ಟೆಕ್ ದೈತ್ಯ Oracleನಲ್ಲಿ ಮತ್ತೊಂದು ಸುತ್ತಿನ ಉದ್ಯೋಗ ಕಡಿತ ಆರಂಭವಾಗಿದೆ. ಸೋಮವಾರದಿಂದ ಆರಂಭವಾದ ಈ ಪ್ರಕ್ರಿಯೆಯಲ್ಲಿ ಹಲವು ಉದ್ಯೋಗಿಗಳಿಗೆ ಮುಂಜಾನೆ 6 ಗಂಟೆ ಸುಮಾರಿಗೆ ಇ-ಮೇಲ್ ಕಳುಹಿಸಿ, ಅವರ ಹುದ್ದೆಗಳನ್ನು ರದ್ದುಗೊಳಿಸಲಾಗಿದೆ ಎಂದು ತಿಳಿಸಲಾಗಿದೆ. ಕಂಪನಿಯು ಇದನ್ನು ‘ವ್ಯಾಪಕ ಸಂಸ್ಥೆಯ ಪುನರ್‌ರಚನೆ’ (Broader Organisational Change) ಭಾಗ ಎಂದು ಹೇಳಿದೆ.
ಉದ್ಯೋಗ ಕಡಿತಕ್ಕೆ ಒಳಗಾದ ಕೆಲವರು LinkedIn, Reddit ಹಾಗೂ Blind ಸೇರಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಆದರೆ, ಈ ಸುತ್ತಿನಲ್ಲಿ ನಿಖರವಾಗಿ ಎಷ್ಟು ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ ಎಂಬುದನ್ನು Oracle ಬಹಿರಂಗಪಡಿಸಿಲ್ಲ.
‘ಇಂದೇ ನಿಮ್ಮ ಕೊನೆಯ ಕೆಲಸದ ದಿನ’!
ಆಂತರಿಕ ಅಧಿಸೂಚನೆಯ ಪ್ರಕಾರ, ಪ್ರಸ್ತುತ ವ್ಯವಹಾರದ ಅಗತ್ಯಗಳನ್ನು ಪರಿಶೀಲಿಸಿದ ಬಳಿಕ ಕೆಲವು ಉದ್ಯೋಗಿಗಳ ಹುದ್ದೆಗಳನ್ನು ರದ್ದುಗೊಳಿಸಲು Oracle ನಿರ್ಧರಿಸಿದೆ. ಈ ನಿರ್ಧಾರವನ್ನು ಕಂಪನಿಯು ವ್ಯಾಪಕ ಸಂಸ್ಥೆಯ ಪುನರ್‌ರಚನೆಯ ಭಾಗವೆಂದು ವಿವರಿಸಿದೆ.
ವರದಿಗಳ ಪ್ರಕಾರ, ಉದ್ಯೋಗಿಗಳಿಗೆ ಹುದ್ದೆ ರದ್ದುಗೊಳಿಸಿರುವ ಕುರಿತು ಇ-ಮೇಲ್ ಬಂದ ಅದೇ ದಿನವನ್ನು ಅವರ ಕೊನೆಯ ಕೆಲಸದ ದಿನ ಎಂದು ತಿಳಿಸಲಾಗಿದೆ. ಹೀಗಾಗಿ ಯಾವುದೇ ಮುನ್ಸೂಚನೆಯಿಲ್ಲದೆ ಬಂದ ಈ ಇ-ಮೇಲ್‌ಗಳು ಉದ್ಯೋಗಿಗಳಿಗೆ ಆಘಾತ ಉಂಟುಮಾಡಿವೆ.
AI, ಡೇಟಾ ಸೆಂಟರ್‌ಗೆ ಬಿಲಿಯನ್‌ಗಟ್ಟಲೆ ಹೂಡಿಕೆ
Oracleನಲ್ಲಿ ಉದ್ಯೋಗ ಕಡಿತ ನಡೆಯುತ್ತಿರುವ ಸಮಯದಲ್ಲೇ ಕಂಪನಿ ಮತ್ತೊಂದೆಡೆ AI ಮತ್ತು ಕ್ಲೌಡ್ ಕ್ಷೇತ್ರದಲ್ಲಿ ಭಾರಿ ಪ್ರಮಾಣದ ಹೂಡಿಕೆ ಮಾಡುತ್ತಿದೆ.ಕೃತಕ ಬುದ್ಧಿಮತ್ತೆ ಹಾಗೂ ಕ್ಲೌಡ್ ಸೇವೆಗಳಿಗೆ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಡೇಟಾ ಸೆಂಟರ್ ಮೂಲಸೌಕರ್ಯವನ್ನು ವಿಸ್ತರಿಸಲು Oracle ದೊಡ್ಡ ಮೊತ್ತದ ಹಣವನ್ನು ಖರ್ಚು ಮಾಡುತ್ತಿದೆ.
2027ರ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ Oracle 28.5 ಬಿಲಿಯನ್ ಡಾಲರ್ ಬಂಡವಾಳ ವೆಚ್ಚ ಮಾಡಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ ಈ ಮೊತ್ತ 8.5 ಬಿಲಿಯನ್ ಡಾಲರ್ ಆಗಿತ್ತು. ಅಂದರೆ, ಕಂಪನಿಯ ಬಂಡವಾಳ ವೆಚ್ಚ ಮೂರು ಪಟ್ಟು ಹೆಚ್ಚಾಗಿದೆ.ಪೂರ್ಣ ಹಣಕಾಸು ವರ್ಷದಲ್ಲಿ 90ರಿಂದ 95 ಬಿಲಿಯನ್ ಡಾಲರ್ ಬಂಡವಾಳ ವೆಚ್ಚ ಮಾಡುವ ತನ್ನ ಅಂದಾಜನ್ನೂ Oracle ಮುಂದುವರಿಸಿದೆ.
AI ಕ್ಲೌಡ್ ಸೇವೆಗಳಿಗೆ ಭಾರಿ ಬೇಡಿಕೆ
Oracle ಪ್ರಕಾರ, ತ್ರೈಮಾಸಿಕದಲ್ಲಿ ಕಂಪನಿಯು 30 ಬಿಲಿಯನ್ ಡಾಲರ್‌ಗಿಂತ ಹೆಚ್ಚು ಮೌಲ್ಯದ ಹೆಚ್ಚುವರಿ AI ಕ್ಲೌಡ್ ಒಪ್ಪಂದಗಳಿಗೆ ಸಹಿ ಹಾಕಿದೆ.ಇದರ ಪರಿಣಾಮ ಕಂಪನಿಯ ಒಟ್ಟು Remaining Performance Obligations (RPO) ಅಥವಾ ಒಪ್ಪಂದದ ಆದಾಯ ಬ್ಯಾಕ್‌ಲಾಗ್ 664 ಬಿಲಿಯನ್ ಡಾಲರ್‌ಗೆ ಏರಿಕೆಯಾಗಿದೆ.
ಆದರೆ, ಡೇಟಾ ಸೆಂಟರ್‌ಗಳ ವಿಸ್ತರಣೆಗೆ ಹೆಚ್ಚುತ್ತಿರುವ ವೆಚ್ಚವು ಕಂಪನಿಯ ಹಣಕಾಸಿನ ಮೇಲೆ ಒತ್ತಡ ತಂದಿದೆ. ಈ ತ್ರೈಮಾಸಿಕದಲ್ಲಿ Oracle 5.4 ಬಿಲಿಯನ್ ಡಾಲರ್ ನಕಾರಾತ್ಮಕ Free Cash Flow ದಾಖಲಿಸಿದೆ. ಇದೇ ಅವಧಿಯಲ್ಲಿ ಕಂಪನಿಯ ಆದಾಯವು ವರ್ಷದಿಂದ ವರ್ಷಕ್ಕೆ 30% ಏರಿಕೆಯಾಗಿ 19.3 ಬಿಲಿಯನ್ ಡಾಲರ್ ತಲುಪಿದೆ. ಕ್ಲೌಡ್ ಮೂಲಸೌಕರ್ಯ ಆದಾಯವೂ 121% ಹೆಚ್ಚಾಗಿ 7.4 ಬಿಲಿಯನ್ ಡಾಲರ್ ಆಗಿದೆ.
ಈಗಾಗಲೇ 21 ಸಾವಿರ ಉದ್ಯೋಗಿಗಳಿಗೆ ಕತ್ತರಿ
Oracleನಲ್ಲಿ ಇದು ಮೊದಲ ದೊಡ್ಡ ಪ್ರಮಾಣದ ಉದ್ಯೋಗ ಕಡಿತವಲ್ಲ. 2026ರ ಮೇ 31ಕ್ಕೆ ಅಂತ್ಯಗೊಂಡ ಹಣಕಾಸು ವರ್ಷದಲ್ಲಿ ಕಂಪನಿಯ ಜಾಗತಿಕ ಉದ್ಯೋಗಿಗಳ ಸಂಖ್ಯೆ ಸುಮಾರು 21,000ರಷ್ಟು ಕಡಿಮೆಯಾಗಿದೆ.
ಇದು ಕಂಪನಿಯ ಒಟ್ಟು ಉದ್ಯೋಗಿಗಳ ಸುಮಾರು 13% ಆಗಿದೆ. ಆ ಹಣಕಾಸು ವರ್ಷದ ಅಂತ್ಯದಲ್ಲಿ Oracleನಲ್ಲಿ ಸುಮಾರು 1.41 ಲಕ್ಷ ಉದ್ಯೋಗಿಗಳಿದ್ದರು. ಹಿಂದಿನ ವರ್ಷ ಈ ಸಂಖ್ಯೆ ಸುಮಾರು 1.62 ಲಕ್ಷ ಆಗಿತ್ತು.2026ರ ಹಣಕಾಸು ವರ್ಷದಲ್ಲಿ ಪುನರ್‌ರಚನೆಗೆ ಸಂಬಂಧಿಸಿದ ವಜಾ ಪರಿಹಾರ ಹಾಗೂ ಇತರ ನಿರ್ಗಮನ ವೆಚ್ಚಗಳಿಗಾಗಿ Oracle ಸುಮಾರು 1.84 ಬಿಲಿಯನ್ ಡಾಲರ್ ಖರ್ಚು ಮಾಡಿದೆ. ಹಿಂದಿನ ವರ್ಷ ಇದೇ ವೆಚ್ಚ 374 ಮಿಲಿಯನ್ ಡಾಲರ್ ಆಗಿತ್ತು. ಕಂಪನಿಯ ಕಾರ್ಯಾಚರಣೆಗಳಲ್ಲಿ AI ಅಳವಡಿಕೆ ಮತ್ತು ಬಳಕೆಯೂ ಕೆಲವು ಉದ್ಯೋಗ ಕಡಿತಗಳಿಗೆ ಕಾರಣವಾಗಿದೆ ಎಂದು Oracle ಈ ಹಿಂದೆ ತಿಳಿಸಿತ್ತು.
ಪುನರ್‌ರಚನೆ ವೆಚ್ಚ ಮತ್ತಷ್ಟು ಹೆಚ್ಚಳ
Oracleನ ಪುನರ್‌ರಚನಾ ಯೋಜನೆಯ ವೆಚ್ಚವೂ ಹೆಚ್ಚಾಗಿದೆ. ಕಂಪನಿ ಇತ್ತೀಚೆಗೆ ಅಂದಾಜು ವೆಚ್ಚಕ್ಕೆ 700 ಮಿಲಿಯನ್ ಡಾಲರ್ ಹೆಚ್ಚುವರಿ ಸೇರಿಸಿದೆ.ಇದರೊಂದಿಗೆ 2026ರ ಹಣಕಾಸು ವರ್ಷದ ಪುನರ್‌ರಚನಾ ಯೋಜನೆಯ ಒಟ್ಟು ಅಂದಾಜು ವೆಚ್ಚ ಸುಮಾರು 2.8 ಬಿಲಿಯನ್ ಡಾಲರ್‌ಗೆ ಏರಿಕೆಯಾಗಿದೆ.
ಈ ವೆಚ್ಚದಲ್ಲಿ ಉದ್ಯೋಗಿಗಳ ವಜಾ ಪರಿಹಾರ, ಒಪ್ಪಂದಗಳ ರದ್ದತಿ ಶುಲ್ಕ ಹಾಗೂ ಇತರ ನಿರ್ಗಮನ ವೆಚ್ಚಗಳು ಸೇರಿವೆ. ಆಗಸ್ಟ್ 31ರ ವೇಳೆಗೆ ಈ ಯೋಜನೆಯಡಿ Oracle ಸುಮಾರು 2.1 ಬಿಲಿಯನ್ ಡಾಲರ್ ವೆಚ್ಚವನ್ನು ದಾಖಲಿಸಿತ್ತು.ಹೆಚ್ಚುವರಿಯಾಗಿ ಅಂದಾಜಿಸಿರುವ 700 ಮಿಲಿಯನ್ ಡಾಲರ್ ವೆಚ್ಚವು ಕಂಪನಿ ಕೈಗೊಳ್ಳಲಿರುವ ಮತ್ತಷ್ಟು ಕ್ರಮಗಳಿಗೆ ಸಂಬಂಧಿಸಿದೆ ಎಂದು ತಿಳಿಸಿದೆ. ಈ ಮಾಹಿತಿ ಬಹಿರಂಗವಾದ ಕೆಲವೇ ದಿನಗಳಲ್ಲಿ Oracleನಲ್ಲಿ ಮತ್ತೊಂದು ಸುತ್ತಿನ ಉದ್ಯೋಗ ಕಡಿತ ಆರಂಭವಾಗಿದೆ.

