ಬೆಂಗಳೂರು: ಮಹಾರಾಷ್ಟ್ರ ಸರ್ಕಾರವು ಉಜ್ಜಿನಿ ಬಳಿ 40 ಟಿಎಂಸಿ ಸಾಮರ್ಥ್ಯದ ಅಣೆಕಟ್ಟು ನಿರ್ಮಿಸಲು ಮುಂದಾಗಿದೆ ಎಂಬ ಮಾಹಿತಿ ಲಭ್ಯವಾಗಿದ್ದು, ಇದನ್ನು ವಿರೋಧಿಸಿ ಕೇಂದ್ರ ಸರ್ಕಾರ ಮತ್ತು ಮಹಾರಾಷ್ಟ್ರಕ್ಕೆ ಪತ್ರ ಬರೆಯುವುದಾಗಿ ವಾಣಿಜ್ಯ ಮತ್ತು ಕೈಗಾರಿಕೆ, ಮೂಲಸೌಕರ್ಯ ಸಚಿವ ಎಂ,ಬಿ. ಪಾಟೀಲ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಯೋಜನೆಯಿಂದ ಕೃಷ್ಣಾ ನದಿ ನೀರಿನ ವಿಚಾರದಲ್ಲಿ ಕರ್ನಾಟಕ, ತೆಲಂಗಾಣ ಮತ್ತು ಆಂಧ್ರಪ್ರದೇಶ ರಾಜ್ಯಗಳಿಗೆ ಅನ್ಯಾಯವಾಗುವ ಸಾಧ್ಯತೆಯಿದೆ. ಆದ್ದರಿಂದ ಈ ಯೋಜನೆಯ ವಿರುದ್ಧ ಕೇಂದ್ರ ಜಲಸಂಪನ್ಮೂಲ ಸಚಿವರು ಹಾಗೂ ಮಹಾರಾಷ್ಟ್ರ ಮುಖ್ಯಮಂತ್ರಿಗಳಿಗೆ ಪತ್ರ ಬರೆಯಲಿದ್ದೇನೆ ಎಂದು ಹೇಳಿದ್ದಾರೆ.
ಮಹಾರಾಷ್ಟ್ರದ ಈ ನಿರ್ಧಾರವು ಕೃಷ್ಣಾ ಜಲವಿವಾದ ನ್ಯಾಯಾಧಿಕರಣದ ತೀರ್ಪಿಗೆ ವಿರುದ್ಧವಾಗಿದೆ. ನ್ಯಾಯಾಧಿಕರಣದ ತೀರ್ಪಿಗೆ ವಿರುದ್ಧವಾದ ಇಂತಹ ಯೋಜನೆಗೆ ವಿಶ್ವಬ್ಯಾಂಕ್ ಹೇಗೆ ಹಣಕಾಸು ನೆರವು ನೀಡುತ್ತದೆ ಎಂಬ ಪ್ರಶ್ನೆಯೂ ಉದ್ಭವಿಸುತ್ತದೆ ಎಂದು ತಿಳಿಸಿದ್ದಾರೆ.
ಎಥೆನಾಲ್ ಗೊಂದಲಕ್ಕೆ ಕೇಂದ್ರ ಸರ್ಕಾರವೇ ಕಾರಣ
ಎಥೆನಾಲ್ ಉತ್ಪಾದನೆಗೆ ಅಗತ್ಯಕ್ಕಿಂತ ಹೆಚ್ಚು ಒತ್ತು ನೀಡಿದ ಕೇಂದ್ರದ ಬಿಜೆಪಿ ಸರ್ಕಾರ, ಈಗ ಉತ್ಪಾದನೆಯಾದ ಶೇ. 20–30ರಷ್ಟನ್ನೂ ಖರೀದಿಸದಿರುವುದು ವಿಪರ್ಯಾಸ. ಈ ವಿಚಾರದಲ್ಲಿ ನಮ್ಮ ನಾಯಕರಾದ ರಾಹುಲ್ ಗಾಂಧಿ ಹಾಗೂ ಸಚಿವರಾದ ರಿಜ್ವಾನ್ ಅರ್ಷದ್ ಅವರು ವ್ಯಕ್ತಪಡಿಸಿರುವ ಅನುಮಾನ ಮತ್ತು ಆರೋಪಗಳಲ್ಲಿ ಸತ್ಯಾಂಶವಿದೆ. ಎಥೆನಾಲ್ ಉದ್ಯಮ ಇಂದು ಎದುರಿಸುತ್ತಿರುವ ಸಮಸ್ಯೆಗಳಿಗೆ ಕೇಂದ್ರ ಸರ್ಕಾರದ ಅವೈಜ್ಞಾನಿಕ ನಿರ್ಧಾರಗಳು ಮತ್ತು ಎಡವಟ್ಟುಗಳೇ ಕಾರಣ ಎಂದು ಹೇಳಿದ್ದಾರೆ.
ಮೊದಲು ಎಥೆನಾಲ್ ಉತ್ಪಾದನೆ ಮಾಡುವಂತೆ ಉದ್ಯಮಗಳಿಗೆ ಸೂಚಿಸಿದ ಮೇಲೆ, ಉತ್ಪಾದನೆಯಾದ ಎಥೆನಾಲ್ ಅನ್ನು ಖರೀದಿಸುವ ಜವಾಬ್ದಾರಿಯೂ ಕೇಂದ್ರ ಸರ್ಕಾರದ್ದಾಗಿದೆ. ಆದರೆ ಇ-10, ಇ-20, ಇ-30 ಎಂದು ಮನಸ್ಸಿಗೆ ಬಂದಂತೆ ನೀತಿಗಳನ್ನು ಪ್ರಕಟಿಸಿ, ಈಗ ಉತ್ಪಾದನೆಯಾದ ಎಥೆನಾಲ್ ನ ಶೇ. 20–30ರಷ್ಟನ್ನೂ ಖರೀದಿಸದಿದ್ದರೆ ಉದ್ಯಮಗಳು ಏನು ಮಾಡಬೇಕು ಎಂದು ಪ್ರಶ್ನಿಸಿದ್ದಾರೆ.
ಪೆಟ್ರೋಲ್ ನಲ್ಲಿ ನಿಗದಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಎಥೆನಾಲ್ ಮಿಶ್ರಣ ಮಾಡಿರುವ ಕುರಿತು ತನಿಖೆ ನಡೆಸಬೇಕು ಎಂಬ ರಾಹುಲ್ ಗಾಂಧಿಯವರ ಆಗ್ರಹ ನ್ಯಾಯಯುತವಾಗಿದೆ. ಆರೋಪಗಳನ್ನು ನಿರಾಕರಿಸಿದ ಮಾತ್ರಕ್ಕೆ ಎಲ್ಲವೂ ಸರಿಯಾಗಿದೆ ಎಂದರ್ಥವಲ್ಲ. ಈ ವಿಚಾರದಲ್ಲಿ ರಾಜ್ಯ ಸರ್ಕಾರವೂ ಅಗತ್ಯ ಕ್ರಮ ಕೈಗೊಳ್ಳಲಿದೆ. ಆಹಾರ ಸಚಿವ ರಿಜ್ವಾನ್ ಅರ್ಷದ್ ಅವರು ಈ ಬಗ್ಗೆ ಸೂಕ್ತ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದರು.
ಹಾಸನ ಜಿಲ್ಲಾಧಿಕಾರಿ ವಿಚಾರ: ಕುಮಾರಸ್ವಾಮಿ ಆರೋಪ ಆಧಾರರಹಿತ
ಹಾಸನ ಜಿಲ್ಲಾಧಿಕಾರಿಯನ್ನು ಅದೇ ಹುದ್ದೆಯಲ್ಲಿ ಮುಂದುವರಿಸಿರುವ ವಿಚಾರವಾಗಿ ಕೇಂದ್ರ ಸಚಿವ ಕುಮಾರಸ್ವಾಮಿ ಮಾಡಿರುವ ಆರೋಪಗಳು ಆಧಾರರಹಿತವಾಗಿವೆ. ಸ್ವತಃ ಮುಖ್ಯಮಂತ್ರಿಗಳಾಗಿದ್ದವರು ಇಂತಹ ಆಧಾರರಹಿತ ಹೇಳಿಕೆಗಳನ್ನು ನೀಡಬಾರದು. ಜಿಲ್ಲಾಧಿಕಾರಿಯ ಬಳಿ ಯಾರಾದರೂ ಹಣ ಪಡೆಯುತ್ತಾರೆಯೇ? ಪ್ರತಿನಿತ್ಯ ಇಲ್ಲಸಲ್ಲದ ಆರೋಪಗಳನ್ನು ಮಾಡುವುದನ್ನು ಅವರು ಬಿಡಬೇಕು ಎಂದರು.
ವಾಹನ ಪರೀಕ್ಷಾ ಕೇಂದ್ರಕ್ಕೆ 500 ಎಕರೆ ನೀಡಲೂ ಸಿದ್ಧ
ಕುಮಾರಸ್ವಾಮಿ ಅವರು ಕೇಂದ್ರ ಕೈಗಾರಿಕಾ ಸಚಿವರಾಗಿ ಮಂಡ್ಯದಲ್ಲಿ ವಾಹನ ಪರೀಕ್ಷಾ ಮತ್ತು ತರಬೇತಿ ಕೇಂದ್ರ ಸ್ಥಾಪಿಸಲು ಮೊದಲು 100 ಎಕರೆ ಜಮೀನು ಕೇಳಿದ್ದರು. ಅದಕ್ಕೆ ನಾವು ಒಪ್ಪಿಗೆ ನೀಡಿದ್ದೆವು. ಈಗ 500 ಎಕರೆ ಬೇಕೆಂದರೂ ಅದಕ್ಕೂ ನಾವು ಸಿದ್ಧರಿದ್ದೇವೆ. ಮುಖ್ಯಮಂತ್ರಿಗಳು ಈ ಬಗ್ಗೆ ಸೂಕ್ತ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದರು.
ರಾಜ್ಯಕ್ಕೆ ಇಂತಹ ಕೇಂದ್ರವನ್ನು ತರುತ್ತಿರುವುದು ಸ್ವಾಗತಾರ್ಹ. ಆದರೆ, ಅದೊಂದೇ ಸಾಕಾಗುವುದಿಲ್ಲ. ಅವರಿಗೆ ನಿಜವಾಗಿಯೂ ರಾಜ್ಯದ ಹಿತಾಸಕ್ತಿ ಮುಖ್ಯವಾಗಿದ್ದರೆ, ಕರ್ನಾಟಕಕ್ಕೆ ನಾಲ್ಕು ಸೆಮಿಕಂಡಕ್ಟರ್ ಕಂಪನಿಗಳನ್ನು ತರಲು ಪ್ರಯತ್ನಿಸಲಿ. ರಾಜ್ಯಕ್ಕೆ ಬರಲು ಆಸಕ್ತಿ ತೋರುತ್ತಿರುವ ಕಂಪನಿಗಳಿಗೆ ಪಿಎಲ್‌ಐ ಪ್ರೋತ್ಸಾಹಧನದ ಆಮಿಷವೊಡ್ಡಿ, ಬಿಜೆಪಿ ಆಡಳಿತವಿರುವ ಅಸ್ಸಾಂ, ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯಗಳಿಗೆ ಕರೆದೊಯ್ಯುತ್ತಿರುವ ಕೇಂದ್ರ ಸರ್ಕಾರದ ಕ್ರಮದ ಬಗ್ಗೆಯೂ ಅವರು ಧ್ವನಿ ಎತ್ತಲಿ. ಹೋಂಡಾ ಕಂಪನಿ ಕರ್ನಾಟಕದಿಂದ ಹೊರಹೋಗುತ್ತಿದೆ ಎಂಬ ಅವರ ಹೇಳಿಕೆಯೂ ಸತ್ಯಕ್ಕೆ ದೂರವಾಗಿದೆ ಎಂದು ಎಂ.ಬಿ. ಪಾಟೀಲ್ ಹೇಳಿದ್ದಾರೆ.

