ಬೆಂಗಳೂರು: ಮಹಾರಾಷ್ಟ್ರದ ಪುಣೆಯ ಪಿಂಪ್ರಿ-ಚಿಂಚವಡ್‌ನಲ್ಲಿ ಅತ್ಯಂತ ಆಘಾತಕಾರಿ ಹಾಗೂ ಸಾರ್ವಜನಿಕ ವಲಯದಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿರುವ ಘಟನೆಯೊಂದು ಬೆಳಕಿಗೆ ಬಂದಿದೆ. ಇಲ್ಲಿನ ಐತಿಹಾಸಿಕ ಶ್ರೀ ಮೋರ್ಯ ಗೋಸಾವಿ ದೇವಸ್ಥಾನ ಸಂಕೀರ್ಣದ ಬಳಿ ನಡೆದ ವಾರ್ಷಿಕ ಸಂಕಷ್ಟಿ ಚತುರ್ಥಿ ಜಾತ್ರೆಯ ಸ್ಟಾಲ್ ಒಂದರಲ್ಲಿ ಖರೀದಿಸಿದ ಬೆಡ್‌ಶೀಟ್‌ನಲ್ಲಿ Made in Pakistan ಲೇಬಲ್ ಪತ್ತೆಯಾಗಿದೆ ಎಂದು ಸ್ಥಳೀಯ ಮಹಿಳೆಯೊಬ್ಬರು ಗಂಭೀರ ಆರೋಪ ಮಾಡಿದ್ದಾರೆ. ಮಹಿಳೆ ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ವಿಡಿಯೋ ಈಗ ಕಾಳ್ಗಿಚ್ಚಿನಂತೆ ವೈರಲ್ ಆಗುತ್ತಿದ್ದು, ಅಧಿಕೃತ ತನಿಖೆಗೆ ಆಡಳಿತ ಮಂಡಳಿ ಮುಂದಾಗಿದೆ.
ಬೆಡ್‌ಶೀಟ್ ಒಗೆಯುವಾಗ ಬಯಲಾಯ್ತು ಅಸಲಿ ಸತ್ಯ
ಮಹಿಳೆಯ ದೂರಿನ ಪ್ರಕಾರ, ಅವರು ಸಂಕಷ್ಟಿ ಚತುರ್ಥಿ ಹಬ್ಬದ ಸಂದರ್ಭದಲ್ಲಿ ಮೋರ್ಯ ಗೋಸಾವಿ ದೇವಸ್ಥಾನದ ಆವರಣದ ರಸ್ತೆಬದಿಯ ಮಾರಾಟಗಾರರಿಂದ ಬಳಸಲು ಬೆಡ್‌ಶೀಟ್ ಖರೀದಿಸಿದ್ದರು.
ಲಪಟಾಯಿಸಿದ ಲೇಬಲ್: ಖರೀದಿ ಸಮಯದಲ್ಲಿ ಆಕೆ ಅದರಲ್ಲಿ ಯಾವುದೇ ಅಸಾಮಾನ್ಯತೆಯನ್ನು ಗಮನಿಸಿರಲಿಲ್ಲ. ಆದರೆ, ಮನೆಗೆ ತೆಗೆದುಕೊಂಡು ಹೋಗಿ ಅದನ್ನು ಒಗೆದಿದ್ದು, ಆಗ ಅಚ್ಚರಿ ಎಂಬಂತೆ ಆ ಬಟ್ಟೆಗೆ ಜೋಡಿಸಲಾಗಿದ್ದ ಲೇಬಲ್ ಮೇಲೆ ಮೇಡ್ ಇನ್ ಪಾಕಿಸ್ತಾನ ಎಂಬ ಪದಗಳು ಗೋಚರಿಸಿವೆ
ಮಹಿಳೆಯ ಖಡಕ್ ಪ್ರಶ್ನೆ: ತಕ್ಷಣವೇ ಈ ದೃಶ್ಯವನ್ನು ವಿಡಿಯೋ ರೆಕಾರ್ಡ್ ಮಾಡಿದ ಮಹಿಳೆ, ಪಾಕಿಸ್ತಾನದಲ್ಲಿ ತಯಾರಾಗಿದೆ ಎನ್ನಲಾದ ಉತ್ಪನ್ನವು ಭಾರತದೊಂದಿಗೆ ಗಡಿಯನ್ನೇ ಹಂಚಿಕೊಳ್ಳದ ಪುಣೆಯ ಸ್ಥಳೀಯ ಧಾರ್ಮಿಕ ಜಾತ್ರೆಗಳಲ್ಲಿ ಬಹಿರಂಗವಾಗಿ ಮಾರಾಟವಾಗುತ್ತಿರುವುದು ಹೇಗೆ ಎಂದು ತೀವ್ರ ಆಕ್ರೋಶದೊಂದಿಗೆ ಪ್ರಶ್ನಿಸಿದ್ದಾರೆ.
ತಪಾಸಣಾ ವ್ಯವಸ್ಥೆಯ ವಿರುದ್ಧ ನಾಗರಿಕರ ಆಕ್ರೋಶ
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಸ್ಥಳೀಯ ನಿವಾಸಿಗಳು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಇಂತಹ ದೊಡ್ಡ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ವ್ಯಾಪಾರಿಗಳಿಗೆ ಸ್ಟಾಲ್ ಹಾಕಲು ಅನುಮತಿ ನೀಡುವ ಮುನ್ನ, ಮಹಾನಗರ ಪಾಲಿಕೆ ಹಾಗೂ ಸ್ಥಳೀಯ ಆಡಳಿತ ಮಂಡಳಿಗಳು ಅವರ ಸರಕುಗಳನ್ನು ಸರಿಯಾಗಿ ಪರಿಶೀಲಿಸುವುದಿಲ್ಲವೇ? ಎಂದು ನಾಗರಿಕರು ಪ್ರಶ್ನಿಸುತ್ತಿದ್ದಾರೆ.
ತಜ್ಞರ ಎಚ್ಚರಿಕೆ: ಆದರೆ, ಮತ್ತೊಂದೆಡೆ ಕೆಲವು ತಜ್ಞರು ಮತ್ತು ಪ್ರಜ್ಞಾವಂತ ನಾಗರಿಕರು ಈ ವಿಷಯದಲ್ಲಿ ತಕ್ಷಣದ ತೀರ್ಮಾನಕ್ಕೆ ಬರದೇ ಜಾಗರೂಕರಾಗಿರಲು ಮನವಿ ಮಾಡಿದ್ದಾರೆ. ವಿಡಿಯೋದಲ್ಲಿರುವ ಲೇಬಲ್ ನಿಜವಾದದ್ದೇ ಅಥವಾ ಯಾರಾದರೂ ವದಂತಿ ಹರಡಲು ಬೇಕೆಂದೇ ಅಂಟಿಸಿದ್ದಾರೆಯೇ ಎಂಬುದನ್ನು ಪೊಲೀಸರು ಸ್ವತಂತ್ರವಾಗಿ ಪರಿಶೀಲಿಸಬೇಕಾಗಿದೆ ಎಂದು ಅವರು ತಿಳಿಸಿದ್ದಾರೆ.
ರಂಗಕ್ಕಿಳಿದ ಪೊಲೀಸರ ವಿಶೇಷ ತಂಡ
ವೈರಲ್ ವಿಡಿಯೋ ಬೆನ್ನಲ್ಲೇ, ಪಿಂಪ್ರಿ-ಚಿಂಚ್‌ವಾಡ್ ಪೊಲೀಸರು ಫಿಲ್ಡ್‌ಗೆ ಇಳಿದಿದ್ದು, ಬೆಡ್‌ಶೀಟ್‌ನ ಮೂಲ ಮತ್ತು ಅದನ್ನು ಜಾತ್ರೆಯಲ್ಲಿ ಮಾರಾಟ ಮಾಡಿದ ಪೂರೈಕೆ ಸರಪಳಿಯನ್ನು ಪತ್ತೆಹಚ್ಚಲು ವಿಶೇಷ ತಂಡವನ್ನು (Special Team) ರಚನೆ ಮಾಡಿದ್ದಾರೆ.
ಇದರೊಂದಿಗೆ, ಈ ವಿಚಾರದಲ್ಲಿ ಯಾವುದೇ ಉಲ್ಲಂಘನೆಗಳು ಕಂಡುಬಂದಲ್ಲಿ, ಅಂತಹ ಉತ್ಪನ್ನಗಳನ್ನು ಮಾರಾಟ ಮಾಡುವ ಮಾರಾಟಗಾರರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಕೋರಿ ಪೊಲೀಸರು ಪಿಂಪ್ರಿ-ಚಿಂಚ್‌ವಾಡ್ ಮುನ್ಸಿಪಲ್ ಕಾರ್ಪೊರೇಷನ್‌ಗೆ (PCMC) ಪತ್ರ ಬರೆದಿದ್ದಾರೆ. ಇತ್ತೀಚೆಗಷ್ಟೇ ಮಹಾರಾಷ್ಟ್ರದ ಸಂಭಾಜಿನಗರಲ್ಲಿ ಮೇಡ್ ಇನ್ ಪಾಕಿಸ್ತಾನ್ ಲೇಬಲ್‌ಗಳನ್ನು ಹೊಂದಿರುವ ಸೌಂದರ್ಯವರ್ಧಕ ಉತ್ಪನ್ನಗಳನ್ನು (Cosmetics) ಮಾರಾಟ ಮಾಡಿದ ಆರೋಪದ ಮೇಲೆ 3 ಜನರನ್ನು ಬಂಧಿಸಿದ ಕೆಲವೇ ದಿನಗಳಲ್ಲಿ ಈ ಘಟನೆ ಬೆಳಕಿಗೆ ಬಂದಿದ್ದು, ಭಾರತದಲ್ಲಿ ಪಾಕ್ ಉತ್ಪನ್ನಗಳನ್ನು ವ್ಯಾಪಕ ವಿತರಣಾ ಜಾಲದ ಮೂಲಕ ಮಾರಾಟ ಮಾಡಲಾಗುತ್ತಿದೆಯೇ ಎಂಬ ಹೊಸ ಕಳವಳವನ್ನು ಹುಟ್ಟುಹಾಕಿದೆ.
ನಿಷೇಧವಿದ್ದರೂ ಭಾರತ ತಲುಪುತ್ತಿವೆ ಪಾಕ್ ಉತ್ಪನ್ನಗಳು?
ಗಡಿ ಸಂಘರ್ಷಗಳಲ್ಲಿ ತೀವ್ರ ಏರಿಕೆಯ ನಂತರ ಕಳೆದ ವರ್ಷ ಮೇ ತಿಂಗಳಿನಲ್ಲಿ ದ್ವಿಪಕ್ಷೀಯ ವ್ಯಾಪಾರಕ್ಕೆ ಅಂತಿಮ ಹೊಡೆತ ಬಿದ್ದಿದ್ದು, ಉಭಯದೇಶಗಳು ಸಂಪೂರ್ಣ ವ್ಯಾಪಾರ ನಿರ್ಬಂಧಗಳನ್ನು ಜಾರಿಗೊಳಿಸಿವೆ.
ಭಾರತದ ವಿದೇಶಿ ವ್ಯಾಪಾರ ನಿರ್ದೇಶನಾಲಯದ (DGFT) ಅಧಿಕೃತ ಅಂಕಿ-ಅಂಶಗಳು ಶೂನ್ಯವಾಗಿದ್ದರೂ, ದುಬೈ ಹಾಗೂ ಸಿಂಗಾಪುರದಂತಹ ಮೂರನೇ ದೇಶಗಳಿಂದ (Third Party Countries) ಸಾರಿಗೆ ಕೇಂದ್ರಗಳ ಮೂಲಕ ಭಾರತಕ್ಕೆ ಸಣ್ಣ ಪ್ರಮಾಣದಲ್ಲಿ ಅನೌಪಚಾರಿಕ ಅಥವಾ ಪರೋಕ್ಷ ವ್ಯಾಪಾರ ಇನ್ನೂ ನಡೆಯುತ್ತದೆ ಎನ್ನಲಾಗಿದೆ. ಅಲ್ಲಿ ಸರಕುಗಳನ್ನು ನೇರ ವ್ಯಾಪಾರ ನಿರ್ಬಂಧಗಳನ್ನು ತಪ್ಪಿಸಲು ಮರು-ಮಾರ್ಗ ಮತ್ತು ಮರು-ಲೇಬಲ್ ಮಾಡಲಾಗುತ್ತದೆ. ಆದಾಗ್ಯೂ, ಅಧಿಕೃತವಾಗಿ ಮತ್ತು ಕಾನೂನುಬದ್ಧವಾಗಿ, ನೇರ ಆಮದುಗಳು ಸಂಭವಿಸುವುದಿಲ್ಲ ಎಂದು ವರದಿಯಾಗಿದೆ.

