HomeKarnatakaನಿವೇಶನ ಖರೀದಿದಾರರಿಗೆ ಕ್ರಯಪತ್ರ ಮಾಡಿಕೊಡದ ಡೆವಲಪರ್ಸ್ ಗೆ ಬಡ್ಡಿ ಸಹಿತ ಹಣ ಮರುಪಾವತಿಸಲು ಆದೇಶ

ನಿವೇಶನ ಖರೀದಿದಾರರಿಗೆ ಕ್ರಯಪತ್ರ ಮಾಡಿಕೊಡದ ಡೆವಲಪರ್ಸ್ ಗೆ ಬಡ್ಡಿ ಸಹಿತ ಹಣ ಮರುಪಾವತಿಸಲು ಆದೇಶ

ಶಿವಮೊಗ್ಗ: ನಿವೇಶನ ಖರೀದಿದಾರರಿಗೆ ಕ್ರಯಪತ್ರ ಮಾಡಿಕೊಡದ ಡೆವಲಪರ್ಸ್ ಗೆ ಬಡ್ಡಿ ಸಹಿತ ಹಣ ಮರು ಪಾವತಿಸಲು ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು ಆದೇಶ ನೀಡಿದೆ.

ಶಿವಮೊಗ್ಗ ವಿನೋಬನಗರ ನಿವಾಸಿ ವೆಂಕಟಲಕ್ಷ್ಮೀ ಎಂಬುವವರು ಬೆಂಗಳೂರಿನ ಶ್ರೀ ಧಾತ್ರಿ ಡೆವಲಪರ್ಸ್ ಮತ್ತು ಪ್ರಮೋಟರ್ಸ್ ಪಾಲುದಾರರಾದ ಸೌಮಿ ಮಂಜುನಾಥ ಹಾಗೂ ಮಂಜುನಾಥ ಬಿ. ಎಂಬುವವರ ಮೇಲೆ ನಿವೇಶನ ಖರೀದಿಸಲು ಹಣ ಪಾವತಿಸಿದ್ದು, ಕ್ರಯಪತ್ರ ಮಾಡಿಕೊಡದೇ ಸೇವಾನ್ಯೂನತೆ ಎಸಗಿದ್ದಾರೆಂದು ವಕೀಲರ ಮೂಲಕ ಸಲ್ಲಿಸಿದ ದೂರನ್ನು ಪರಿಶೀಲಿಸಿ, ಹಣವನ್ನು ಮರುಪಾವತಿ ಮಾಡುವಂತೆ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು ಆದೇಶ ನೀಡಿದೆ.

ದೂರುದಾರರು ಶ್ರೀ ಧಾತ್ರಿ ಡೆವಲಪರ್ಸ್ ಮತ್ತು ಪ್ರಮೋಟರ್ಸ್ ಮೂಲಕ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕು ಯಲಚಗೆರೆಯಲ್ಲಿ ರೂ. 5 ಲಕ್ಷಗಳಿಗೆ 40/20 ಅಳತೆಯ ನಿವೇಶನವನ್ನು ಖರೀದಿಸಿ ಕಂತಿನಲ್ಲಿ ಒಟ್ಟು ರೂ. 4.99 ಲಕ್ಷಗಳನ್ನು ಅ. 2024ರವರೆಗೆ ಪಾವತಿಸಿರುತ್ತಾರೆ. 6 ತಿಂಗಳೊಳಗೆ ಕ್ರಯಪತ್ರ ಮಾಡಿಕೊಡುತ್ತೇವೆಂದು ಹೇಳಿದ ಎದುರುದಾರರಿಗೆ ಹಲವಾರು ಬಾರಿ ಕೇಳಿದ್ದು, 2025ರಲ್ಲಿ ಲೀಗಲ್ ನೋಟಿಸ್ ನೀಡಿದರೂ ಯಾವುದೇ ಪ್ರತ್ಯುತ್ತರ ನೀಡದೇ ಸೇವಾ ನ್ಯೂನತೆ ಎಸಗಿದ್ದಾರೆಂದು ಆಯೋಗಕ್ಕೆ ದೂರು ಸಲ್ಲಿಸಿರುತ್ತಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ದೂರನ್ನು ದಾಖಲಿಸಿಕೊಂಡು ಆಯೋಗವು ಎದುರುದಾರರಿಗೆ ನೋಟಿಸ್ ನೀಡಿದ್ದು, ಎದುರುದಾರರ ಹಾಜರಾಗದೇ ಇರುವುದರಿಂದ ಏಕಪಕ್ಷೀಯವಾಗಿ ದೂರುದಾರರ ಸಲ್ಲಿಸಿರುವ ಪ್ರಮಾಣಪತ್ರ ಮತ್ತು ದಾಖಲೆಗಳನ್ನು ಪರಿಶೀಲಿಸಿ ವಾದವನ್ನು ಆಲಿಸಿ, ಎದುರುದಾರರು ದೂರುದಾರರಿಂದ ಹಣ ಪಡೆದು ಕ್ರಯಪತ್ರ ಮಾಡಿಕೊಡದೆ ಸೇವಾನ್ಯೂನತೆ ಎಸಗಿದ್ದಾರೆಂದು ತೀರ್ಮಾನಿಸಿ ದೂರನ್ನು ಭಾಗಶಃ ಪರಿಸ್ಕರಿಸಿದೆ.

ಎದುರುದಾರರು ದೂರುದಾರರಿಂದ ಪಡೆದು ಮೊತ್ತ ರೂ. 4.99 ಲಕ್ಷವನ್ನು ವಾರ್ಷಿಕ ಶೇ. 9 ರಂತೆ ದಿ: 02/04/2025 ರಿಂದ ಬಡ್ಡಿಯನ್ನು ಸೇರಿಸಿ ಈ ಆದೇಶವಾದ 45 ದಿನಗಳೊಳಗಾಗಿ ಪೂರ್ತಿ ಹಣ ಪಾವತಿಸುವುದು. ತಪ್ಪಿದ್ದಲ್ಲಿ, ವಾರ್ಷಿಕ ಶೇ. 12ರ ಬಡ್ಡಿಯನ್ನು ಸೇರಿಸಿ ಪೂರ್ತಿ ಹಣ ಪಾವತಿಸುವವರೆಗೆ ನೀಡುವುದು. ಹಾಗೂ ರೂ. 50,000 ಗಳನ್ನು ಮಾನಸಿಕ ಹಿಂಸೆ ಮತ್ತು ಅನಾನುಕೂಲತೆಗೆ ಪರಿಹಾರವಾಗಿ ಮತ್ತು ರೂ. 10,000 ಗಳನ್ನು ದೂರಿನ ಖರ್ಚುವೆಚ್ಚಕ್ಕಾಗಿ ಈ ಆದೇಶವಾದ 45 ದಿನಗಳೊಳಗಾಗಿ ಪಾವತಿಸುವುದು. ತಪ್ಪಿದ್ದಲ್ಲಿ ವಾರ್ಷಿಕ ಶೇ. 10 ರ ಬಡ್ಡಿಯನ್ನು ಸೇರಿಸಿ ಪೂರ್ತಿ ಹಣ ಪಾವತಿಸುವವರೆಗೆ ನೀಡಬೇಕೆಂದು ಆಯೋಗದ ಅಧ್ಯಕ್ಷರಾದ ಟಿ.ಶಿವಣ್ಣ ಮತ್ತು ಸದಸ್ಯರಾದ ಬಿ.ಡಿ.ಯೋಗಾನಂದ ಭಾಂಡ್ಯರವರನ್ನು ಒಳಗೊಂಡ ಪೀಠವು ಆದೇಶಿಸಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular