ಕೋಲಾರ : ಕೋಲಾರ ಜಿಲ್ಲೆಯ ಮಾಲೂರು ಪಟ್ಟಣದಲ್ಲಿ ಆಟವಾಡುತ್ತಿದ್ದ ಎರಡು ವರ್ಷದ ಮಗುವೊಂದು ಬೆಟ್ಟದ ನಲ್ಲಿಕಾಯಿಯನ್ನು ನುಂಗಿ, ಅದು ಗಂಟಲಿನಲ್ಲಿ ಸಿಲುಕಿ ಉಸಿರುಗಟ್ಟಿ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ನಡೆದಿದೆ. ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆಯೇ ಮಗು ಕೊನೆಯುಸಿರೆಳೆದಿದ್ದು, ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ಮಾಲೂರು ಪಟ್ಟಣದಲ್ಲಿ ಸೊಪ್ಪು ವ್ಯಾಪಾರ ಮಾಡಿಕೊಂಡಿರುವ ಮಾಲಾ ಮತ್ತು ರವಿ ದಂಪತಿಯ ಎರಡು ವರ್ಷದ ಮಗ ವಿಜಯೇಂದ್ರ ಮೃತಪಟ್ಟ ದುರ್ದೈವಿ.
ಘಟನೆ ಹಿನ್ನೆಲೆ: ತಾಯಿ ಮಾಲಾ ಅವರು ಮನೆಯಲ್ಲಿ ಜ್ಯೂಸ್ ಮಾಡಲು ಬೆಟ್ಟದ ನಲ್ಲಿಕಾಯಿಯನ್ನು ತಂದಿಟ್ಟಿದ್ದರು. ಮನೆಯಲ್ಲಿ ಆಟವಾಡುತ್ತಿದ್ದ ಮಗು ವಿಜಯೇಂದ್ರ, ಯಾರಿಗೂ ತಿಳಿಯದಂತೆ ನಲ್ಲಿಕಾಯಿಯನ್ನು ಬಾಯಿಗೆ ಹಾಕಿಕೊಂಡು ನುಂಗಿದ್ದಾನೆ. ಅದು ಗಂಟಲಿನಲ್ಲಿ ಸಿಲುಕಿಕೊಳ್ಳುತ್ತಿದ್ದಂತೆ ಮಗುವಿಗೆ ತೀವ್ರ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದೆ.
ಮಗು ಒದ್ದಾಡುವುದನ್ನು ಕಂಡ ಪೋಷಕರು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ಧಾವಿಸಿದ್ದಾರೆ. ಬಳಿಕ ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ತಾಲೂಕು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯದಲ್ಲೇ ಮಗು ಸಾವನ್ನಪ್ಪಿದೆ. ನಂತರ ತಾಲೂಕು ಆಸ್ಪತ್ರೆಯ ವೈದ್ಯರು ಮಗುವಿನ ಗಂಟಲಿನಲ್ಲಿ ಸಿಲುಕಿದ್ದ ಬೆಟ್ಟದ ನೆಲ್ಲಿಕಾಯಿಯನ್ನು ಹೊರತೆಗೆದಿದ್ದಾರೆ. ಈ ಘಟನೆ ಕೋಲಾರ ಜಿಲ್ಲೆಯ ಮಾಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದೆ.

