ತುಮಕೂರು: ರಾಜ್ಯ ಕಾಂಗ್ರೆಸ್ ನಲ್ಲಿ ಮುಖ್ಯಮಂತ್ರಿ ಬದಲಾವಣೆ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ರಾಜೀನಾಮೆ ಬಳಿಕ ಡಿ.ಕೆ.ಶಿವಕುಮಾರ್ ಮುಖ್ಯಮಮ್ತ್ರಿಯಾಗಿ ಆಯ್ಕೆಯಾಗಿದ್ದಾರೆ. ಸಿಎಂ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಜಿ.ಪರಮೇಶ್ವರ್ ಅವರಿಗೆ ಕೊಂಚ ನಿರಾಸೆಯಾಗಿದೆ. ಸಿಎಂ ಸ್ಥಾನ ಕೈತಪ್ಪಿರುವುದಕ್ಕೆ ಅವರ ಅಭಿಮಾನಿಗಳಲ್ಲಿ ತೀವ್ರ ಅಸಮಾಧಾನ ಮೂಡಿದೆ. ಇತ್ತೀಚೆಗಷ್ಟೇ ಪರಮೇಶ್ವರ್ ಅವರನ್ನು ಮಹಾಭಾರತದ ‘ಕರ್ಣ’ನಿಗೆ ಹೋಲಿಸಿ ವಿಡಿಯೋ ಮಾಡಿದ್ದ ಅಭಿಮಾನಿಗಳು, ಈಗ ಅವರ ಹಳೆಯ ವಿಡಿಯೋವನ್ನು ವೈರಲ್ ಮಾಡಿದ್ದಾರೆ.
ಎಷ್ಟು ಬಾರಿ ಅಂತ ತುಳಿಸಿಕೊಳ್ಳಬೇಕು? ಎಂದು ಮಾರ್ಮಿಕವಾಗಿ ಹೇಳಿರುವ ಪರಮೇಶ್ವರ್ ಅವರ ವಿಡಿಯೋ ಸಾಮಾಜಿಕ ಜಾಲಾತಾಣಗಾಲ್ಲಿ ಭಾರಿ ವೈರಲ್ ಆಗಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ ಪರಮೇಶ್ವರ್ ಅವರು ಸಮುದಾಯದ ಹೋರಾಟ ಹಾಗೂ ರಾಜಕೀಯ ಅನ್ಯಾಯದ ಕುರಿತು ಅತ್ಯಂತ ಬೇಸರದಿಂದ ಮಾತನಾಡಿದ್ದಾರೆ. ‘ತುಳಿತಾರೆ, ತುಳಿಸಿಕೊಳ್ಳಬೇಕು. ಆದರೆ ಎಷ್ಟು ಬಾರಿ ಅಂತ ತುಳಿಸಿಕೊಳ್ಳಬೇಕು? ನಮ್ಮ ಹಿರಿಯಣ್ಣ ಮಲ್ಲಿಕಾರ್ಜುನ ಖರ್ಗೆ ಅವರು ಒಂದು ಕಾಲು ಎತ್ತಿ ಇಟ್ಟಿದ್ದರೆ ಮುಖ್ಯಮಂತ್ರಿ ಆಗುತ್ತಿದ್ದರು ರೀ. ಆದರೆ ಅವರು ತಪ್ಪಿಸಿಕೊಂಡರು. ಇನ್ನು ನನಗೆ ಮೂರು ಬಾರಿ ಮುಖ್ಯಮಂತ್ರಿ ಸ್ಥಾನ ತಪ್ಪಿ ಹೋಯಿತು. ಅಪ್ಪಾ! ಹಂಗೂ ಹಿಂಗೂ ಹೆಂಗೋ ಮಾಡಿಕೊಂಡು, ಕೊನೆಗೆ ಬೇಡ ಬೇಡ ಅಂದರೂ ನನ್ನನ್ನು ಉಪಮುಖ್ಯಮಂತ್ರಿ ಮಾಡಿದರು. ಆದರೆ ಇಂತಹ ಸ್ಥಿತಿಯನ್ನು ಎದುರಿಸಲು ಹೋರಾಟ ಎನ್ನುವುದು ನಿಮ್ಮಲ್ಲಿ ಪ್ರತಿಯೊಬ್ಬನಿಗೂ ಬರಬೇಕು’ ಎಂದು ಪರಮೇಶ್ವರ್ ಭಾಷಣ ಮಾಡುತ್ತಿರುವುದು ವಿಡಿಯೋದಲ್ಲಿವೆ.
ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಹಿನ್ನೆಲೆಯಲ್ಲಿ ಡಿ.ಕೆ ಶಿವಕುಮಾರ್ ಸಿಎಂ ಆಗುತ್ತಿರುವ ಸಂದರ್ಭದಲ್ಲೇ, ಪರಮೇಶ್ವರ್ ಅವರ ಈ ಹೇಳಿಕೆಯ ವಿಡಿಯೋ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

