ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕೆಲಸ ಸಿಗುವುದು ಸುಲಭವೇನೋ, ಆದರೆ ನೆಮ್ಮದಿಯಾದ ಒಂದು ಬಾಡಿಗೆ ಮನೆ ಹುಡುಕುವುದು ಮಾತ್ರ ಅಪ್ಪಟ ಸಾಹಸದ ಕೆಲಸ ಇತ್ತೀಚೆಗೆ ರೆಡಿಟ್ (Reddit) ಪೋಸ್ಟ್ ಒಂದರಲ್ಲಿ ಯುವಕನೊಬ್ಬ ಹಂಚಿಕೊಂಡಿರುವ ತನ್ನ ಮನೆ ಹುಡುಕಾಟದ ಕರುಣಾಜನಕ ಕಥೆ ಈಗ ಇಡೀ ಇಂಟರ್ನೆಟ್‌ನಲ್ಲಿ ಸಖತ್ ವೈರಲ್ ಆಗುತ್ತಿದೆ. ಬೆಂಗಳೂರಿನ ರಿಯಲ್ ಎಸ್ಟೇಟ್ ಮತ್ತು ಬಾಡಿಗೆ ಮಾರುಕಟ್ಟೆ ಎಷ್ಟು ಭಯಾನಕವಾಗಿದೆ ಎಂಬುದಕ್ಕೆ ಈ ಘಟನೆ ಕನ್ನಡಿ ಹಿಡಿದಿದೆ.
ಏನಿದು ಬೆಂಗಳೂರು ಹೌಸ್ ಹಂಟ್ ರಿಯಾಲಿಟಿ?
ಆ ವ್ಯಕ್ತಿ ಕಳೆದ 3 ವರ್ಷಗಳಿಂದ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಕೆಲಸ ಮಾಡುತ್ತಿದ್ದರು. ಜನವರಿ 1ರಂದು ಅವರಿಗೆ ಎಂ.ಜಿ. ರಸ್ತೆಯ (MG Road) ಕಂಪನಿಯೊಂದರಲ್ಲಿ ಹೊಸ ಕೆಲಸ ಸಿಕ್ಕಿತು. ಎಲೆಕ್ಟ್ರಾನಿಕ್ ಸಿಟಿಯಿಂದ ಎಂ.ಜಿ. ರಸ್ತೆಗೆ ದಿನವೂ 52 ಕಿಲೋಮೀಟರ್ ಓಡಾಡುವುದು ಕಷ್ಟ ಎಂದು ಭಾವಿಸಿ, ಫೆಬ್ರವರಿ 1ರೊಳಗೆ ಆಫೀಸ್ ಹತ್ತಿರವೇ ಮನೆ ಮಾಡಬೇಕೆಂದು ಅವರು ಪ್ಲಾನ್ ಮಾಡಿದ್ದರು. ಆದರೆ ಆ ಪ್ಲಾನ್ ಈಗ ಅವರ ಕೆಲಸಕ್ಕೇ ಕುತ್ತು ತಂದಿದೆ
https://www.reddit.com/user/Sufficient_Level_819
ಎದುರಿಸಿದ ಕಷ್ಟಗಳು ಒಂದೆರಡಲ್ಲ:
ಬಾಡಿಗೆಯ ಬಿಸಿ: ಇಂದಿರಾನಗರ, ದೊಮ್ಮಲೂರು, ವಿಕ್ಟೋರಿಯಾ ಲೇಔಟ್‌ನಂತಹ ಏರಿಯಾಗಳಲ್ಲಿ 25,000 ರೂಪಾಯಿ ಬಜೆಟ್‌ನಲ್ಲಿ ಒಂದು ಬೆಡ್‌ರೂಮ್ (1BHK) ಮನೆ ಹುಡುಕಲು ಹೊರಟ ಅವರಿಗೆ ಸಿಕ್ಕಿದ್ದು ನಿರಾಸೆ ಮಾತ್ರ. ಎಲ್ಲೂ ‘To-Let’ ಬೋರ್ಡ್‌ಗಳೇ ಕಾಣಿಸುತ್ತಿರಲಿಲ್ಲ.
ಬ್ರೋಕರ್ ಅವಾಂತರ: ಸುಮಾರು 8,000 ರೂಪಾಯಿಗಳನ್ನು ಪ್ರೀಮಿಯಂ ಹೌಸಿಂಗ್ ಆಪ್‌ಗಳಿಗೆ ಪಾವತಿಸಿದರೂ ಪ್ರಯೋಜನವಾಗಲಿಲ್ಲ. ಬ್ರೋಕರ್‌ಗಳು ಮನೆ ತೋರಿಸಲು ಹಣ ಕೇಳುವುದು ಮಾತ್ರವಲ್ಲದೆ, “ಇಷ್ಟವಿದ್ದರೆ ತಗೋ, ಇಲ್ಲದಿದ್ದರೆ ಬೇರೆಯವರಿಗೆ ಕೊಡ್ತೀವಿ” ಎಂಬ ಉದ್ಧಟತನದ ವರ್ತನೆ ತೋರುತ್ತಿದ್ದರು.
ಬಿಸಿಲು ಮತ್ತು ಟ್ರಾಫಿಕ್ ಕಾಟ: ಮಾರ್ಚ್ ತಿಂಗಳು ಶುರುವಾಗುತ್ತಿದ್ದಂತೆ ಬಿಸಿಲು ಏರಿತು. ದಿನಕ್ಕೆ 3 ಗಂಟೆಗೂ ಹೆಚ್ಚು ಕಾಲ ಟ್ರಾಫಿಕ್‌ನಲ್ಲಿ ಕಳೆದು, ಆಫೀಸ್ ಕೆಲಸ ಮುಗಿಸಿ ಮನೆ ಹುಡುಕುವಷ್ಟರಲ್ಲಿ ಆ ಯುವಕ ಸಂಪೂರ್ಣ ಸುಸ್ತಾಗಿ ಹೋಗಿದ್ದನು. “ನನ್ನಲ್ಲಿ ಶಕ್ತಿಯೇ ಉಳಿದಿಲ್ಲ” ಎಂದು ಅವರು ಅಳಲು ತೋಡಿಕೊಂಡಿದ್ದಾರೆ.
ಕೊನೆಯ ಕ್ಷಣದ ವಂಚನೆ: ಕೊನೆಗೆ ದೊಮ್ಮಲೂರಿನಲ್ಲಿ 26,000 ರೂಪಾಯಿಗೆ ಒಂದು ಚಿಕ್ಕ ಮನೆ ಫೈನಲ್ ಆಯಿತು. ಆದರೆ ಟೋಕನ್ ಹಣ ನೀಡುವ ಮೊದಲೇ ಬ್ರೋಕರ್ ಆತನನ್ನು ಬ್ಲಾಕ್ ಮಾಡಿ, ಆ ಮನೆಯನ್ನು ಬೇರೆಯವರಿಗೆ ಬಾಡಿಗೆಗೆ ನೀಡಿ ಕೈಕೊಟ್ಟಿದ್ದಾನೆ
ತಿಂಗಳುಗಟ್ಟಲೆ ಅಲೆದಾಡಿ, ಹಣ ಮತ್ತು ಶಕ್ತಿ ಎರಡನ್ನೂ ಕಳೆದುಕೊಂಡ ಆ ಯುವಕ ಈಗ ಎಷ್ಟು ಹತಾಶೆಗೊಂಡಿದ್ದಾನೆ ಎಂದರೆ, ನಾನು ಮನೆ ಹುಡುಕುವುದನ್ನು ನಿಲ್ಲಿಸಿದ್ದೇನೆ. ಈ ಮಾನಸಿಕ ಕಿರಿಕಿರಿಗಿಂತ ಕೆಲಸಕ್ಕೇ ರಾಜೀನಾಮೆ ನೀಡುವುದು ಉತ್ತಮ ಎಂದು ಬರೆದುಕೊಂಡಿದ್ದಾನೆ. ಬೆಂಗಳೂರಿನ ರಿಯಲ್ ಎಸ್ಟೇಟ್ ಒಂದು ದೊಡ್ಡ ಜೋಕ್ ಎಂದು ಅವರು ಕಿಡಿಕಾರಿದ್ದಾರೆ.
ನೆಟ್ಟಿಗರ ಪ್ರತಿಕ್ರಿಯೆ ಹೇಗಿದೆ?
ಈ ಪೋಸ್ಟ್‌ಗೆ ಸಾವಿರಾರು ಜನರು ಪ್ರತಿಕ್ರಿಯಿಸಿದ್ದು, ತಮ್ಮ ಕಹಿ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದಾರೆ:
“ಬೆಂಗಳೂರಿನಲ್ಲಿ ಮನೆಗಳು ಬೆಂಕಿಪೊಟ್ಟಣದಷ್ಟು ಚಿಕ್ಕದಾಗಿವೆ, ಆದರೆ ಬಾಡಿಗೆ ಮಾತ್ರ ಆಕಾಶ ಮುಟ್ಟುತ್ತಿದೆ!” ಎಂದು ಒಬ್ಬರು ಬರೆದಿದ್ದಾರೆ.
“ಇಂದಿರಾನಗರ ಬಿಟ್ಟು ಮಲ್ಲೇಶ್ವರಂ ಅಥವಾ ರಾಜಾಜಿನಗರದ ಕಡೆ ನೋಡಿ, ಅಲ್ಲಿ ಬಾಡಿಗೆ ಕಡಿಮೆ ಮತ್ತು ಎಂ.ಜಿ. ರಸ್ತೆಗೆ ಬರಲು ಸುಲಭ” ಎಂದು ಕೆಲವರು ಸಲಹೆ ನೀಡಿದ್ದಾರೆ.
“ನನ್ನ ಬಜೆಟ್ 40,000 ರೂ. ಆದರೂ ನನಗೆ ಇನ್ನೂ ಒಳ್ಳೆಯ ಮನೆ ಸಿಕ್ಕಿಲ್ಲ” ಎಂದು ಮತ್ತೊಬ್ಬರು ಅಳಲು ತೋಡಿಕೊಂಡಿದ್ದಾರೆ.

