HomeBusinessಅನುಭವಕ್ಕಿಂತ ಗ್ರಹಿಕೆ ಮುಖ್ಯ: ಕಂಪನಿಗೆ ಎದುರಾಗಿದ್ದ ಬೃಹತ್ ನಷ್ಟ ತಪ್ಪಿಸಿದ ಯುವ ಉದ್ಯೋಗಿ

ಅನುಭವಕ್ಕಿಂತ ಗ್ರಹಿಕೆ ಮುಖ್ಯ: ಕಂಪನಿಗೆ ಎದುರಾಗಿದ್ದ ಬೃಹತ್ ನಷ್ಟ ತಪ್ಪಿಸಿದ ಯುವ ಉದ್ಯೋಗಿ

ಸಂಸ್ಥೆಯಲ್ಲಿ ಅನುಭವ ಮಾತ್ರವೇ ಮುಖ್ಯವಲ್ಲ, ಸೂಕ್ಷ್ಮ ಗ್ರಹಿಕೆ ಮತ್ತು ಕೌಶಲ್ಯವೂ ಅಷ್ಟೇ ಪ್ರಮುಖ ಎಂಬುದಕ್ಕೆ ನೈಜ ಉದಾಹರಣೆಯೊಂದು ಬೆಳಕಿಗೆ ಬಂದಿದೆ. ಕೆಲಸಕ್ಕೆ ಸೇರಿದ ಮೊದಲ ದಿನವೇ ನೂತನ ಉದ್ಯೋಗಿಯೊಬ್ಬರು ಮೇಲಾಧಿಕಾರಿಗಳ ಕಣ್ಣು ತಪ್ಪಿದ್ದ ದೊಡ್ಡ ಪ್ರಮಾದವೊಂದನ್ನು ಪತ್ತೆ ಹಚ್ಚುವ ಮೂಲಕ ಕಂಪನಿಗೆ ಉಂಟಾಗಬಹುದಾಗಿದ್ದ ಬೃಹತ್ ಆರ್ಥಿಕ ನಷ್ಟ ಹಾಗೂ ಕಾನೂನು ಸಂಕಷ್ಟವನ್ನು ತಪ್ಪಿಸಿದ್ದಾರೆ.

ಇತ್ತೀಚೆಗೆ ಪ್ರಮುಖ ಬಿಸಿನೆಸ್ ಶಾಲೆಯಿಂದ ಪದವಿ ಮುಗಿಸಿ ಉದ್ಯೋಗಕ್ಕೆ ಸೇರಿದ್ದ ಯುವಕನಿಗೆ ಸಂಸ್ಥೆಯ ಸಕ್ರಿಯ ಗ್ರಾಹಕರ ಖಾತೆಗಳ ವಿವರ ಪರಿಶೀಲಿಸುವ ಜವಾಬ್ದಾರಿ ನೀಡಲಾಗಿತ್ತು. ಅದೇ ದಿನದಂದು ಸಂಸ್ಥೆಯ ಹಿರಿಯ ಅಧಿಕಾರಿಯೊಬ್ಬರು ಪ್ರಮುಖ ಗ್ರಾಹಕರಿಗೆ ಕಳುಹಿಸಬೇಕಿದ್ದ ವರದಿಯನ್ನು ಎರಡು ಬಾರಿ ಕೂಲಂಕಷವಾಗಿ ಪರಿಶೀಲಿಸಿ ಅನುಮೋದನೆ ನೀಡಿ ಇಮೇಲ್ ಮೂಲಕ ರವಾನಿಸಿದ್ದರು. ಈ ಇಮೇಲ್ ಪ್ರತಿ ನೂತನ ಉದ್ಯೋಗಿಗೂ ತಲುಪಿತ್ತು. ವರದಿಯನ್ನು ಗಮನಿಸಿದ ಆ ನವೋದ್ಯೋಗಿ ತಕ್ಷಣವೇ ಹಿರಿಯ ಅಧಿಕಾರಿಯ ಬಳಿ ತೆರಳಿ, ವರದಿಯ ನಾಲ್ಕನೇ ಪುಟದಲ್ಲಿದ್ದ ಲೆಕ್ಕಾಚಾರದ ಪ್ರಮಾದವನ್ನು ಬೆಟ್ಟು ಮಾಡಿ ತೋರಿಸಿದ್ದಾರೆ.

ಆರಂಭದಲ್ಲಿ ಅಧಿಕಾರಿಗೆ ಈ ಲೆಕ್ಕಾಚಾರ ಸರಿ ಇದೆ ಎಂದೇ ಅನಿಸಿತ್ತು. ಆದರೆ ಹೊಸ ಉದ್ಯೋಗಿಯ ಮನವಿಯ ಮೇರೆಗೆ ಮರುಪರಿಶೀಲಿಸಿದಾಗ ಪ್ರಮಾದ ನಡೆದಿರುವುದು ಸ್ಪಷ್ಟವಾಯಿತು. ಈ ಒಂದು ಸಣ್ಣ ತಪ್ಪಿನಿಂದ ಗ್ರಾಹಕರಿಗೆ ಸುಮಾರು 30 ಲಕ್ಷ ರೂಪಾಯಿ ನಷ್ಟವಾಗುವ ಸಾಧ್ಯತೆಯಿತ್ತು. ಜೊತೆಗೆ ಸಂಸ್ಥೆಯ ಮೇಲೆ ಕಾನೂನು ಕ್ರಮ ಜರುಗುವ ಭೀತಿಯೂ ಇತ್ತು. ತಕ್ಷಣವೇ ಕಾರ್ಯಪ್ರವೃತ್ತರಾದ ಅಧಿಕಾರಿಗಳು ತಿದ್ದುಪಡಿ ಮಾಡಿದ ಹೊಸ ವರದಿಯನ್ನು ಗ್ರಾಹಕರಿಗೆ ಕಳುಹಿಸಿ ಕ್ಷಮೆ ಯಾಚಿಸಿದರು. ಸಂಸ್ಥೆಯ ಈ ಪ್ರಾಮಾಣಿಕ ನಡೆಗೆ ಮೆಚ್ಚುಗೆ ವ್ಯಕ್ತಪಡಿಸಿದ ಗ್ರಾಹಕರು, ಗುತ್ತಿಗೆಯನ್ನು ಮುಂದುವರಿಸಿದ್ದಲ್ಲದೆ ಮತ್ತೊಂದು ಯೋಜನೆಯ ಜವಾಬ್ದಾರಿಯನ್ನೂ ಅದೇ ತಂಡಕ್ಕೆ ನೀಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಹಿಂದೆ ಬೇರೊಂದು ಸಂಸ್ಥೆಯಲ್ಲಿ ಇಂಟರ್ನ್ ಶಿಪ್ ಮಾಡುವಾಗ ಇಂತಹುದೇ ತಪ್ಪನ್ನು ಎತ್ತಿ ತೋರಿಸಿದ್ದಕ್ಕಾಗಿ ತಮಗೆ ಕೆಲಸದಿಂದ ತೆಗೆದುಹಾಕಲಾಗಿತ್ತು ಎಂದು ಆ ಯುವಕ ಹಂಚಿಕೊಂಡಿದ್ದಾರೆ. ಆದರೆ ಪ್ರಸ್ತುತ ಸಂಸ್ಥೆಯ ಮುಖ್ಯಸ್ಥ ಅಭಿಷೇಕ್ ಅಗರ್ವಾಲ್ ಅವರು ನವೋದ್ಯೋಗಿಯ ಧೈರ್ಯ ಮತ್ತು ಜಾಣ್ಮೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಹಿರಿಯ ಅಧಿಕಾರಿಗಳು ಮತ್ತು ಸಂಸ್ಥೆಗಳು ಹೊಸಬರ ಆಲೋಚನೆಗೆ ಜಾಗ ನೀಡಬೇಕು ಹಾಗೂ ಯಾವುದೇ ಭಯವಿಲ್ಲದೆ ಅಭಿಪ್ರಾಯ ಹಂಚಿಕೊಳ್ಳುವ ವಾತಾವರಣ ನಿರ್ಮಿಸಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಉದ್ಯೋಗಿಯ ಈ ಸಮಯಪ್ರಜ್ಞೆ ಮತ್ತು ಧೈರ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular