ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇತ್ತೀಚಿನ ದಿನಗಳಲ್ಲಿ ವಂಚನೆ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಖದೀಮರು ಹೇಗೆಲ್ಲಾ ವಂಚಿಸುತ್ತಾರೆ ಎಂಬುದಕ್ಕೆ ಈ ಘಟನೆ ಸಾಕ್ಷಿ. ರಾಜಸ್ಥಾನಕ್ಕೆ ಕಡಿಮೆ ದರದಲ್ಲಿ ವಿಮಾನ ಟಿಕೆಟ್ ಕೊಡಿಸುವುದಾಗಿ ನಂಬಿಸಿ, ಮಹಿಳೆಯೊಬ್ಬರಿಂದ ವ್ಯಕ್ತಿಯೋರ್ವ 17 ಲಕ್ಷ ರೂ. ಮೌಲ್ಯದ ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ದೋಚಿರುವ ಘಟನೆ ನಡೆದಿದೆ.
ಮಹಿಳೆ ನೀಡಿದ ದೂರಿನ ಆಧಾರದ ಮೇಲೆ 36 ವರ್ಷದ ವ್ಯಕ್ತಿಯೊಬ್ಬನನ್ನು ಬಾಗಲೂರು ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಅಸ್ಸಾಂ ಮೂಲದ, ಭಟ್ಟರಹಳ್ಳಿಯ ನಿವಾಸಿ ಚನುವರ್ ಅಲಿ ಎಂದು ಗುರುತಿಸಲಾಗಿದೆ.
ಪೊಲೀಸರ ಪ್ರಕಾರ, ರಾಜಸ್ಥಾನ ಮೂಲದ ಪುಷ್ಪಾ ಟಿ. (40) ಅವರು ಸಿಂಗಾಪುರದಲ್ಲಿರುವ ತಮ್ಮ ಸಹೋದರಿಯ ಮನೆಗೆ ಭೇಟಿ ನೀಡಲು ಬೆಂಗಳೂರಿಗೆ ಬಂದಿದ್ದರು. ಅಕ್ಟೋಬರ್ 14 ರಂದು, ಅವರು ತಮ್ಮ ಊರಿಗೆ ಮರಳಲು ಟಿಕೆಟ್ ಖರೀದಿಸಲು ಯಶವಂತಪುರ ರೈಲು ನಿಲ್ದಾಣಕ್ಕೆ ಹೋಗಿದ್ದರು. ಈ ವೇಳೆ ಅಲ್ಲಿಗೆ ಬಂದ ಅಲಿ, ತಾನು ಕಡಿಮೆ ದರದಲ್ಲಿ ವಿಮಾನ ಟಿಕೆಟ್ ಕೊಡಿಸುವುದಾಗಿ ಹೇಳಿ ಅವರನ್ನು ನಂಬಿಸಿದನು.
ನಂತರ ಆತ ಅವರನ್ನು ವಿಮಾನ ನಿಲ್ದಾಣದ ರಸ್ತೆಯ ಕಡೆಗೆ ಕರೆದೊಯ್ದನು. ಬಾಗಲೂರು ಬಳಿ, ಅವರಲ್ಲಿದ್ದ ಚಿನ್ನದ ಆಭರಣಗಳು ಮತ್ತು ಬೆಳ್ಳಿಯ ಕಾಲುಂಗುರಗಳನ್ನು, ಒಂದು ಪರ್ಸ್ನಲ್ಲಿ ಇರಿಸಿಕೊಳ್ಳುವಂತೆ ಆತ ಪುಸಲಾಯಿಸಿದ್ದಾನೆ. ಬಳಿಕ ಆ ಪರ್ಸ್ ಅನ್ನು ತನ್ನ ಬ್ಯಾಗ್ನಲ್ಲಿ ಹಾಕಿಕೊಂಡು ಅಲ್ಲಿಂದ ಪರಾರಿಯಾಗಿದ್ದಾನೆ.
ಈ ಕುರಿತು ಪುಷ್ಪಾ ಅವರು ನೀಡಿದ ದೂರಿನ ಮೇರೆಗೆ, ಬಾಗಲೂರು ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಮತ್ತು ಇತರ ಸಾಕ್ಷ್ಯಗಳನ್ನು ಸಂಗ್ರಹಿಸಿ ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ. ಪೊಲೀಸರು ಆತನಿಂದ 117 ಗ್ರಾಂ ಚಿನ್ನದ ಆಭರಣಗಳು ಮತ್ತು 71 ಗ್ರಾಂ ಬೆಳ್ಳಿಯ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಇಂತದ್ದೇ ಮತ್ತೊಂದು ಘಟನೆ ಬಳ್ಳಾರಿಯಲ್ಲಿಯೂ ನಡೆದಿದೆ. ಇದೇ ವಾರದಲ್ಲಿ ಬಳ್ಳಾರಿಯ ಕೆಎಸ್ಆರ್ಟಿಸಿ ಬಸ್ಗಳಲ್ಲಿ ಪ್ರಯಾಣಿಕರ ಗಮನ ಬೇರೆಡೆ ಸೆಳೆದು ₹17 ಲಕ್ಷ ಮೌಲ್ಯದ ಚಿನ್ನಾಭರಣ ಕದಿಯುತ್ತಿದ್ದ ಇಬ್ಬರು ಅಂತರರಾಜ್ಯ ಮಹಿಳಾ ಕಳ್ಳಿಯರನ್ನು ಬಳ್ಳಾರಿ ಪೊಲೀಸರು ಆಂಧ್ರಪ್ರದೇಶದ ಕುಪ್ಪಂನಲ್ಲಿ ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಭುವನಾ ಮತ್ತು ರೂಪಾ ಎಂದು ಗುರುತಿಸಲಾಗಿದೆ. ಬಂಧಿತರಿಂದ ಕದ್ದಿರುವ ಒಡವೆಗಳನ್ನು ಜಪ್ತಿ ಮಾಡಲಾಗಿದೆ.

