ನವದೆಹಲಿ: ನೀಟ್ ಪರೀಕ್ಷಾ ಅಕ್ರಮ ಖಂಡಿಸಿ ನಡೆಸಿದ್ದ ಪ್ರತಿಭಟನೆಯ ವೇಳೆ ವಿದ್ಯಾರ್ಥಿಗಳ ಮೇಲೆ ಪೊಲೀಸರ ದೌರ್ಜನ್ಯ ವಿಚಾರ ಇಂದು ಸಂಸತ್ ಕಲಾಪದಲ್ಲಿ ಪ್ರತಿಧ್ವನಿಸಿದೆ.
ಲೋಕಸಭೆ ಹಾಗೂ ರಾಜ್ಯಸಭೆ ಕಲಾಪ ಆರಂಭವಾಗುತ್ತಿದ್ದಂತೆ ಉಭಯಸದನಗಳಲ್ಲಿ ವಿಪಕ್ಷ ಸದಸ್ಯರು ವಿದ್ಯಾರ್ಥಿಗಳ ಮೇಲಿನ ಲಾಠಿಚಾರ್ಜ್, ಪೆಲೆಟ್ ಗಲ್ ದಾಳಿ, ಅಶ್ರುವಾಯು ಪ್ರಯೋಗದ ಬಗ್ಗೆ ಪ್ರಸ್ತಾಪಿಸಿ, ಈ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಉತ್ತರ ನೀಡುವಂತೆ ಆಗ್ರಹಿಸಿದರು.
ಮಕ್ಕಳ ಮೇಲಿನ ಲಾಠಿಚಾರ್ಜ್ ಖಂಡನೀಯವಾಗಿದ್ದು, ಗೃಹ ಸಚಿವರು ಈ ಬಗ್ಗೆ ಸದನದಲ್ಲಿ ಉತ್ತರಿಸಬೇಕು ಎಂದು ವಿಪಕ್ಷಗಳು ಬಿಹಿಪಟ್ಟು ಹಿಡಿದವು. ಗೃಹ ಸಚಿವರು ಉತ್ತರಿಸದಿದ್ದಾಗ ಕೇಂದ್ರ ಸರ್ಕಾರ ಹಾಗೂ ಗೃಹ ಸಚಿವರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಲೋಕಸಭೆಯಲ್ಲಿ ಗದ್ದಲ-ಕೋಲಾಹಲ ಹೆಚ್ಚಾಗುತ್ತಿದ್ದಂತೆ ಲೋಕಸಭಾ ಸ್ಪೀಕರ್ ಓಂ ಬಿರ್ಲಾ, ಕಲಾಪವನ್ನು ಕೆಲ ಕಾಲ ಮುಂದೂಡಿದರು.

