HomeIndiaBig Breaking News: ಬಿಹಾರ ಸಿಎಂ ನಿತೀಶ್ ಕುಮಾರ್ ರಾಜೀನಾಮೆ ಸಾಧ್ಯತೆ

Big Breaking News: ಬಿಹಾರ ಸಿಎಂ ನಿತೀಶ್ ಕುಮಾರ್ ರಾಜೀನಾಮೆ ಸಾಧ್ಯತೆ

ಬಿಹಾರ ರಾಜ್ಯದ ರಾಜಕೀಯದಲ್ಲಿ ಮಹತ್ವದ ಬದಲಾವಣೆ ನಡೆಯಲಿದೆ. ಜೆಡಿಯು ಪಕ್ಷದ ವರಿಷ್ಠ ಮತ್ತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ.

75 ವರ್ಷದ ನಿತೀಶ್ ಕುಮಾರ್ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವ ಅಮಿತ್‌ ಶಾ ಸೇರಿದಂತೆ ಹಲವಾರು ಗಣ್ಯರ ಸಮ್ಮುಖದಲ್ಲಿ 2025ರ ನವೆಂಬರ್ 20ರಂದು ಪಾಟ್ನಾದಲ್ಲಿ ನಡೆದ ಸಮಾರಂಭದಲ್ಲಿ ದಾಖಲೆಯ 10ನೇ ಬಾರಿಗೆ ಬಿಹಾರದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು.

ಬುಧವಾರ ಸಂಜೆ India Today ವರದಿಯೊಂದನ್ನು ಮಾಡಿದೆ. ಬಿಹಾರ ರಾಜ್ಯದಲ್ಲಿ ಶೀಘ್ರವೇ ಮಹತ್ವದ ರಾಜಕೀಯ ಬದಲಾವಣೆಯೊಂದು ನಡೆಯುವ ಸಾಧ್ಯತೆಯಿದೆ. ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಲಾಗುವುದು ಎಂಬ ವರದಿಗಳಿವೆ ಎಂದು ಹೇಳಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇದು ಬಿಹಾರ ರಾಜ್ಯದ ನಾಯಕತ್ವದಲ್ಲಿ ಬದಲಾವಣೆಯ ಸುಳಿವು ನೀಡುತ್ತಿದೆ. ಈ ಬೆಳವಣಿಗೆಯು ಜೆಡಿಯು ಪಕ್ಷದೊಳಗೆ ತೀವ್ರ ರಾಜಕೀಯ ಚಟುವಟಿಕೆಯನ್ನು ಹುಟ್ಟುಹಾಕಿದ್ದು, ಇದು ಬಿಹಾರದ ಆಡಳಿತವನ್ನೇ ಬದಲಾಯಿಸುವ ಸಾಧ್ಯತೆಯಿದೆ ಎಂದು ವರದಿ ತಿಳಿಸಿದೆ.

ಜೆಡಿಯು ಪಕ್ಷದ ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಲಾಗಿದ್ದು, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ರಾಜ್ಯಸಭೆ ಪ್ರವೇಶಿಸಲು ಸಿದ್ಧರಾಗಿದ್ದಾರೆ. ಅವರ ನಂತರ ರಾಜ್ಯದ ಆಡಳಿತವನ್ನು ಯಾರು ವಹಿಸಿಕೊಳ್ಳಲಿದ್ದಾರೆ? ಎಂಬ ಬಗ್ಗೆ ರಾಜ್ಯದಲ್ಲಿ ಭಾರೀ ಚರ್ಚೆಗಳು ಆರಂಭವಾಗಿದೆ.

ಪಕ್ಷದ ಮೂಲಗಳ ಪ್ರಕಾರ ನಿತೀಶ್ ಕುಮಾರ್ ರಾಜ್ಯಸಭಾ ನಾಮ ನಿರ್ದೇಶನಕ್ಕೆ ಸಿದ್ಧತೆಗಳು ಬಹುತೇಕ ಪೂರ್ಣಗೊಂಡಿವೆ. ನಾಮಪತ್ರಗಳು ಸಿದ್ಧವಾಗಿವೆ ಮತ್ತು ಮುಖ್ಯಮಂತ್ರಿಯವರ ಸಹಿ ಮಾತ್ರ ಬಾಕಿ ಉಳಿದಿದೆ.

ರಾಜ್ಯಸಭೆ ಚುನಾವಣೆಗೆ ನಾಮಪತ್ರ ಸಲ್ಲಿಕೆ ಮಾಡಲು ಮಾರ್ಚ್ 5 ಕೊನೆಯ ದಿನವಾಗಿದೆ. ಅಂದು ಅವರು ತಮ್ಮ ನಾಮಪತ್ರವನ್ನು ಸಲ್ಲಿಸುವ ನಿರೀಕ್ಷೆಯಿದೆ ಎಂದು ಇಂಡಿಯಾ ಟು ಡೇ ವರದಿ ಹೇಳಿದೆ.

ಮಾರ್ಚ್ 16ರಂದು ರಾಜ್ಯಸಭೆ ಚುನಾವಣೆ ನಡೆಯಲಿದೆ. ನಿತೀಶ್ ಕುಮಾರ್ ಅವರು ಚುನಾವಣೆಯ ತನಕ ಬಿಹಾರದ ಮುಖ್ಯಮಂತ್ರಿಯಾಗಿ ಮುಂದುವರಿಯುವ ಸಾಧ್ಯತೆಯಿದೆ. ಆ ಬಳಿಕ ಅವರು ಈ ಹುದ್ದೆಯಿಂದ ಕೆಳಗಿಳಿಯಬಹುದು ಎಂದು ಅಂದಾಜಿಸಲಾಗಿದೆ.

ಬುಧವಾರ ಸಂಜೆಯ ಈ ಬೆಳವಣಿಗೆ ಜೆಡಿಯು ಪಕ್ಷದೊಳಗೆ ಭಾರೀ ಸಂಚಲನ ಮೂಡಿಸಿದ್ದು, ಸರಣಿ ಸಭೆಗಳನ್ನು ನಡೆಸಲಾಗುತ್ತಿದೆ. ಹಿರಿಯ ನಾಯಕ ಮತ್ತು ಸಚಿವ ವಿಜೇಂದ್ರ ಪ್ರಸಾದ್ ಯಾದವ್ ಅವರು ನಿತೀಶ್ ಕುಮಾರ್ ನಿವಾಸದಲ್ಲಿದ್ದು, ಅವರೊಂದಿಗೆ ಚರ್ಚೆ ನಡೆಸುತ್ತಿದ್ದಾರೆ.

ಈ ಬೆಳವಣಿಗೆಗಳ ನಡುವೆಯೇ ಸಚಿವ ಅಶೋಕ್ ಚೌಧರಿ ಕೂಡ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ್ದಾರೆ. ಜೆಡಿಯು ರಾಷ್ಟ್ರೀಯ ಕಾರ್ಯಕಾರಿ ಅಧ್ಯಕ್ಷ ಸಂಜಯ್ ಝಾ ಅವರು ಮುಖ್ಯಮಂತ್ರಿಗಳ ನಿವಾಸಕ್ಕೆ ಆಗಮಿಸಿದ್ದು, ರಾಜ್ಯದ ರಾಜಕೀಯ ಕುತೂಹಲ ಮೂಡಿಸಿದೆ.

ಬಿಜೆಪಿಗೆ ಮುಖ್ಯಮಂತ್ರಿ ಪಟ್ಟ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಬಿಹಾರದಿಂದ ರಾಜ್ಯಸಭೆ ಚುನಾವಣೆ ಅಭ್ಯರ್ಥಿ ಎಂದು ಈಗಾಗಲೇ ಬಿಜೆಪಿ ಘೋಷಣೆ ಮಾಡಿದೆ.

ಬಿಹಾರದಲ್ಲಿ ಮುಖ್ಯಮಂತ್ರಿ ಹುದ್ದೆಗಾಗಿ ಬಿಜೆಪಿ ಹಕ್ಕು ಮಂಡಿಸುವ ಸಾಧ್ಯತೆಯಿದೆ. 2025ರ ಚುನಾವಣೆಯಲ್ಲಿ ಬಿಜೆಪಿ ಬಹುದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ ಸಹ ಅದು ಎನ್‌ಡಿಎ ಮೈತ್ರಿಕೂಟದ ಮಿತ್ರಪಕ್ಷವಾದ ಜೆಡಿಯುಗೆ ಮುಖ್ಯಮಂತ್ರಿ ಸ್ಥಾನ ನೀಡಿತ್ತು.

2025ರ ಚುನಾವಣೆಯಲ್ಲಿ ಬಿಜೆಪಿ 89, ಜೆಡಿಯು 85, ಆರ್‌ಜೆಡಿ 25, ಎಲ್‌ಜೆಪಿಆರ್‌ವಿ 19, ಕಾಂಗ್ರೆಸ್ 6, ಎಐಎಂಐಎಂ 5, ಹೆಚ್‌ಎಎಂಎಸ್ 5 ಮತ್ತು ಇತರರು 9 ಸೀಟುಗಳಲ್ಲಿ ಜಯಗಳಿಸಿದ್ದಾರೆ.

ನಿತೀಶ್ ಕುಮಾರ್ ಪುತ್ರ ನಿಶಾಂತ್ ಕುಮಾರ್ ಸಕ್ರಿಯ ರಾಜಕೀಯಕ್ಕೆ ಪ್ರವೇಶಿಸಲು ಸಜ್ಜಾಗಿದ್ದಾರೆ ಎಂಬ ಸುದ್ದಿಯೂ ಹಬ್ಬಿದೆ. ಬಿಹಾರದ ರಾಜಕೀಯಕ್ಕೆ ಅವರನ್ನು ಅಧಿಕೃತವಾಗಿ ಪರಿಚಯಿಸಿ ನಿತೀಶ್ ಕುಮಾರ್ ರಾಜ್ಯಸಭೆ ಸದಸ್ಯರಾಗಲಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.

ಬಿಜೆಪಿಗೆ ಮುಖ್ಯಮಂತ್ರಿ ಸ್ಥಾನ ನೀಡಿದರೆ ನಿಶಾಂತ್ ಕುಮಾರ್ ಅವರನ್ನು ಉಪಮುಖ್ಯಮಂತ್ರಿ ಹುದ್ದೆಗೆ ಪರಿಗಣಿಸುವ ಸಾಧ್ಯತೆಯಿದೆ. ಆದರೆ ಈ ಕುರಿತು ಜೆಡಿಯು ಪಕ್ಷದ ಯಾವುದೇ ನಾಯಕರು ಅಧಿಕೃತ ಹೇಳಿಕೆ ನೀಡಿಲ್ಲ.

ಹೊಸ ಇತಿಹಾಸ: ನಿತೀಶ್ ಕುಮಾರ್ ಬಿಹಾರ ಶಾಸಕರಾಗಿ, ವಿಧಾನ ಪರಿಷತ್ ಸದಸ್ಯರಾಗಿ, ಸಂಸದರಾಗಿ ಕೆಲಸ ಮಾಡಿದ್ದಾರೆ. ಅವರು ರಾಜ್ಯಸಭೆಗೆ ಆಯ್ಕೆಯಾದರೆ ಭಾರತದ ರಾಜಕೀಯ ವ್ಯವಸ್ಥೆಯ 4 ಸದನದ ಸದಸ್ಯರಾಗಿ ಹೊಸ ಇತಿಹಾಸ ನಿರ್ಮಾಣ ಮಾಡಲಿದ್ದಾರೆ.

ನಿತೀಶ್ ಕುಮಾರ್ ರಾಜೀನಾಮೆ ಕುರಿತು ಪಕ್ಷದಿಂದ ಇನ್ನೂ ಯಾವುದೇ ಅಧಿಕೃತ ಘೋಷಣೆಯಾಗಿಲ್ಲ. ಆದರೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಬಹುತೇಕ ಪೂರ್ಣಗೊಂಡಿರುವುದು ಮತ್ತು ಹಿರಿಯ ನಾಯಕರು ಸರಣಿ ಸಭೆಗಳಲ್ಲಿ ನಿರತರಾಗಿರುವುದು ಮುಂದಿನ ಬಿಹಾರ ರಾಜಕೀಯದ ಕುರಿತು ಕುತೂಹಲವನ್ನು ಮೂಡಿಸಿದೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular