ ಒಂದು ಪಾತ್ರೆಯಲ್ಲಿ ಮೈದಾ ಹಿಟ್ಟು ಮತ್ತು ಸ್ವಲ್ಪ ಉಪ್ಪು ಸೇರಿಸಿ, ನೀರು ಹಾಕುತ್ತಾ ಮೃದುವಾಗಿ ಕಲಸಿಕೊಳ್ಳಿ. ಈ ಹಿಟ್ಟು ಸುಮಾರು ಅರ್ಧ ಗಂಟೆ ಕಾಲ ನೆನೆಯಲಿ. ಈ ಸಮಯದಲ್ಲಿ ಚಿಕನ್ ತಯಾರಿಗೆ ಮುಂದಾಗಿ. ಒಂದು ಬೌಲ್ ನಲ್ಲಿ ಸಣ್ಣಗೆ ಕತ್ತರಿಸಿದ ಚಿಕನ್ ತುಂಡುಗಳನ್ನು ತೆಗೆದುಕೊಂಡು ಅದಕ್ಕೆ ಉಪ್ಪು, ಬೆಳ್ಳುಳ್ಳಿ ಪುಡಿ, ಪಪ್ರಿಕಾ ಪುಡಿ, ಕಾಳುಮೆಣಸಿನ ಪುಡಿ, ಸ್ವಲ್ಪ ಎಣ್ಣೆ, ವಿನೆಗರ್, ಸೋಯಾ ಸಾಸ್ ಮತ್ತು ಪೆರಿ ಪೆರಿ ಸಾಸ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಮಸಾಲೆ ಚಿಕನ್ ಗೆ ಸರಿಯಾಗಿ ಹಿಡಿಯಲು ಇದನ್ನು ಕೂಡ ಅರ್ಧ ಗಂಟೆ ಪಕ್ಕಕ್ಕೆ ಇಡಿ.
ನಂತರ ಕಲಸಿಟ್ಟ ಮೈದಾ ಹಿಟ್ಟಿನಿಂದ ಸಣ್ಣ ಉಂಡೆಗಳನ್ನು ಮಾಡಿ ಪರೋಟಗಳನ್ನು ಲಟ್ಟಿಸಿಕೊಳ್ಳಿ. ಹಂಚಿನ ಮೇಲೆ ಎಣ್ಣೆ ಅಥವಾ ತುಪ್ಪ ಸವರಿ ಪರೋಟಗಳು ಗರಿಗರಿಯಾಗುವಂತೆ ಸುಟ್ಟುಕೊಳ್ಳಿ. ಈಗ ಒಂದು ಪ್ಯಾನ್ ನಲ್ಲಿ ಮ್ಯಾರಿನೇಟ್ ಮಾಡಿದ ಚಿಕನ್ ಹಾಕಿ ಚೆನ್ನಾಗಿ ಬೇಯಿಸಿ. ಚಿಕನ್ ಮೃದುವಾಗಿ ಬೆಂದು ಮಸಾಲೆ ಸರಿಯಾಗಿ ಹೊಂದಿಕೊಂಡ ಮೇಲೆ ಗ್ಯಾಸ್ ಆಫ್ ಮಾಡಿ ತಣ್ಣಗಾಗಲು ಬಿಡಿ.
ಕೊನೆಯ ಹಂತದಲ್ಲಿ ಸಿದ್ಧಪಡಿಸಿದ ಪರೋಟದ ಮೇಲೆ ಮಯೋನೈಸ್ ಮತ್ತು ಕೆಚಪ್ ಹಚ್ಚಿ. ಅದರ ಮೇಲೆ ಹೆಚ್ಚಿದ ಈರುಳ್ಳಿ, ಟೊಮೆಟೊ, ಕ್ಯಾಪ್ಸಿಕಂ ಮತ್ತು ಸ್ವೀಟ್ ಕಾರ್ನ್ ಹರಡಿ. ಇದರ ಮಧ್ಯದಲ್ಲಿ ತಯಾರಿಸಿದ ಚಿಕನ್ ತುಂಡುಗಳನ್ನು ಇಟ್ಟು ನಿಧಾನವಾಗಿ ರೋಲ್ ಮಾಡಿ. ಹೂರಣ ಹೊರಬರದಂತೆ ಒಂದು ಟೂತ್‌ಪಿಕ್ ಸಹಾಯದಿಂದ ಲಾಕ್ ಮಾಡಿ. ಈಗ ಬಿಸಿಬಿಸಿಯಾದ ಪೆರಿ ಪೆರಿ ಚಿಕನ್ ರೋಲ್ ಸವಿಯಲು ಸಿದ್ಧ.

