ಹಾಸನ: ಪ್ರಸ್ತುತ ಜಲಾಶಯಗಳ ಒಳಹರಿವು ಸಾಮಾನ್ಯಕ್ಕಿಂತ ಕಡಿಮೆಯಾಗಿದ್ದು, ಜಿಲ್ಲೆಯ ಜನ-ಜಾನುವಾರುಗಳಿಗೆ ಕುಡಿಯುವ ನೀರಿಗೆ ತೊಂದರೆಯಾಗದಂತೆ ರಾಷ್ಟ್ರೀಯ ಹಾಗೂ ರಾಜ್ಯ ಜಲನೀತಿಗಳನ್ವಯ ಜಲಾಶಯಗಳಲ್ಲಿ ಲಭ್ಯವಿರುವ ನೀರನ್ನು ಆದ್ಯತೆಯ ಮೇರೆಗೆ ಕುಡಿಯುವ ನೀರಿಗೆ ಮೀಸಲಿರಿಸಬೇಕಾಗಿರುತ್ತದೆ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಜಿಲ್ಲಾಧಿಕಾರಿಗಳಾದ ಲತಾಕುಮಾರಿ ಅವರು ತಿಳಿಸಿದ್ದಾರೆ.
ಮುಂಬರುವ ದಿನಗಳಲ್ಲಿ ಎಲ್-ನಿನೊ ಪರಿಣಾಮದಿಂದ ಮಳೆಯ ಕೊರತೆ ಉಂಟಾಗುವ ಸಾಧ್ಯತೆ ಇರುವುದಾಗಿ ಭಾರತೀಯ ಹವಾಮಾನ ಇಲಾಖೆಯು ಸೂಚನೆ ನೀಡಿರುವುದರಿಂದ ರಾಜ್ಯದ ಹಲವು ಕಡೆ ಬರ ಪರಿಸ್ಥಿತಿ ಉಂಟಾಗುವ ಸಾಧ್ಯತೆ ಇರುವುದರಿಂದ ಜಲಾಶಯ ನಂಬಿಕೊAಡು ಯಾವ ರೈತರೂ ಬೆಳೆ ಹಾಕಬೇಡಿ ಎಂದು ಮುಖ್ಯಮಂತ್ರಿಗಳು ತಿಳಿಸಿರುತ್ತಾರೆ.
ಮುಂದಿನ ದಿನಗಳಲ್ಲಿ ಜನ-ಜಾನುವಾರುಗಳಿಗೆ ಕುಡಿಯುವ ನೀರಿಗೆ ತೊಂದರೆ ಉಂಟಾಗದಂತೆ ಜಿಲ್ಲೆಯ ಜಲಾಶಯಗಳಲ್ಲಿನ ನೀರನ್ನು ಕುಡಿಯುವ ನೀರಿಗೆ ಕಾಯ್ದಿರಿಸಲು ನಿರ್ದೇಶನಗಳಿರುವುದರಿಂದ ಜಿಲ್ಲೆಯ ರೈತ ಬಾಂಧವರು ಜಲಾಶಯದ ನೀರನ್ನು ಅವಲಂಬಿಸಿರುವ ಬೆಳೆಗಳನ್ನು ಹಾಗೂ ಅಧಿಕ ನೀರು ಬೇಡುವ ಬೆಳೆಗಳನ್ನು(ಭತ್ತ, ಕಬ್ಬು, ಇತ್ಯಾದಿ)ಬೆಳೆಗಳನ್ನು ಬೆಳೆಯದಂತೆ ಹಾಗೂ ಎಲ್ಲಾ ರೈತ ಬಾಂಧವರು ಪರಿಸ್ಥಿತಿಯ ಗಂಭೀರತೆಯನ್ನು ಅರ್ಥಮಾಡಿಕೊಂಡು ಕೃಷಿ ಇಲಾಖಾಧಿಕಾರಿಗಳು ನೀಡುವ ಸಲಹೆಯಂತೆ ಮಳೆ ಆಶ್ರಿತ ಬೆಳೆಗಳನ್ನು ಬೆಳೆಯುವಂತೆ ತಿಳಿಸಿದ್ದಾರೆ.

