HomeIndia₹1 ಲಕ್ಷದಲ್ಲಿ ಸೌರಶಕ್ತಿ ತ್ರಿಚಕ್ರ ವಾಹನ ನಿರ್ಮಿಸಿದ 17 ವರ್ಷದ ಬಾಲಕ

₹1 ಲಕ್ಷದಲ್ಲಿ ಸೌರಶಕ್ತಿ ತ್ರಿಚಕ್ರ ವಾಹನ ನಿರ್ಮಿಸಿದ 17 ವರ್ಷದ ಬಾಲಕ

ಗುರುಗ್ರಾಮ್- ಎಂಜಿನಿಯರಿಂಗ್ ತಂಡವಾಗಲಿ, ಸ್ವಂತ ಕಾರ್ಯಾಗಾರವಾಗಲಿ ಅಥವಾ ದೊಡ್ಡ ಬಜೆಟ್ ಆಗಲಿ ಇಲ್ಲದಿದ್ದರೂ ಗುರುಗ್ರಾಮದ 17 ವರ್ಷದ ವಿದ್ಯಾರ್ಥಿ ಅಕ್ಷಿತ್ ಖೇರಾ ಅವರು ಸುಮಾರು ₹1 ಲಕ್ಷ ವೆಚ್ಚದಲ್ಲಿ ಸೌರಶಕ್ತಿ ನೆರವಿನ ತ್ರಿಚಕ್ರ ವಾಹನ ನಿರ್ಮಿಸಿ ಗಮನ ಸೆಳೆದಿದ್ದಾರೆ.

ಹೆರಿಟೇಜ್ ಇಂಟರ್‌ನ್ಯಾಷನಲ್ ಎಕ್ಸ್‌ಪೀರಿಯೆನ್ಶಿಯಲ್ ಶಾಲೆಯ ವಿದ್ಯಾರ್ಥಿಯಾಗಿರುವ ಅಕ್ಷಿತ್, ಕಡಿಮೆ ಮತ್ತು ಮಧ್ಯಮ ಆದಾಯದ ಕುಟುಂಬಗಳಿಗೆ ಕೈಗೆಟುಕುವ ಸಾರಿಗೆ ಒದಗಿಸುವ ಉದ್ದೇಶದಿಂದ ಈ ವಾಹನವನ್ನು ವಿನ್ಯಾಸಗೊಳಿಸಿದ್ದಾರೆ. ಎರಡು ಆಸನಗಳು, ಕಾರ್ಗೋ ಬಾಕ್ಸ್, ಹವಾಮಾನ ನಿರೋಧಕ ಕ್ಯಾಬಿನ್ ಹಾಗೂ 400 ವ್ಯಾಟ್ ಸೌರ ಫಲಕವನ್ನು ಹೊಂದಿರುವ ವಾಹನದ ನಿರ್ಮಾಣ ವೆಚ್ಚ ₹1,02,536 ಆಗಿದೆ.

ವಾಹನವು ಒಂದೇ ಚಾರ್ಜ್‌ನಲ್ಲಿ ಕನಿಷ್ಠ 50 ಕಿ.ಮೀ. ಸಂಚರಿಸಬಲ್ಲದು. ಸೌರಶಕ್ತಿಯ ನೆರವಿನಿಂದ ಅದರ ದೈನಂದಿನ ವಿದ್ಯುತ್ ಅಗತ್ಯದ ಸರಾಸರಿ ಶೇ.63ರಷ್ಟು ಪೂರೈಸಬಹುದು ಎಂದು ಅಕ್ಷಿತ್ ಲೆಕ್ಕಾಚಾರ ಹಾಕಿದ್ದಾರೆ. ಇದರ ಪರಿಣಾಮವಾಗಿ ಪ್ರತಿ ಕಿ.ಮೀ.ಗೆ ಚಾಲನಾ ವೆಚ್ಚ ಸುಮಾರು 13 ಪೈಸೆ ಎಂದು ಅಂದಾಜಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಯೋಜನೆಗೆ ಪ್ರೇರಣೆ ದೊರೆತದ್ದು ಗುರುಗ್ರಾಮ್‌ಗೆ ವಲಸೆ ಬಂದಿದ್ದ ಮನೆಯ ಸಹಾಯಕನ ಕುಟುಂಬದೊಂದಿಗೆ ನಡೆದ ಮಾತುಕತೆಯಿಂದ. ದುಬಾರಿ ಸ್ಥಳೀಯ ಸಾರಿಗೆ ಮತ್ತು ಸರಕು ಸಾಗಣೆಯ ಸಮಸ್ಯೆಗಳನ್ನು ಗಮನಿಸಿದ ಅಕ್ಷಿತ್, ಪ್ರಯಾಣಿಕರು ಹಾಗೂ ಸರಕು ಸಾಗಣೆ ಎರಡಕ್ಕೂ ಬಳಸಬಹುದಾದ ಕಡಿಮೆ ವೆಚ್ಚದ ವಾಹನ ನಿರ್ಮಿಸಲು ಮುಂದಾದರು.

ಆರಂಭದಲ್ಲಿ ವಾಹನದ ಅಂದಾಜು ವೆಚ್ಚ ₹1.35 ಲಕ್ಷದಷ್ಟಿತ್ತು. ವೆಚ್ಚ ಕಡಿಮೆ ಮಾಡಲು ಬ್ಯಾಟರಿ ಸಾಮರ್ಥ್ಯವನ್ನು 5.38 kWhನಿಂದ 3.072 kWhಗೆ ಇಳಿಸಿ, ಅಗತ್ಯವಿರುವ ಸ್ಥಳಗಳಲ್ಲಿ ಮಾತ್ರ ಭಾರವಾದ ಉಕ್ಕಿನ ಟ್ಯೂಬ್‌ಗಳನ್ನು ಬಳಸಿದರು. ದೆಹಲಿಯ ಮಾಯಾಪುರಿ ಮಾರುಕಟ್ಟೆಯಲ್ಲಿ ವಿವಿಧ ಬಿಡಿಭಾಗಗಳ ಬೆಲೆಗಳನ್ನು ಹೋಲಿಕೆ ಮಾಡಿ ಖರೀದಿಸುವ ಮೂಲಕ ₹17 ಸಾವಿರಕ್ಕೂ ಹೆಚ್ಚು ಉಳಿತಾಯ ಮಾಡಿದ್ದಾರೆ.

ವಾಹನ ನಿರ್ಮಾಣಕ್ಕೂ ಅಕ್ಷಿತ್‌ಗೆ ಹಲವು ಸವಾಲುಗಳು ಎದುರಾದವು. ಗುರುಗ್ರಾಮ್, ದೆಹಲಿ ಮತ್ತು ಫರಿದಾಬಾದ್‌ನ ಒಂದು ಡಜನ್‌ಗೂ ಹೆಚ್ಚು ಕಾರ್ಯಾಗಾರಗಳು ಯೋಜನೆಯನ್ನು ಕೈಗೆತ್ತಿಕೊಳ್ಳಲು ನಿರಾಕರಿಸಿದ ಬಳಿಕ, ಕೊನೆಗೆ ಅರುಣ್ ಎಂಬ ಕಾರ್ಯಾಗಾರ ಮಾಲೀಕರು ವಾಹನ ನಿರ್ಮಾಣಕ್ಕೆ ನೆರವಾದರು. ಸೌರ ಫಲಕದ ಗಾತ್ರ, ಚಾರ್ಜಿಂಗ್ ವ್ಯವಸ್ಥೆ ಹಾಗೂ ಮಳೆಗಾಲದಲ್ಲಿ ಕಾರ್ಗೋ ಬಾಕ್ಸ್‌ನ ಬಾಳಿಕೆ ಸೇರಿದಂತೆ ಹಲವು ತಾಂತ್ರಿಕ ಸಮಸ್ಯೆಗಳನ್ನು ಅಕ್ಷಿತ್ ಸ್ವತಃ ಪರಿಹರಿಸಿದ್ದಾರೆ.

ವಾಹನದ ಆರಂಭಿಕ ಪರೀಕ್ಷೆ ಈಗಾಗಲೇ ಆರಂಭವಾಗಿದ್ದು, ವಿವಿಧ ಹವಾಮಾನ ಮತ್ತು ಸೂರ್ಯನ ಬೆಳಕಿನ ಪರಿಸ್ಥಿತಿಗಳಲ್ಲಿ ಇದರ ಕಾರ್ಯಕ್ಷಮತೆಯನ್ನು ಇನ್ನಷ್ಟು ಪರೀಕ್ಷಿಸುವ ಅಗತ್ಯವಿದೆ ಎಂದು ಅಕ್ಷಿತ್ ಹೇಳಿದ್ದಾರೆ. ದೊಡ್ಡ ಪ್ರಮಾಣದಲ್ಲಿ ಉತ್ಪಾದನೆ ಮಾಡಿದರೆ ವೆಚ್ಚವನ್ನು ಶೇ.10ರಿಂದ 20ರವರೆಗೆ ಮತ್ತಷ್ಟು ಕಡಿಮೆ ಮಾಡಬಹುದು ಎಂಬ ವಿಶ್ವಾಸವೂ ಅವರಿಗಿದೆ.

ಮುಂದಿನ ಹಂತದಲ್ಲಿ ಸುರಕ್ಷತಾ ಪರೀಕ್ಷೆ, ಪ್ರಮಾಣೀಕರಣ, ಬಾಳಿಕೆ ಪರೀಕ್ಷೆ ಹಾಗೂ ವಿಶ್ವಾಸಾರ್ಹ ಸೇವಾ ಜಾಲಕ್ಕಾಗಿ ಆಟೋಮೊಬೈಲ್ ಕಂಪನಿಗಳೊಂದಿಗೆ ಪಾಲುದಾರಿಕೆ ಸಾಧಿಸುವ ಗುರಿಯನ್ನು ಅಕ್ಷಿತ್ ಹೊಂದಿದ್ದಾರೆ. ಆದರೆ ವಾಹನದ ಮೂಲ ಉದ್ದೇಶವಾದ ಕೈಗೆಟುಕುವ ಬೆಲೆ ಯಾವುದೇ ಕಾರಣಕ್ಕೂ ಬದಲಾಗಬಾರದು ಎಂಬುದು ಅವರ ಆಶಯ.

17ನೇ ವಯಸ್ಸಿನಲ್ಲೇ ಕುತೂಹಲ, ಗಣಿತ-ಭೌತಶಾಸ್ತ್ರದ ಜ್ಞಾನ ಮತ್ತು ನಿರಂತರ ಪ್ರಯೋಗದ ಮೂಲಕ ಕಾರ್ಯನಿರ್ವಹಿಸುವ ವಾಹನ ರೂಪಿಸಿರುವ ಅಕ್ಷಿತ್, ಭವಿಷ್ಯದಲ್ಲಿ ಹಗುರವಾದ ಸೌರ ಕೋಶಗಳು, ಸುಧಾರಿತ ವಸ್ತುಗಳು, ಬದಲಾಯಿಸಬಹುದಾದ ಬ್ಯಾಟರಿಗಳು ಮತ್ತು ಹಂಚಿಕೆಯ ಸೌರ ಚಾರ್ಜಿಂಗ್ ವ್ಯವಸ್ಥೆಗಳ ಅಭಿವೃದ್ಧಿಯತ್ತ ಗಮನ ಹರಿಸುವುದಾಗಿ ಹೇಳಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular