ಗರ್ಭಧಾರಣೆ ಎನ್ನುವುದು ನಿಸರ್ಗದ ಒಂದು ಅದ್ಭುತ ಪ್ರಕ್ರಿಯೆ. ಆದರೆ ಇಂಡೋನೇಷ್ಯಾದಿಂದ ಬಂದಿರುವ ಸುದ್ದಿಯೊಂದು ವೈದ್ಯಕೀಯ ಲೋಕವನ್ನೇ ಚಕಿತಗೊಳಿಸಿದೆ. ಮಹಿಳೆಯೊಬ್ಬಳು ತಾನು ಕೇವಲ ಗಾಳಿಯಿಂದ ಗರ್ಭಿಣಿಯಾದೆ ಮತ್ತು ಕೆಲವೇ ನಿಮಿಷಗಳಲ್ಲಿ ಮಗುವಿಗೆ ಜನ್ಮ ನೀಡಿದೆ ಎಂದು ಹೇಳಿಕೊಂಡಿರುವುದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಏನಿದು ವಿಲಕ್ಷಣ ಘಟನೆ? ಇಂಡೋನೇಷ್ಯಾದ ಪಶ್ಚಿಮ ಜಾವಾ ಪ್ರಾಂತ್ಯದ ಸಿಟಿನಾ ಎಂಬ ಮಹಿಳೆ ಈ ವಿಲಕ್ಷಣ ದೂರು ನೀಡಿದವರು. ತನ್ನ ಲಿವಿಂಗ್ ರೂಂನಲ್ಲಿ ಮಧ್ಯಾಹ್ನದ ನಮಾಜಿನ ನಂತರ ವಿಶ್ರಾಂತಿ ಪಡೆಯುತ್ತಿದ್ದಾಗ, ಅಚಾನಕ್ಕಾಗಿ ಜೋರಾದ ಗಾಳಿಯೊಂದು ತನ್ನ ದೇಹವನ್ನು ಪ್ರವೇಶಿಸಿತು ಎಂದು ಅವರು ಹೇಳಿದ್ದಾರೆ. ಈ ಘಟನೆ ನಡೆದ ಕೇವಲ 15 ನಿಮಿಷಗಳಲ್ಲೇ ಹೊಟ್ಟೆ ನೋವು ಕಾಣಿಸಿಕೊಂಡು, ಹೊಟ್ಟೆಯ ಗಾತ್ರವೂ ಅಸಹಜವಾಗಿ ದೊಡ್ಡದಾಯಿತು. ತಕ್ಷಣ ಆಸ್ಪತ್ರೆಗೆ ದಾಖಲಾದ ಅವರು 2.9 ಕೆಜಿ ತೂಕದ ಆರೋಗ್ಯವಂತ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
ವೈದ್ಯಕೀಯ ಲೋಕದ ಸ್ಪಷ್ಟನೆ ಏನು? ಮಹಿಳೆಯ ಈ ‘ಪವಾಡ’ದ ಕತೆಯನ್ನು ಕೇಳಿ ವೈದ್ಯರು ಮತ್ತು ಸ್ಥಳೀಯ ಅಧಿಕಾರಿಗಳು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಸ್ಥಳೀಯ ಆರೋಗ್ಯ ಕೇಂದ್ರದ ಮುಖ್ಯಸ್ಥ ಇಮಾನ್ ಸುಲೈಮಾನ್ ಅವರ ಪ್ರಕಾರ, ಇದು ‘ಕ್ರಿಪ್ಟಿಕ್ ಪ್ರೆಗ್ನೆನ್ಸಿ’ (Cryptic Pregnancy) ಎಂಬ ವೈದ್ಯಕೀಯ ಸ್ಥಿತಿಯಾಗಿದೆ. ಈ ಸ್ಥಿತಿಯಲ್ಲಿ ಗರ್ಭಿಣಿಯಾದ ಮಹಿಳೆಯರಿಗೆ ತಾವು ಗರ್ಭ ಧರಿಸಿದ್ದೇವೆ ಎಂಬ ವಿಷಯ ಹೆರಿಗೆಯ ದಿನದವರೆಗೂ ತಿಳಿಯುವುದಿಲ್ಲ. ದೇಹದ ರಚನೆ ಅಥವಾ ಹಾರ್ಮೋನ್ ಬದಲಾವಣೆಗಳಿಂದಾಗಿ ಹೊಟ್ಟೆಯ ಗಾತ್ರವು ಹೆಚ್ಚಾಗದೆ ಇರಬಹುದು, ಇದರಿಂದ ಹೆರಿಗೆಯ ನೋವು ಬಂದಾಗಲೇ ತಮಗೆ ಮಗು ಹುಟ್ಟಲಿದೆ ಎಂಬುದು ಅರಿವಿಗೆ ಬರುತ್ತದೆ.
ಪೊಲೀಸ್ ತನಿಖೆ ಚುರುಕು ಮಹಿಳೆಯ ಈ ಹೇಳಿಕೆಯು ಸಾಮಾಜಿಕವಾಗಿ ತಪ್ಪು ಸಂದೇಶ ರವಾನಿಸಬಹುದು ಎಂಬ ಆತಂಕದಲ್ಲಿ ಸ್ಥಳೀಯ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಮಹಿಳೆಯ ಹಿಂದಿನ ದಾಂಪತ್ಯ ಜೀವನ ಮತ್ತು ಈ ಗರ್ಭಧಾರಣೆಯ ಹಿಂದಿನ ಸತ್ಯಾಸತ್ಯತೆಯನ್ನು ಪರಿಶೀಲಿಸುತ್ತಿದ್ದಾರೆ. ಅವಿವಾಹಿತ ಮಹಿಳೆ ಮಗುವಿಗೆ ಜನ್ಮ ನೀಡುವುದು ಇಂಡೋನೇಷ್ಯಾದ ಕೆಲವು ಸಂಪ್ರದಾಯಬದ್ಧ ಸಮುದಾಯಗಳಲ್ಲಿ ಕಳಂಕ ಎಂದು ಪರಿಗಣಿಸಲ್ಪಡುವುದರಿಂದ, ಆಕೆಯೇ ಈ ರೀತಿಯ ‘ಗಾಳಿಯ ಗರ್ಭಧಾರಣೆ’ಯ ಕತೆಯನ್ನು ಸೃಷ್ಟಿಸಿರಬಹುದು ಎಂಬ ಅನುಮಾನವೂ ವ್ಯಕ್ತವಾಗಿದೆ.

