ನಮ್ಮ ಸುತ್ತಮುತ್ತ ಸುಲಭವಾಗಿ ಸಿಗುವ ಹಣ್ಣುಗಳಲ್ಲಿ ಸೀಬೆಹಣ್ಣು ಅಂದರೆ ಪೇರಲ ಹಣ್ಣು ಕೂಡ ಒಂದು. ಸೀಬೆಹಣ್ಣಿನ ಆರೋಗ್ಯ ಗುಣಗಳ ಬಗ್ಗೆ ಎಲ್ಲರಿಗೂ ಗೊತ್ತು. ಆದರೆ ಕೇವಲ ಹಣ್ಣು ಮಾತ್ರವಲ್ಲದೆ ಅದರ ಎಲೆಗಳು ಕೂಡ ಹತ್ತಾರು ಆರೋಗ್ಯ ಸಮಸ್ಯೆಗಳಿಗೆ ರಾಮಬಾಣ ಎಂಬುದು ಹಲವರಿಗೆ ತಿಳಿದಿಲ್ಲ. ಆಯುರ್ವೇದದಲ್ಲಿ ಸೀಬೆ ಎಲೆಗಳಿಗೆ ವಿಶೇಷ ಸ್ಥಾನವಿದ್ದು, ಪ್ರತಿದಿನ ಬೆಳಿಗ್ಗೆ ಇವುಗಳ ಬಳಕೆಯಿಂದ ದೇಹಕ್ಕೆ ಹಲವಾರು ಅದ್ಭುತ ಪ್ರಯೋಜನಗಳು ಸಿಗುತ್ತವೆ.
ಸೀಬೆ ಎಲೆಯ ಪ್ರಮುಖ ಆರೋಗ್ಯ ಗುಣಗಳು
ಇತ್ತೀಚಿನ ದಿನಗಳಲ್ಲಿ ವಯಸ್ಸಿನ ಭೇದವಿಲ್ಲದೆ ಕಾಡುವ ಮಧುಮೇಹ ಅಥವಾ ಸಕ್ಕರೆ ಕಾಯಿಲೆಯನ್ನು ನಿಯಂತ್ರಣದಲ್ಲಿಡಲು ಸೀಬೆ ಎಲೆಗಳು ತುಂಬಾ ಸಹಕಾರಿ. ಪ್ರತಿದಿನ ಬೆಳಿಗ್ಗೆ ಸೀಬೆ ಎಲೆಗಳನ್ನು ನೀರಿನಲ್ಲಿ ಕುದಿಸಿ ಆ ಕಷಾಯವನ್ನು ಕುಡಿಯುವುದರಿಂದ ರಕ್ತದಲ್ಲಿನ ಸಕ್ಕರೆ ಪ್ರಮಾಣ ಗಣನೀಯವಾಗಿ ನಿಯಂತ್ರಣಕ್ಕೆ ಬರುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಇದು ಇನ್ಸುಲಿನ್ ಮಟ್ಟವನ್ನು ಸಮತೋಲನದಲ್ಲಿಡಲು ಸಹಾಯ ಮಾಡುತ್ತದೆ.
ಇದಲ್ಲದೆ ಇಂದಿನ ಒತ್ತಡದ ಜೀವನಶೈಲಿ ಮತ್ತು ತಪ್ಪು ಆಹಾರ ಪದ್ಧತಿಯಿಂದಾಗಿ ಹೆಚ್ಚಾಗುತ್ತಿರುವ ಕೊಲೆಸ್ಟ್ರಾಲ್ ಸಮಸ್ಯೆಗೆ ಸೀಬೆ ಎಲೆಗಳು ಉತ್ತಮ ಪರಿಹಾರ ನೀಡುತ್ತವೆ. ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಿ, ಹೃದಯದ ಆರೋಗ್ಯವನ್ನು ವೃದ್ಧಿಸುವಲ್ಲಿ ಈ ಎಲೆಗಳು ಪ್ರಮುಖ ಪಾತ್ರ ವಹಿಸುತ್ತವೆ.
ಜೀರ್ಣಕ್ರಿಯೆ ಮತ್ತು ತೂಕ ಇಳಿಕೆಗೆ ಸಹಕಾರಿ
ಸೀಬೆ ಎಲೆಗಳಲ್ಲಿ ಆಂಟಿ ಬ್ಯಾಕ್ಟೀರಿಯಲ್ ಗುಣಗಳು ಹೆಚ್ಚಾಗಿದ್ದು, ಇವು ಹೊಟ್ಟೆಯ ಆರೋಗ್ಯವನ್ನು ಕಾಪಾಡುತ್ತವೆ. ಗ್ಯಾಸ್ಟ್ರಿಕ್, ಮಲಬದ್ಧತೆ ಮತ್ತು ಅಜೀರ್ಣದಂತಹ ಜೀರ್ಣಕ್ರಿಯೆಯ ತೊಂದರೆಗಳಿಂದ ಬಳಲುತ್ತಿರುವವರು ಈ ಎಲೆಗಳ ಕಷಾಯ ಸೇವಿಸುವುದರಿಂದ ಉತ್ತಮ ಉಪಶಮನ ಸಿಗುತ್ತದೆ.
ಇನ್ನು ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಸೀಬೆ ಎಲೆಗಳು ಅತ್ಯುತ್ತಮ ಮನೆಮದ್ದಾಗಿದೆ. ಇದು ದೇಹದಲ್ಲಿನ ಚಯಾಪಚಯ ಕ್ರಿಯೆಯನ್ನು ಅಂದರೆ ಮೆಟಾಬಾಲಿಸಂ ಪ್ರಕ್ರಿಯೆಯನ್ನು ಉತ್ತಮಪಡಿಸಿ, ಅನಗತ್ಯ ಬೊಜ್ಜು ಕರಗಿಸಲು ನೆರವಾಗುತ್ತದೆ. ದಿನನಿತ್ಯದ ಆಹಾರ ಕ್ರಮದಲ್ಲಿ ಈ ನೈಸರ್ಗಿಕ ಎಲೆಗಳನ್ನು ಬಳಸುವುದರಿಂದ ರೋಗನಿರೋಧಕ ಶಕ್ತಿಯೂ ಹೆಚ್ಚುತ್ತದೆ.

