ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ವಾಹನ ದಟ್ಟಣೆ ಹಾಗೂ ವಾಯು ಮಾಲಿನ್ಯಕ್ಕೆ ಬ್ರೇಕ್ ಹಾಕಲು ‘ಗ್ರೇಟರ್ ಬೆಂಗಳೂರು ಅಥಾರಿಟಿ’ (GBA) ವಿಶಿಷ್ಟ ಪರಿಸರಸ್ನೇಹಿ ಅಭಿಯಾನಕ್ಕೆ ಚಾಲನೆ ನೀಡಿದೆ. ಜೂನ್ ತಿಂಗಳ ಪೂರ್ತಿ ನಡೆಯಲಿರುವ ಈ ಅಭಿಯಾನಕ್ಕೆ 1KmChallenge (ಒಂದು ಕಿಲೋಮೀಟರ್ ಚಾಲೆಂಜ್) ಎಂದು ಹೆಸರಿಡಲಾಗಿದ್ದು, 1 ಕಿಲೋಮೀಟರ್ ವ್ಯಾಪ್ತಿಯ ಸಂಚಾರಕ್ಕೆ ವಾಹನ ಬಳಸಬೇಡಿ, ನಡೆದುಕೊಂಡು ಹೋಗಿ ಎಂದು ಜಿಬಿಎ ಜನರಲ್ಲಿ ಮನವಿ ಮಾಡಿದೆ.
ಜಿಬಿಎ ಹವಾಮಾನ ಕ್ರಿಯಾ ಕೋಶ ಈ ನೂತನ ಅಭಿಯಾನವನ್ನು ಆರಂಭಿಸಿದೆ. ನಗರದಲ್ಲಿ ಜನರು ಕೇವಲ ಅರ್ಧ ಅಥವಾ ಒಂದು ಕಿಲೋಮೀಟರ್ ದೂರದ ಅಂಗಡಿ, ಕಚೇರಿ ಅಥವಾ ಮೆಟ್ರೋ ನಿಲ್ದಾಣಗಳಿಗೆ ಹೋಗಲು ಸಹ ಬೈಕ್ ಅಥವಾ ಕಾರುಗಳನ್ನು ಅವಲಂಬಿಸುತ್ತಿದ್ದಾರೆ. ಇದರಿಂದ ಟ್ರಾಫಿಕ್ ಜಾಮ್ ಹಾಗೂ ಮಾಲಿನ್ಯ ಹೆಚ್ಚುತ್ತಿದೆ. ಇದನ್ನು ತಪ್ಪಿಸಲು, 1 ಕಿಲೋಮೀಟರ್ ಒಳಗಿನ ದೂರಕ್ಕೆ ಕನಿಷ್ಠ 10 ನಿಮಿಷಗಳ ಕಾಲ ಕಾಲಿಗೆ ಕೆಲಸಕೊಡುವಂತೆ ನಾಗರಿಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.
ಅಭಿಯಾನದ ಉದ್ದೇಶ:
ವಾಹನಗಳ ಬಳಕೆ ಕಡಿಮೆ ಮಾಡಿ ಮಾಲಿನ್ಯ ಮುಕ್ತ ಪರಿಸರ ನಿರ್ಮಿಸುವುದು.
ದೈನಂದಿನ ನಡಿಗೆಯಿಂದ ಜಡ ಜೀವನಶೈಲಿ ಬದಲಾಯಿಸಿ ದೈಹಿಕ ಆರೋಗ್ಯ ಸುಧಾರಿಸುವುದು.
ರಸ್ತೆಗಳ ಮೇಲಿನ ವಾಹನಗಳ ದಟ್ಟಣೆಯನ್ನು ಗಣನೀಯವಾಗಿ ತಗ್ಗಿಸುವುದು.
ಜಿಬಿಎ ಸಂಸ್ಥೆಯು ಜೂನ್ ತಿಂಗಳ ಈ ಸವಾಲನ್ನು ಸ್ವೀಕರಿಸಿ, ತಮ್ಮ ಸ್ನೇಹಿತರು ಹಾಗೂ ಕುಟುಂಬದವರಿಗೂ ಸವಾಲು ಹಾಕುವಂತೆ ಬೆಂಗಳೂರಿಗರಲ್ಲಿ ವಿನಂತಿಸಿದೆ. ಆದರೆ, ಈ ಅಭಿಯಾನ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಅಭಿಯಾನದ ಆಶಯವನ್ನು ಒಪ್ಪಿಕೊಂಡರೂ, ಬೆಂಗಳೂರಿನ ರಸ್ತೆಗಳ ಸ್ಥಿತಿ ಸಾಅರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ. ನಗರದ ಬಹುತೇಕ ಕಡೆಗಳಲ್ಲಿ ಫುಟ್ಪಾತ್ಗಳು ಧ್ವಂಸವಾಗಿವೆ. ಕಸದ ರಾಶಿ ಬಿದ್ದಿದೆ. ಅಲ್ಲದೆ ತೆರೆದ ಚರಂಡಿಗಳು ಮತ್ತು ರಸ್ತೆ ತುಂಬಾ ಇರುವ ಗುಂಡಿಗಳಿಂದಾಗಿ ಜೀವ ಕೈಯಲ್ಲಿ ಹಿಡಿದು ಓದಾಡಬೇಕಾದ ಪರಿಸ್ಥಿತಿ ಇದೆ. ಹೀಗಿರುವಾಗ ನಡೆಯುವುದದಾರೂ ಹೇಗೆ ಸುರಕ್ಷಿತ? ಎಂದು ಪ್ರಶ್ನಿಸಿದ್ದಾರೆ.
ಮೊದಲು ಪಾದಚಾರಿಗಳಿಗೆ ಸುರಕ್ಷಿತ, ವಿಶಾಲವಾದ ಮತ್ತು ನಿರಂತರವಾದ ಫುಟ್ಪಾತ್ಗಳನ್ನು ನಿರ್ಮಿಸಿಕೊಡಿ, ಆಮೇಲೆ ಇಂತಹ ಅಭಿಯಾನಗಳನ್ನು ಮಾಡಿ ಎಂದು ನಾಗರಿಕರು ಜಿಬಿಎ ಮತ್ತು ಬಿಬಿಎಂಪಿ ಅಧಿಕಾರಿಗಳಿಗೆ ಖಡಕ್ ಆಗಿ ಹೇಳಿದ್ದಾರೆ.

