ಭಾರತದಲ್ಲಿ ಬೇಸಿಗೆಯ ಬಿಸಿ ಏರುತ್ತಿದ್ದಂತೆ ಜನರ ಆಹಾರದ ಆಯ್ಕೆಗಳು ಸಾಂಪ್ರದಾಯಿಕ ಶೈಲಿಯತ್ತ ಮರಳುತ್ತಿವೆ. ಇನ್‌ಸ್ಟಾಮಾರ್ಟ್ ಬಿಡುಗಡೆ ಮಾಡಿರುವ ಇತ್ತೀಚಿನ ವರದಿಯ ಪ್ರಕಾರ, ಈ ಸೀಸನ್‌ನಲ್ಲಿ ಅತಿ ಹೆಚ್ಚು ಆರ್ಡರ್ ಆಗುತ್ತಿರುವ ಉತ್ಪನ್ನಗಳಲ್ಲಿ ಮೊಸರು ಅಗ್ರಸ್ಥಾನದಲ್ಲಿದೆ. ವಿಶೇಷವೆಂದರೆ, ಟಾಪ್ 10 ಆರ್ಡರ್‌ಗಳಲ್ಲಿ 6 ಐಟಂಗಳು ಮೊಸರು ಆಧಾರಿತ ಉತ್ಪನ್ನಗಳೇ ಆಗಿವೆ ಎಂಬುದು ಗಮನಾರ್ಹ.
ಐಸ್‌ಕ್ರೀಮ್ ಅಂದ್ರೆ ಬೆಂಗಳೂರಿಗರಿಗೆ ಪಂಚಪ್ರಾಣ ವರದಿಯ ಪ್ರಕಾರ, ರಾತ್ರಿ 9 ಗಂಟೆಯ ಸಮಯವು ಐಸ್‌ಕ್ರೀಮ್ ಆರ್ಡರ್ ಮಾಡಲು ದೇಶದ ‘ಅತ್ಯಂತ ಪ್ರಿಯವಾದ ಸಮಯ’ ಎಂದು ಗುರುತಿಸಲ್ಪಟ್ಟಿದೆ. ಭಾರತದ ‘ಐಸ್‌ಕ್ರೀಮ್ ರಾಜಧಾನಿ’ ಎಂಬ ಹೆಗ್ಗಳಿಕೆಗೆ ಬೆಂಗಳೂರು ಪಾತ್ರವಾಗಿದೆ. ಮುಂಬೈ ಮತ್ತು ಹೈದರಾಬಾದ್ ನಂತರದ ಸ್ಥಾನದಲ್ಲಿವೆ. ಇನ್ನು ಫ್ಲೇವರ್‌ಗಳ ವಿಚಾರಕ್ಕೆ ಬಂದರೆ, ಕಾಲು ಭಾಗದಷ್ಟು ಜನರು ಚಾಕೊಲೇಟ್ ಫ್ಲೇವರ್ ಅನ್ನೇ ಹೆಚ್ಚು ಇಷ್ಟಪಡುತ್ತಿದ್ದಾರೆ.
ಜೀರಾ ಮಸಾಲಾ ಸೋಡಾ ಮತ್ತು ಕೋಲ್ಡ್ ಕಾಫಿಗೆ ಭಾರಿ ಡಿಮ್ಯಾಂಡ್ ಪಾನೀಯಗಳ ವಿಭಾಗದಲ್ಲಿ ಈ ಬಾರಿ ಹೊಸ ಟ್ರೆಂಡ್ ಕಂಡುಬಂದಿದೆ. ಜೀರಾ ಮಸಾಲಾ ಸೋಡಾ ಆರ್ಡರ್‌ಗಳಲ್ಲಿ ಶೇಕಡಾ 900 ರಷ್ಟು ಏರಿಕೆಯಾಗಿದ್ದರೆ, ಕೋಲ್ಡ್ ಕಾಫಿ ಆರ್ಡರ್‌ಗಳು ಶೇಕಡಾ 700 ರಷ್ಟು ಹೆಚ್ಚಾಗಿವೆ. ಎಳನೀರು, ಮಜ್ಜಿಗೆ, ಲಸ್ಸಿ ಮತ್ತು ಮಿಲ್ಕ್‌ಶೇಕ್‌ಗಳು ಕೂಡ ಬೇಸಿಗೆಯ ಬಿಸಿಯಿಂದ ಪಾರಾಗಲು ಜನರ ನೆಚ್ಚಿನ ಆಯ್ಕೆಯಾಗಿವೆ.
ಮಾವಿನ ಹಣ್ಣಿನ ಕ್ರೇಜ್ ಮತ್ತು ಪ್ರಾದೇಶಿಕ ವ್ಯತ್ಯಾಸ ಬೇಸಿಗೆ ಎಂದರೆ ಮಾವಿನ ಹಣ್ಣು ಇರಲೇಬೇಕು. ಸದ್ಯ ಸಿಂಧೂ ತಳಿಯ ಮಾವಿನ ಹಣ್ಣು ಅತಿ ಹೆಚ್ಚು ಮಾರಾಟವಾಗುತ್ತಿದೆ. ಬೆಂಗಳೂರು ಮಾವು ಬಳಕೆಯಲ್ಲಿ ಹೈದರಾಬಾದ್ ಮತ್ತು ಚೆನ್ನೈ ಎರಡನ್ನೂ ಮೀರಿಸಿದೆ. ಪ್ರಾದೇಶಿಕವಾಗಿ ನೋಡುವುದಾದರೆ ಚಂಡೀಗಢದಲ್ಲಿ ಲಸ್ಸಿಗೆ ಹೆಚ್ಚಿನ ಬೇಡಿಕೆಯಿದ್ದರೆ, ದೆಹಲಿ ಮತ್ತು ಲಕ್ನೋ ಜನರು ಮಜ್ಜಿಗೆಯನ್ನು ಹೆಚ್ಚು ಇಷ್ಟಪಡುತ್ತಿದ್ದಾರೆ. ಬೆಂಗಳೂರು ಮತ್ತು ಮುಂಬೈನಲ್ಲಿ ಕಲ್ಲಂಗಡಿ ಹಾಗೂ ಕಸ್ತೂರಿ ಹಣ್ಣುಗಳ ಆರ್ಡರ್ ಹೆಚ್ಚಾಗಿವೆ.
ಒಟ್ಟಾರೆಯಾಗಿ ಈ ಬೇಸಿಗೆಯಲ್ಲಿ ಭಾರತೀಯರು ಆಧುನಿಕ ಪಾನೀಯಗಳಿಗಿಂತ ಹೆಚ್ಚಾಗಿ ದೇಹಕ್ಕೆ ತಂಪು ನೀಡುವ ನೈಸರ್ಗಿಕ ಮತ್ತು ಸಾಂಪ್ರದಾಯಿಕ ಆಹಾರ ಪದಾರ್ಥಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿರುವುದು ಈ ವರದಿಯಿಂದ ಸ್ಪಷ್ಟವಾಗಿದೆ.

