ದೆಹಲಿಯಂತಹ ಮಹಾನಗರಗಳಲ್ಲಿ ಬಾಡಿಗೆದಾರರು ಮತ್ತು ಮನೆ ಮಾಲೀಕರ ನಡುವಿನ ಸಂಬಂಧ ಯಾವಾಗಲೂ ಅಷ್ಟಕಷ್ಟೇ. ಆದರೆ ಈಶಾನ್ಯ ಭಾರತದ ಯುವತಿಯೊಬ್ಬರು ನೀಡಿದ ಒಂದು ಪುಟ್ಟ ಉಡುಗೊರೆ ಅವರ ಮನೆ ಮಾಲೀಕನೊಂದಿಗಿನ ಬಾಂಧವ್ಯವನ್ನೇ ಬದಲಿಸಿದೆ. ಅಚ್ಚರಿಯೆಂದರೆ ಆ ಉಡುಗೊರೆ ಯಾವುದೇ ಬೆಲೆಬಾಳುವ ವಸ್ತುವಲ್ಲ, ಬದಲಾಗಿ ಅದು ಅಪ್ಪಟ ಅರುಣಾಚಲ ಪ್ರದೇಶದ ‘ಪೊರಕೆ’ (Jhaadu)!
ಪೊರಕೆ ಕೊಟ್ಟಿದ್ದೇ ಅಸಲಿ ಮ್ಯಾಜಿಕ್! ಇನ್‌ಸ್ಟಾಗ್ರಾಮ್ ಬಳಕೆದಾರರಾದ @shellcopter ಅವರು ಈ ವಿಡಿಯೋ ಹಂಚಿಕೊಂಡಿದ್ದಾರೆ. ತಾವು ದೆಹಲಿಗೆ ಬಂದಾಗ ಅಲ್ಲಿನ ಪೊರಕೆಗಳ ಗುಣಮಟ್ಟ ಕಂಡು ಬೇಸರವಾಗಿತ್ತಂತೆ. ಅವು ಬಹಳ ಬೇಗ ಹರಿದು ಹೋಗುತ್ತಿದ್ದವು. ಆದರೆ ಈಶಾನ್ಯ ಭಾರತದ ಪೊರಕೆಗಳು ಹೆಚ್ಚು ಗಟ್ಟಿಮುಟ್ಟಾಗಿರುತ್ತವೆ. ಒಮ್ಮೆ ಊರಿಗೆ ಹೋಗಿ ಬರುವಾಗ ಅವರ ತಾಯಿ ತರಕಾರಿ ಮತ್ತು ಆಹಾರ ಪದಾರ್ಥಗಳ ಜೊತೆ ಕೆಲವು ಸಾಂಪ್ರದಾಯಿಕ ಪೊರಕೆಗಳನ್ನು ನೀಡಿ ಕಳುಹಿಸಿದ್ದರು. ತಾಯಿಯ ಸಲಹೆಯಂತೆ ಒಂದು ಪೊರಕೆಯನ್ನು ಮನೆ ಮಾಲೀಕರಿಗೆ ಉಡುಗೊರೆಯಾಗಿ ನೀಡಿದ್ದೇ ತಡ, ಮಾಲೀಕರು ಅದರ ಗುಣಮಟ್ಟಕ್ಕೆ ಫಿದಾ ಆಗಿದ್ದಾರೆ.
ಇಂಟರ್ನೆಟ್‌ನಲ್ಲಿ ‘ಜಿಐ ಟ್ಯಾಗ್’ ಬೇಡಿಕೆ “ನಾನು ಸುಳ್ಳು ಹೇಳುತ್ತಿಲ್ಲ, ಆ ಒಂದು ಪೊರಕೆ ಎಲ್ಲವನ್ನೂ ಬದಲಿಸಿತು” ಎಂದು ಅವರು ವಿಡಿಯೋದಲ್ಲಿ ಹೇಳಿದ್ದಾರೆ. ಈಗ ಅವರು ಊರಿಗೆ ಹೋದಾಗಲೆಲ್ಲ ಮನೆ ಮಾಲೀಕರು ಹಣ ಕೊಟ್ಟು ತಮಗೂ ಒಂದು ಪೊರಕೆ ತನ್ನಿ ಎಂದು ಕೇಳಿಕೊಳ್ಳುತ್ತಾರಂತೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ತಮಾಷೆಯಾಗಿ ಕಾಮೆಂಟ್ ಮಾಡುತ್ತಿದ್ದಾರೆ. “ಅರುಣಾಚಲದ ಈ ಪೊರಕೆಗೆ ಜಿಐ ಟ್ಯಾಗ್ (GI Tag) ನೀಡಬೇಕು” ಎಂದು ಕೆಲವರು ಒತ್ತಾಯಿಸಿದರೆ, ಇನ್ನು ಕೆಲವರು “ನಾವು ಪೊರಕೆಯಿಂದ ಒಂದಾಗಿದ್ದೇವೆ” (United by Jhaadu) ಎಂದು ಕಾಮೆಂಟ್ ಮಾಡಿದ್ದಾರೆ.
ಯಾವುದೇ ನಿರೀಕ್ಷೆಯಿಲ್ಲದೆ ನಿಮ್ಮ ಊರಿನ ಒಂದು ಉಪಯುಕ್ತ ವಸ್ತುವನ್ನು ಉಡುಗೊರೆಯಾಗಿ ನೀಡುವುದು ಬಾಂಧವ್ಯವನ್ನು ಗಟ್ಟಿಗೊಳಿಸುತ್ತದೆ ಎನ್ನುವುದು ಈ ಯುವತಿಯ ಅನುಭವದ ಮಾತು.
https://www.instagram.com/reel/DXPhFvIk-fp/?utm_source=ig_web_copy_link&igsh=MzRlODBiNWFlZA==

