HomeLatest News1958ರ FIFA ವಿಶ್ವಕಪ್ ಫೈನಲ್‌ನಲ್ಲಿ ಪೀಲೆ ಧರಿಸಿದ್ದ ಟಿ-ಶರ್ಟ್ ₹47.23 ಕೋಟಿಗೆ ಮಾರಾಟ: ಹರಾಜಿನಲ್ಲಿ ಹೊಸ...

1958ರ FIFA ವಿಶ್ವಕಪ್ ಫೈನಲ್‌ನಲ್ಲಿ ಪೀಲೆ ಧರಿಸಿದ್ದ ಟಿ-ಶರ್ಟ್ ₹47.23 ಕೋಟಿಗೆ ಮಾರಾಟ: ಹರಾಜಿನಲ್ಲಿ ಹೊಸ ದಾಖಲೆ

ನ್ಯೂಯಾರ್ಕ್: ಫುಟ್‌ಬಾಲ್ ಜಗತ್ತಿನ ಕಿರೀಟವಿಲ್ಲದ ಮಹಾರಾಜ, ಬ್ರೆಜಿಲ್‌ನ ದಂತಕಥೆ ಪೀಲೆ ಅವರ ಅಪರೂಪದ ಕ್ರೀಡಾ ಸ್ಮರಣಿಕೆಯೊಂದು ಜಾಗತಿಕ ಹರಾಜು ಮಾರುಕಟ್ಟೆಯಲ್ಲಿ ಭಾರಿ ದಾಖಲೆ ಬರೆದಿದೆ. 1958 ರ ಫಿಫಾ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಪೀಲೆ ಧರಿಸಿದ್ದ ಐಕಾನಿಕ್ ನಂಬರ್ 10 ಟಿ-ಶರ್ಟ್ (ಜೆರ್ಸಿ) ನ್ಯೂಯಾರ್ಕ್‌ನಲ್ಲಿ ನಡೆದ ಹರಾಜಿನಲ್ಲಿ ಬರೋಬ್ಬರಿ ₹47.23 ಕೋಟಿಗೆ (4.9 ಮಿಲಿಯನ್ ಯುಎಸ್ ಡಾಲರ್) ಮಾರಾಟವಾಗಿದೆ. ಈ ಮೂಲಕ ಫುಟ್‌ಬಾಲ್ ಇತಿಹಾಸದಲ್ಲೇ ಅತ್ಯಂತ ಅಮೂಲ್ಯವಾದ ಕ್ರೀಡಾ ಸ್ಮರಣಿಕೆಗಳ ಪಟ್ಟಿಗೆ ಇದು ಸೇರ್ಪಡೆಯಾಗಿದೆ.

17ರ ಹರೆಯದ ಪೀಲೆ ಬರೆದಿದ್ದ ಇತಿಹಾಸದ ಸಾಕ್ಷಿ ಈ ಜೆರ್ಸಿ

1958 ರಲ್ಲಿ ಸ್ವೀಡನ್‌ನ ಸ್ಟಾಕ್‌ಹೋಮ್‌ನಲ್ಲಿ ನಡೆದ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಬ್ರೆಜಿಲ್ ತಂಡವು ಆತಿಥೇಯ ಸ್ವೀಡನ್ ಅನ್ನು 5-2 ಅಂತರದಿಂದ ಧೂಳೀಪಟ ಮಾಡಿ, ತನ್ನ ಚೊಚ್ಚಲ ಫಿಫಾ ವಿಶ್ವಕಪ್ ಪ್ರಶಸ್ತಿಯನ್ನು ಮುತ್ತಿಕ್ಕಿತ್ತು. ಆ ಐತಿಹಾಸಿಕ ಪಂದ್ಯದಲ್ಲಿ ಕೇವಲ 17 ವರ್ಷದ ಬಾಲಕನಾಗಿದ್ದ ಪೀಲೆ, ವಿರೋಧಿಗಳ ಕೋಟೆಯನ್ನು ಭೇದಿಸಿ 2 ಆಕರ್ಷಕ ಗೋಲುಗಳನ್ನು ಬಾರಿಸಿದ್ದರು. ಆ ಮೂಲಕ ಫಿಫಾ ವಿಶ್ವಕಪ್ ಫೈನಲ್‌ನಲ್ಲಿ ಗೋಲು ಗಳಿಸಿದ ಅತ್ಯಂತ ಕಿರಿಯ ಆಟಗಾರ ಎಂಬ ಜಾಗತಿಕ ದಾಖಲೆ ಬರೆದಿದ್ದರು. ಆ ದೈವಿಕ ಕ್ಷಣದಲ್ಲಿ ಪೀಲೆ ಧರಿಸಿದ್ದ ಜೆರ್ಸಿಯೇ ಈಗ ಕೋಟಿ ಕೋಟಿ ಬೆಲೆಗೆ ಹರಾಜಾಗಿದೆ.

ಮರಡೋನಾ ಬಳಿಕ ಎರಡನೇ ಅತ್ಯಂತ ದುಬಾರಿ ಜೆರ್ಸಿ

ವಿಶೇಷವೆಂದರೆ, ಇದೇ ಟಿ-ಶರ್ಟ್ ಈ ಹಿಂದೆ ಅಂದರೆ 2004 ರಲ್ಲಿ ನಡೆದಿದ್ದ ಹರಾಜಿನಲ್ಲಿ ಕೇವಲ ₹91,51,323 ಗೆ ಮಾರಾಟವಾಗಿತ್ತು. ಆದರೆ ಇಂದು ಪೀಲೆ ಅವರ ಕ್ರೇಜ್ ಜಾಗತಿಕ ಮಟ್ಟದಲ್ಲಿ ಎಷ್ಟಿದೆ ಎಂಬುದಕ್ಕೆ ಈ ಹೊಸ ಹರಾಜು ಮೊತ್ತವೇ ಸಾಕ್ಷಿ.ಕ್ರೀಡಾ ಲೋಕದಲ್ಲಿ ಇದುವರೆಗೆ ಹರಾಜಾದ ಫುಟ್‌ಬಾಲ್ ಜೆರ್ಸಿಗಳ ಪೈಕಿ ಇದು ಎರಡನೇ ಅತ್ಯಂತ ದುಬಾರಿ ಜೆರ್ಸಿಯಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮೊದಲ ಸ್ಥಾನದಲ್ಲಿ ಯಾರು?:

1986 ರ ವಿಶ್ವಕಪ್ ಕ್ವಾರ್ಟರ್ ಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಅರ್ಜೆಂಟೀನಾದ ದಂತಕಥೆ ಡಿಯಾಗೋ ಮರಡೋನಾ ಅವರು ಪ್ರಸಿದ್ಧ ‘ಹ್ಯಾಂಡ್ ಆಫ್ ಗಾಡ್’ ಗೋಲು ಗಳಿಸುವಾಗ ಧರಿಸಿದ್ದ ಜೆರ್ಸಿ ನಂಬರ್ 1 ಸ್ಥಾನದಲ್ಲಿದೆ. ಅದು 2022 ರ ಹರಾಜಿನಲ್ಲಿ ಬರೋಬ್ಬರಿ ₹89.64 ಕೋಟಿಗೆ ಮಾರಾಟವಾಗಿ ಜಗತ್ತಿನ ಅತ್ಯಂತ ದುಬಾರಿ ಜೆರ್ಸಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ವಿಶ್ವಕಪ್‌ನ ಸುಲ್ತಾನ್ ಕಿಂಗ್ ಪೀಲೆ:

2022 ರಲ್ಲಿ ತಮ್ಮ 82 ನೇ ವಯಸ್ಸಿನಲ್ಲಿ ನಿಧನರಾದ ಪೀಲೆ ಅವರ ಹೆಸರಿನಲ್ಲಿರುವ ಫುಟ್‌ಬಾಲ್ ದಾಖಲೆಗಳು ಇಂದಿಗೂ ಅಜೇಯ. ಪೀಲೆ ತಮ್ಮ ಅದ್ಭುತ ಕೌಶಲ್ಯದಿಂದ ಬ್ರೆಜಿಲ್ ತಂಡಕ್ಕೆ 1958, 1962 ಮತ್ತು 1970 ರಲ್ಲಿ ಒಟ್ಟು 3 ಬಾರಿ ಫಿಫಾ ವಿಶ್ವಕಪ್ ಪ್ರಶಸ್ತಿಯನ್ನು ತಂದುಕೊಟ್ಟಿದ್ದಾರೆ. ಇತಿಹಾಸದಲ್ಲಿ ಮೂರು ವಿಶ್ವಕಪ್‌ಗಳನ್ನು ಗೆದ್ದ ವಿಶ್ವದ ಏಕೈಕ ಆಟಗಾರ ಎಂಬ ಅಪರೂಪದ ದಾಖಲೆ ಇಂದಿಗೂ ಪೀಲೆ ಹೆಸರಿನಲ್ಲೇ ಭದ್ರವಾಗಿದೆ. 1958 ರ ಆ ಒಂದು ವಿಶ್ವಕಪ್ ಟೂರ್ನಿಯಲ್ಲೇ ಅವರು ಒಟ್ಟು 6 ಗೋಲುಗಳನ್ನು ಸಿಡಿಸಿ ಇಡೀ ವಿಶ್ವವೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದರು.ಈಗ ಹರಾಜಾಗಿರುವ ಅವರ ಜೆರ್ಸಿಯು ಕೇವಲ ಬಟ್ಟೆಯ ತುಣುಕಲ್ಲ, ಬದಲಾಗಿ ಅದು ಜಾಗತಿಕ ಫುಟ್‌ಬಾಲ್ ಇತಿಹಾಸದ ಸುವರ್ಣ ಯುಗದ ಮೈಲಿಗಲ್ಲು ಎಂದು ಕ್ರೀಡಾ ವಿಶ್ಲೇಷಕರು ಬಣ್ಣಿಸಿದ್ದಾರೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular