ನವದೆಹಲಿ: ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಯು UGC-NET ಜೂನ್ 2026ರ ಫಲಿತಾಂಶವನ್ನು ಆಗಸ್ಟ್ 28ರಂದು ಪ್ರಕಟಿಸಿದೆ. ಒಟ್ಟು 87 ವಿಷಯಗಳಿಗೆ ಪರೀಕ್ಷೆ ನಡೆದಿದ್ದು, ಈ ಪೈಕಿ 84 ವಿಷಯಗಳ ಫಲಿತಾಂಶವನ್ನು ಇದೀಗ ಬಿಡುಗಡೆ ಮಾಡಲಾಗಿದೆ.ಪರೀಕ್ಷೆ ಬರೆದ ಅಭ್ಯರ್ಥಿಗಳು ತಮ್ಮ ಸ್ಕೋರ್‌ಕಾರ್ಡ್ ಅನ್ನು ಅಧಿಕೃತ UGC-NET ವೆಬ್‌ಸೈಟ್ ugcnet.nta.nic.in ನಲ್ಲಿ ಪರಿಶೀಲಿಸಿ ಡೌನ್‌ಲೋಡ್ ಮಾಡಿಕೊಳ್ಳಬಹುದು.
UGC-NET ಜೂನ್ 2026ರ ಪರೀಕ್ಷೆಯನ್ನು ಜೂನ್ 22ರಿಂದ 30ರವರೆಗೆ ದೇಶಾದ್ಯಂತ 87 ವಿಷಯಗಳಿಗೆ ನಡೆಸಲಾಗಿತ್ತು. ಈ ಪರೀಕ್ಷೆಯ ಮೂಲಕ ಅಭ್ಯರ್ಥಿಗಳ ವರ್ಗಕ್ಕೆ ಅನುಗುಣವಾಗಿ ಜೂನಿಯರ್ ರಿಸರ್ಚ್ ಫೆಲೋಶಿಪ್ (JRF), ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಅರ್ಹತೆ ಹಾಗೂ ಪಿಎಚ್‌ಡಿ ಪ್ರವೇಶಕ್ಕೆ ಅರ್ಹತೆಯನ್ನು ನಿರ್ಧರಿಸಲಾಗುತ್ತದೆ.
UGC-NET ಫಲಿತಾಂಶ ಪರಿಶೀಲಿಸುವುದು ಹೇಗೆ?
ಅಭ್ಯರ್ಥಿಗಳು ಕೆಳಗಿನ ಹಂತಗಳನ್ನು ಅನುಸರಿಸಿ ತಮ್ಮ ಫಲಿತಾಂಶವನ್ನು ನೋಡಬಹುದು:
ಮೊದಲು ಅಧಿಕೃತ ವೆಬ್‌ಸೈಟ್ ugcnet.nta.nic.inಗೆ ಭೇಟಿ ನೀಡಿ.
ಮುಖಪುಟದಲ್ಲಿರುವ ಫಲಿತಾಂಶ ಅಥವಾ Latest Announcements ವಿಭಾಗಕ್ಕೆ ತೆರಳಿ.
UGC-NET June 2026 Result ಲಿಂಕ್ ಮೇಲೆ ಕ್ಲಿಕ್ ಮಾಡಿ.
ಅಗತ್ಯವಿರುವ ಅಪ್ಲಿಕೇಶನ್ ನಂಬರ್ ಮತ್ತು ಜನ್ಮ ದಿನಾಂಕ ಸೇರಿದಂತೆ ಲಾಗಿನ್ ವಿವರಗಳನ್ನು ನಮೂದಿಸಿ.
Submit ಆಯ್ಕೆಯ ಮೇಲೆ ಕ್ಲಿಕ್ ಮಾಡಿದ ಬಳಿಕ ಫಲಿತಾಂಶ ಹಾಗೂ ಸ್ಕೋರ್‌ಕಾರ್ಡ್ ಪರದೆಯ ಮೇಲೆ ಕಾಣಿಸುತ್ತದೆ.
ಸ್ಕೋರ್‌ಕಾರ್ಡ್ ಡೌನ್‌ಲೋಡ್ ಮಾಡಿಕೊಂಡು ಮುಂದಿನ ಬಳಕೆಗಾಗಿ ಪ್ರಿಂಟ್ ಅಥವಾ ಡಿಜಿಟಲ್ ಪ್ರತಿಯನ್ನು ಇಟ್ಟುಕೊಳ್ಳಿ.
3 ವಿಷಯಗಳ ಅಭ್ಯರ್ಥಿಗಳಿಗೆ ಫಲಿತಾಂಶ ಇನ್ನೂ ಲಭ್ಯವಿಲ್ಲ
ಇಂಗ್ಲಿಷ್, ಕಾಮರ್ಸ್ ಮತ್ತು ಸೋಶಿಯಾಲಜಿ ವಿಷಯಗಳ ಪರೀಕ್ಷೆಗಳನ್ನು ಮರುನಡೆಸಲು NTA ನಿರ್ಧರಿಸಿರುವುದರಿಂದ ಈ ಮೂರು ವಿಷಯಗಳ ಅಭ್ಯರ್ಥಿಗಳಿಗೆ ಸದ್ಯ ಸ್ಕೋರ್‌ಕಾರ್ಡ್ ಲಭ್ಯವಿರುವುದಿಲ್ಲ.
ಈ ವಿಷಯಗಳ ಅಭ್ಯರ್ಥಿಗಳು ಫಲಿತಾಂಶ ಪರಿಶೀಲಿಸಲು ಪ್ರಯತ್ನಿಸಿದಾಗ “Invalid Application Number/Password” ಎಂಬ ಸಂದೇಶ ಕಾಣಿಸಿಕೊಳ್ಳಬಹುದು. ಮರುಪರೀಕ್ಷೆ ಪೂರ್ಣಗೊಂಡ ಬಳಿಕವೇ ಈ ಅಭ್ಯರ್ಥಿಗಳ ಫಲಿತಾಂಶ ಮತ್ತು ಸ್ಕೋರ್‌ಕಾರ್ಡ್ ಪ್ರಕಟಿಸಲಾಗುತ್ತದೆ.
ಮರುಪರೀಕ್ಷೆ ಯಾವಾಗ?
ಇಂಗ್ಲಿಷ್: ಸೆಪ್ಟೆಂಬರ್ 9, ಶಿಫ್ಟ್ 1
ಕಾಮರ್ಸ್: ಸೆಪ್ಟೆಂಬರ್ 9, ಶಿಫ್ಟ್ 2
ಸೋಶಿಯಾಲಜಿ: ಸೆಪ್ಟೆಂಬರ್ 10, ಶಿಫ್ಟ್ 1
ಮರುಪರೀಕ್ಷೆ ಪೂರ್ಣಗೊಂಡ ನಂತರ ಈ ಮೂರು ವಿಷಯಗಳ ಫಲಿತಾಂಶವನ್ನು NTA ಪ್ರತ್ಯೇಕವಾಗಿ ಪ್ರಕಟಿಸಲಿದೆ.

