ನವದೆಹಲಿ: ಅಂದುಕೊಂಡಂತೆ ಆಗಿದ್ದರೆ ಭಾರತ ಮಹಿಳಾ ಕ್ರಿಕೆಟ್ ತಂಡದ ಉಪನಾಯಕಿ ಸ್ಮೃತಿ ಮಂದಾನಾ ಹಾಗೂ ಪಲಾಶ್ ಮುಚ್ಚಲ್ ವಿವಾಹ ನವೆಂಬರ್ 23, 2025ರಂದು ಆಗಬೇಕಿತ್ತು. ಆದರೆ ಸ್ಮೃತಿ ಮಂದಾನ ಅವರ ತಂದೆಯವರ ಅನಾರೋಗ್ಯದಿಂದಾಗಿ ಮುಂದೂಡಲಾಗಿದ್ದ ಮದುವೆ ಬಳಿಕ ಎರಡೂ ಕುಟುಂಬಗಳು ಮದುವೆಯನ್ನೇ ರದ್ದುಗೊಳಿಸಿದ್ದರು. ಕೆಲ ದಿನಗಳ ಬಳಿಕ ಸ್ಮೃತಿ ಮಂದಾನ ತಮ್ಮ ಮದುವೆ ಮುರಿದು ಬಿದ್ದಿದೆ ಎಂದು ಹೇಳುವ ಮೂಲಕ ಮದುವೆ ರದ್ದಾಗಿದ್ದಾಗಿ ಸ್ಪಷ್ಟಪಡಿಸಿದ್ದರು.
ಈಗ ಸ್ಮೃತಿ ಮಂದಾನ ಬಾಲ್ಯದ ಗೆಳೆಯ, ನಟ-ನಿರ್ಮಾಪಕ ವಿದ್ಯಾನ್ ಮಾನೆ ಪಲಾಶ್ ಮುಚ್ಚಲ್ ಬಗ್ಗೆ ಶಾಕಿಂಗ್ ಮಾಹಿತಿ ಬಹಿರಂಗಗೊಳಿಸಿದ್ದಾರೆ. ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಅಂದು ಮದುವೆ ಕಾರ್ಯಕ್ರಮದ ದಿನವೇ ಪಲಾಶ್ ಮುಚ್ಚಲ್ ಬೇರೊಂದು ಯುವತಿಯೊಂದಿಗೆ ಹಾಸಿಗೆಯಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದರು. ಈ ವೇಳೆ ಅಲ್ಲಿದ್ದ ಟೀಂ ಂಡಿಯಾ ಆಟಗಾರ್ತಿಯರು ಪಲಾಶ್ ನನ್ನು ಹಿಡಿದು ಥಳಿಸಿದರು. ಹೀಗಾಗಿ ಮದುವೆ ರದ್ದಾಯಿತು ಎಂದು ವಿದ್ಯಾನ್ ಮಾನೆ ತಿಳುಸಿದ್ದಾರೆ. ಆದರೆ ಪಲಾಶ್ ಮುಚ್ಚಲ್ ಪರ ವಕೀಲರು ಈ ಆರೋಪ ತಳ್ಳಿಹಾಕಿದ್ದಾರೆ.
ಅಂತಹ ಘಟನೆ ನಡೆದಿಲ್ಲ. ಇದು ಸತ್ಯಕ್ಕೆ ದೂರವಾದ ಆರೋಪ. ದುರುದ್ದೇಶದಿಂದ ಇಂತಹ ಆರೋಪ ಮಾಡಲಾಗುತ್ತಿದೆ. ಪಲಾಶ್ ಮುಚ್ಚಲ್ ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ ಎಂದಿದ್ದಾರೆ.
ಇನ್ನೊಂದೆಡೆ ಪಲಾಶ್ ಮುಚ್ಚಲ್ ವಿರುದ್ಧ ವಿದ್ಯಾನ್ ಮಾನೆ 40 ಲಕ್ಷ ವಂಚನೆ ಆರೋಪದಲ್ಲಿ ಸಾಂಗ್ಲಿ ಪೊಲೀಸರಿಗೆ ದೂರು ನೀಡಿದ್ದಾರೆ. ಆದರೆ ಈ ಪ್ರಕರಣಕ್ಕೂ ಮದುವೆ ರದ್ದಾಗಿದ್ದಕ್ಕೂ ಯಾವುದೇ ಸಂಬಂಧವಿಲ್ಲ ಎನ್ನಲಾಗಿದೆ.

