ಬೆಳಗಾವಿ : ಸುಮಾರು 4,500 ಕೋಟಿ ರೂಪಾಯಿ ವಂಚನೆ ಆರೋಪ ಎದುರಿಸುತ್ತಿರುವ ಶಿವಾನಂದ ನೀಲಣ್ಣವರ್ ಅವರನ್ನು 10 ದಿನಗಳ ಕಾಲ ಸಿಐಡಿ ಕಸ್ಟಡಿಗೆ ನೀಡಿ ಬೆಳಗಾವಿಯ 2ನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಆದೇಶ ಹೊರಡಿಸಿದೆ.
ಶಿವಾನಂದ ನೀಲಣ್ಣವರ್ ಅವರ ಬಳಿ ಸುಮಾರು 35,000 ಜನರು ಹೂಡಿಕೆ ಮಾಡಿದ್ದು, ಒಂದು ಸಾವಿರ ಕೋಟಿಗೂ ಅಧಿಕ ಹಣದ ವ್ಯವಹಾರ ನಡೆದಿದೆ ಎಂದು ಸಿಐಡಿ ಅಧಿಕಾರಿಗಳು ಕೋರ್ಟ್‌ಗೆ ತಿಳಿಸಿದ್ದಾರೆ.: ಆರೋಪಿಯನ್ನು ಬೆಂಗಳೂರಿನ ಕಚೇರಿಗೆ ಕರೆದೊಯ್ದು ಹೆಚ್ಚಿನ ವಿಚಾರಣೆ ನಡೆಸಬೇಕಾಗಿರುವುದರಿಂದ 10 ದಿನಗಳ ಕಾಲ ಕಸ್ಟಡಿಗೆ ನೀಡುವಂತೆ ಸಿಐಡಿ ಪರ ವಕೀಲರು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಸಿಐಡಿ ವಕೀಲರ ಮನವಿಯನ್ನು ಪುರಸ್ಕರಿಸಿದ ನ್ಯಾಯಾಧೀಶರಾದ ಗಂಗಾಧರ ಅವರು ಈ ಆದೇಶ ನೀಡಿದ್ದಾರೆ.
ನ್ಯಾಯಾಧೀಶರ ಕಿವಿಮಾತು: ವಿಚಾರಣೆ ವೇಳೆ ತನಗೆ ಬಿಪಿ (ರಕ್ತದೊತ್ತಡ) ಇರುವುದಾಗಿ ಆರೋಪಿ ಹೇಳಿಕೊಂಡಾಗ, ಸಂಬಂಧಪಟ್ಟ ವೈದ್ಯರಿಂದ ಮಾತ್ರೆ ಹಾಗೂ ಅಗತ್ಯ ವ್ಯವಸ್ಥೆ ಮಾಡಿಸಲಾಗುವುದು ಎಂದು ನ್ಯಾಯಾಧೀಶರು ತಿಳಿಸಿದರು. “ಜನರಿಗೆ ನಾನೇ ಬೇಕಾಗಿದ್ದೇನೆ, ಹಣ ಬೇಕಿಲ್ಲ” ಎಂದು ನೀಲಣ್ಣವರ್ ಹೇಳಿದಾಗ ಮಧ್ಯಪ್ರವೇಶಿಸಿದ ನ್ಯಾಯಾಧೀಶರು, “ಅಮಾಯಕರಿಗೆ ಅನ್ಯಾಯ ಆಗಬಾರದು. ಸರ್ಕಾರ ಜನರ ತಂದೆ-ತಾಯಿ ಇದ್ದಂತೆ, ಅವರನ್ನು ರಕ್ಷಿಸುವುದು ಸರ್ಕಾರದ ಜವಾಬ್ದಾರಿ” ಎಂದು ಹೇಳಿ, ‘ಧರ್ಮೋ ರಕ್ಷತಿ ರಕ್ಷಿತಃ’ ಶ್ಲೋಕವನ್ನು ಉದಾಹರಿಸಿದರು.
ಕಣ್ಣೀರಿಟ್ಟ ಆರೋಪಿ: ನ್ಯಾಯಾಲಯವು 10 ದಿನಗಳ ಸಿಐಡಿ ಕಸ್ಟಡಿಗೆ ಆದೇಶಿಸುತ್ತಿದ್ದಂತೆ, ಕೋರ್ಟ್ ಹಾಲ್‌ನಿಂದ ಹೊರಬರುವಾಗ ತನ್ನ ಸಹೋದರನನ್ನು ಕಂಡು ಶಿವಾನಂದ ನೀಲಣ್ಣವರ್ ಕಣ್ಣೀರಿಟ್ಟ ಪ್ರಸಂಗವೂ ನಡೆಯಿತು. ಆರೋಪಿಯ ಭದ್ರತೆ ಹಾಗೂ ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ ನ್ಯಾಯಾಲಯವು ಅಧಿಕಾರಿಗಳಿಗೆ ಸೂಚನೆ ನೀಡಿದೆ.

