ಹಾಸನ : ಶ್ರೀ ಹಾಸನಾಂಬ ದೇವಿ ದರ್ಶನಕ್ಕೆ ಭಕ್ತಾದಿಗಳು ಆಗಮಿಸಲು ಅನುಕೂಲವಾಗುವಂತೆ ಎರಡು ವಿಶೇಷ ರೈಲುಗಳ ಸಂಚಾರಕ್ಕೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿ ವಿಶೇಷ ರೈಲುಗಳ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ಸಂಸದರಾದ ಶ್ರೇಯಸ್ ಎಂ ಪಟೇಲ್ ಅವರು ತಿಳಿಸಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿಂದು ಸಭೆ ನಡೆಸಿ ಮಾತನಾಡಿದ ಅವರು ಬೆಂಗಳೂರು ಹಾಸನ್ ಎಕ್ಸ್ ಪ್ರೆಸ್ ವಿಶೇಷ ರೈಲು ಬೆಂಗಳೂರಿನಿಂದ ಬೆಳಗ್ಗೆ 7.30 ಹೊರಟು ಹಾಸನಕ್ಕೆ ಬೆಳಗ್ಗೆ 11.30 ತಲುಪಲಿದೆ, ನಂತರ ಮಧ್ಯಾಹ್ನ 3 .15ಕ್ಕೆ ಹಾಸನದಿಂದ ಹೊರಟು ಸಂಜೆ 7.00 ಗಂಟೆ ತಲುಪಲಿದೆ. ಈ ರೈಲು ಮಾರ್ಗ ಮಧ್ಯ ಯಶವಂತಪುರ, ನೆಲಮಂಗಲ, ಕುಣಿಗಲ್, ಯಡಿಯೂರು, ಬಿಜಿನಗರ. ಶ್ರವಣಬೆಳಗೂಳ, ಚನ್ನರಾಯಪಟ್ಟಣ ನಿಲ್ದಾಣದಲ್ಲಿ ನಿಲುಗಡೆ ಹೊಂದಿರುತ್ತದೆ ಎಂದರು
ಅರಸೀಕೆರೆಯಿಂದ ಬೆಳಗ್ಗೆ 11.30 ಹೊರಟು ಹಾಸನಕ್ಕೆ 12.30 ತಲುಪಲಿದೆ, ಹಬ್ಬನಘಟ್ಟ ಹಾಗೂ ಬಾಗೇಶಪುರ ನಿಲ್ದಾಣಗಳಲ್ಲಿ ರೈಲು ನಿಲುಗಡೆಗೆ ಅವಕಾಶವಿರುತ್ತದೆ ನಂತರ ಹಾಸನದಿಂದ 12.45 ಹೊರಟು ಮಧ್ಯಾಹ್ನ 2 ಗಂಟೆಗೆ ಅರಸೀಕೆರೆ ತಲುಪಲಿದೆ ಎಂದರು.
ಹಾಸನಾಂಬ ದೇವಿಯ ದರ್ಶನಕ್ಕೆ ಆಗಮಿಸುವ ಭಕ್ತಾಧಿಗಳಿಗೆ ಅನುಕೂಲವಾಗುವಂತೆ ಸಾರಿಗೆ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಈ ವಿಶೇಷ ರೈಲುಗಳ ಸಂಚಾರಕ್ಕೆ ಅವಕಾಶ ನೀಡಲಾಗಿದೆ ಬೆಂಗಳೂರು,ಅರಸೀಕೆರೆ ಹಾಗೂ ಮಾರ್ಗ ಮಧ್ಯದ ವಿವಿಧ ಪ್ರದೇಶಗಳಿಂದ ಹಾಸನಕ್ಕೆ ಆಗಮಿಸುವ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದ ಅವರು ಪ್ರಯಾಣಿಕರು ಪ್ರಯಾಣ ಆರಂಭಿಸುವ ಮೊದಲು ನೈರುತ್ಯ ರೈಲ್ವೆಯ ಅಧಿಕೃತ ಮೂಲಗಳಿಂದ ರೈಲುಗಳ ವೇಳಾ ಪಟ್ಟಿ ಹಾಗೂ ಸಂಚಾರದ ಮಾಹಿತಿಯನ್ನು ಖಚಿತಪಡಿಸಿಕೊಳ್ಳುವಂತೆ ತಿಳಿಸಿದರು.
ರೈಲ್ವೆ ನಿಲ್ದಾಣದಲ್ಲಿ ಸ್ವಚ್ಚತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಶೌಚಾಲಯಗಳು ಸ್ವಚ್ಚವಾಗಿರಬೇಕು, ಕುಡಿಯುವ ನೀರಿನ ಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು.ರೈಲ್ವೆ ನಿಲ್ದಾಣದಲ್ಲಿ ಹೆಲ್ಪ್ ಡೆಸ್ಕ್, ಭಕ್ತಾದಿಗಳು ದೇವಿ ದರ್ಶನಕ್ಕೆ ರೂ.300, 1000 ರೂಗಳ ಟಿಕೆಟ್ ಪಡೆಯಲು ಪ್ರತ್ಯೇಕ ಕೌಂಟರ್ ಇರುತ್ತದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಜಾತ್ರಾ ಮಹೋತ್ಸವಕ್ಕೆ ಸಂಬಂಧಿಸಿದಂತೆ ಉಚಿತ ವೈಫೈ ಪೋಸ್ಟ್ರ್ ಬಿಡುಗಡೆ ಮಾಡಿ ಮಾತನಾಡಿದ ಅವರು ಹಾಸನಾಂಬ ದೇವಿ ದರ್ಶನಕ್ಕೆ ಆಗಮಿಸುವ ಭಕ್ತಾದಿಗಳಿಗೆ ಹೆಚ್ಚಿನ ಜನಸಂದಣಿಯಿಂದ ಇಂಟರ್ನೆಟ್ ಸಮಸ್ಯೆ ಎದುರಾಗುವುದರಿಂದ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಸಂಸದರ ಅನುದಾನದಲ್ಲಿ ಉಚಿತ ವೈಫೈ ಸೌಲಭ್ಯವನ್ನು ಅ.29 ರಿಂದ ನ.11 ರವರೆಗೆ ಕಲ್ಪಿಸಲಾಗುತ್ತಿದೆ ಎಂದು ತಿಳಿಸಿದರು.
ಹಾಸನಾಂಬ ದೇವಿ ದರ್ಶನಕ್ಕೆ ಸಕಲ ಸಿದ್ಧತೆ; ಭಕ್ತರ ಸುರಕ್ಷತೆಗೆ ಜಿಲ್ಲಾಧಿಕಾರಿ ಕಟ್ಟುನಿಟ್ಟಿನ ಸೂಚನೆ
ವರ್ಷಕ್ಕೊಮ್ಮೆ ದರ್ಶನ ನೀಡುವ ಶ್ರೀ ಹಾಸನಾಂಬ ದೇವಿಯ ದೇವಸ್ಥಾನದ ಬಾಗಿಲನ್ನು ಅಕ್ಟೋಬರ್ 29ರಂದು ತೆರೆಯಲಾಗುತ್ತದೆ. ನವೆಂಬರ್ 11ರಂದು ದೇವಸ್ಥಾನದ ಬಾಗಿಲು ಮುಚ್ಚಲಾಗುತ್ತದೆ. ಮೊದಲ ದಿನ ಮತ್ತು ಕೊನೆಯ ದಿನ ಸಾರ್ವಜನಿಕರಿಗೆ ದೇವಿಯ ದರ್ಶನಕ್ಕೆ ಅವಕಾಶ ಇರುವುದಿಲ್ಲ. ಭಕ್ತರಿಗೆ ಸುರಕ್ಷಿತ ಹಾಗೂ ಸುಗಮ ದರ್ಶನಕ್ಕೆ ಅವಕಾಶ ಕಲ್ಪಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಕೆ.ಎಸ್. ಲತಾ ಕುಮಾರಿ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಅಗ್ನಿ ಅವಘಡ, ವಿದ್ಯುತ್ ಅವಘಡ ತಡೆಗೆ ಸೂಚನೆ
ದೇವಸ್ಥಾನದ ಒಳ ಮತ್ತು ಹೊರ ಆವರಣ, ಸುತ್ತಮುತ್ತಲಿನ ಪ್ರದೇಶಗಳು, ಭಕ್ತರು ದೇವಿಯ ದರ್ಶನಕ್ಕೆ ತೆರಳುವ ಸರತಿ ಸಾಲು ಹಾಗೂ ವಾಹನಗಳ ನಿಲುಗಡೆ ಸ್ಥಳಗಳಲ್ಲಿ ಅಗ್ನಿ ಅವಘಡಗಳು ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸಬೇಕು. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಬೇಕು. ಹೆಚ್ಚಿನ ಅಗ್ನಿಶಾಮಕ ವಾಹನಗಳ ಅಗತ್ಯವಿದ್ದಲ್ಲಿ ಅಕ್ಕಪಕ್ಕದ ಜಿಲ್ಲೆಗಳಿಂದ ಪಡೆಯಲು ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.
ವಿದ್ಯುತ್ ಅವಘಡಗಳು ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸಬೇಕು. ಯಾವುದೇ ವಿಚಾರವನ್ನೂ ಹಗುರವಾಗಿ ಪರಿಗಣಿಸಬಾರದು. ಭಕ್ತರು ಸರತಿ ಸಾಲಿನಲ್ಲಿ ಸಾಗುವ ಸ್ಥಳಗಳು, ವೇದಿಕೆ ಕಾರ್ಯಕ್ರಮ ನಡೆಯುವ ಪ್ರದೇಶಗಳು ಹಾಗೂ ಜನದಟ್ಟಣೆ ಇರುವ ಸ್ಥಳಗಳಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸಿ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಬೇಕು. ಎಲ್ಲ ಇಲಾಖೆಗಳ ಅಧಿಕಾರಿಗಳು ಸಮನ್ವಯದಿಂದ ಕರ್ತವ್ಯ ನಿರ್ವಹಿಸಬೇಕು ಎಂದು ನಿರ್ದೇಶನ ನೀಡಿದರು.
ಭಕ್ತರ ಸುರಕ್ಷತೆಯ ವಿಚಾರದಲ್ಲಿ ಯಾವುದೇ ನಿರ್ಲಕ್ಷ್ಯ ತೋರಬಾರದು. ಯಾವುದೇ ಸಮಸ್ಯೆ ಎದುರಾದರೂ ತಕ್ಷಣ ತಮ್ಮ ಗಮನಕ್ಕೆ ತರಬೇಕು ಎಂದು ಅವರು ತಿಳಿಸಿದರು.
24 ಗಂಟೆಯೂ ವೈದ್ಯಕೀಯ ಸೇವೆ ಒದಗಿಸಲು ಸೂಚನೆ
ಭಕ್ತರು ಸರತಿ ಸಾಲಿನಲ್ಲಿ ಸಾಗುವ ಸಂದರ್ಭದಲ್ಲಿ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡರೆ ತಕ್ಷಣ ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡಬೇಕು. ಅಗತ್ಯವಿದ್ದಲ್ಲಿ ಅವರನ್ನು ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆದೊಯ್ಯಲು ಸೂಕ್ತ ಮಾರ್ಗಸೂಚಿ ಹಾಗೂ ಮಾರ್ಗ ನಕ್ಷೆ ಸಿದ್ಧಪಡಿಸಿಕೊಳ್ಳಬೇಕು. ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಹಿಮ್ಸ್)ನಲ್ಲಿ ತಕ್ಷಣ ಚಿಕಿತ್ಸೆ ದೊರೆಯುವಂತೆ ‘ಶ್ರೀ ಹಾಸನಾಂಬ ತುರ್ತು ತಂಡ’ವನ್ನು ರಚಿಸಬೇಕು. ದಿನದ 24 ಗಂಟೆಯೂ ವೈದ್ಯಕೀಯ ಸೇವೆ ಲಭ್ಯವಾಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.
ತುರ್ತು ಪರಿಸ್ಥಿತಿಯಲ್ಲಿ ರೋಗಿಯ ಜೀವ ಉಳಿಸಲು ‘ಗೋಲ್ಡನ್ ಅವರ್’ ಅತ್ಯಂತ ಮಹತ್ವದ್ದಾಗಿದೆ. ಹೃದಯ ಸಂಬಂಧಿ ಕಾಯಿಲೆಗಳಿಗೆ ತುರ್ತು ಚಿಕಿತ್ಸೆ ನೀಡಲು ಖಾಸಗಿ ಆಸ್ಪತ್ರೆಗಳ ತಜ್ಞ ವೈದ್ಯರನ್ನು ಗುರುತಿಸಿ, ಅವರ ಹೆಸರು ಹಾಗೂ ಮೊಬೈಲ್ ಸಂಖ್ಯೆಗಳ ಪಟ್ಟಿಯನ್ನು ಸಿದ್ಧಪಡಿಸಬೇಕು. ಅಗತ್ಯ ಸಂದರ್ಭದಲ್ಲಿ ಸೇವೆ ಒದಗಿಸುವಂತೆ ವೈದ್ಯರಿಗೆ ಮುಂಚಿತವಾಗಿ ತಿಳಿಸಬೇಕು. ತುರ್ತು ಸಂದರ್ಭಗಳಲ್ಲಿ ರಕ್ತದ ಕೊರತೆಯಾಗದಂತೆ ರಕ್ತನಿಧಿ ಕೇಂದ್ರಗಳಲ್ಲಿ ಅಗತ್ಯ ಪ್ರಮಾಣದ ರಕ್ತ ಲಭ್ಯವಿರುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ವಿಶೇಷ ವರ್ಗದ ಭಕ್ತರಿಗೆ ಅಗತ್ಯ ದಾಖಲೆ ಕಡ್ಡಾಯ
ದೇವಿಯ ದರ್ಶನಕ್ಕೆ ಆಗಮಿಸುವ ವಿಶೇಷ ಚೇತನರು ಯುಡಿಐಡಿ (UDID) ಕಾರ್ಡ್, 80 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಆಧಾರ್ ಕಾರ್ಡ್, ಒಂದು ವರ್ಷದೊಳಗಿನ ಮಕ್ಕಳೊಂದಿಗೆ ಬರುವ ತಾಯಂದಿರು ಮಗುವಿನ ಜನನ ಪ್ರಮಾಣಪತ್ರ ಹಾಗೂ ಗರ್ಭಿಣಿಯರು ತಾಯಂದಿರ ಕಾರ್ಡ್ ತರಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಈ ವರ್ಗದ ಭಕ್ತರೊಂದಿಗೆ ಆಗಮಿಸುವ ಕುಟುಂಬ ಸದಸ್ಯರು ದರ್ಶನ ಪಡೆದು ಹಿಂದಿರುಗುವವರೆಗೆ ಕಾಯಲು ನಿರ್ಗಮನ ದ್ವಾರದ ಬಳಿ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಲಾಗುತ್ತದೆ. ಕುಟುಂಬದ ಸದಸ್ಯರು ದರ್ಶನ ಪಡೆದು ಬಂದ ಬಳಿಕ ಅವರೊಂದಿಗೆ ತೆರಳಬಹುದು ಎಂದು ತಿಳಿಸಿದರು.
ಪ್ರಸಾದದ ಗುಣಮಟ್ಟ, ಸ್ವಚ್ಛತೆಗೆ ಆದ್ಯತೆ
ದೇವಸ್ಥಾನದ ಸುತ್ತಮುತ್ತಲಿನ ಪ್ರದೇಶಗಳು ಹಾಗೂ ವಾಹನಗಳ ನಿಲುಗಡೆ ಸ್ಥಳಗಳಲ್ಲಿ ಬೀದಿನಾಯಿಗಳು ಇರದಂತೆ ಕ್ರಮ ಕೈಗೊಳ್ಳಬೇಕು. ಭಕ್ತರಿಗೆ ವಿತರಿಸುವ ಪ್ರಸಾದದ ಗುಣಮಟ್ಟದ ಬಗ್ಗೆ ಆಹಾರ ಸುರಕ್ಷತಾ ಅಧಿಕಾರಿಗಳು ವಿಶೇಷ ಗಮನ ಹರಿಸಬೇಕು ಎಂದು ಸೂಚಿಸಿದರು.
ಭಕ್ತರು ಧರ್ಮದರ್ಶನಕ್ಕಾಗಿ ಸರತಿ ಸಾಲಿನಲ್ಲಿ ಸಾಗುವಾಗ ಬೇಸರವಾಗದಂತೆ ಭಕ್ತಿಗೀತೆಗಳನ್ನು ಹಾಡಿಸಲು ವ್ಯವಸ್ಥೆ ಮಾಡಬೇಕು. ಇದಕ್ಕಾಗಿ ಧ್ವನಿವರ್ಧಕ ವ್ಯವಸ್ಥೆ ಸರಿಯಾಗಿರುವುದನ್ನು ಖಚಿತಪಡಿಸಿಕೊಳ್ಳಬೇಕು. ಅಗತ್ಯ ಸ್ಥಳಗಳಲ್ಲಿ ಪರದೆಗಳನ್ನು ಅಳವಡಿಸಿ ಮಾಹಿತಿ ಒದಗಿಸಬೇಕು. ನೈವೇದ್ಯ ಹಾಗೂ ದೇವಿಯ ಅಲಂಕಾರದ ಕಾರ್ಯ ನಡೆಯುವ ಸಂದರ್ಭದಲ್ಲಿ ಸರತಿ ಸಾಲಿನಲ್ಲಿ ಕಾಯುವ ಭಕ್ತರಿಗೆ ಮನರಂಜನೆ ಒದಗಿಸಲು ಉತ್ತಮ ಕಲಾವಿದರಿಂದ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದು ತಿಳಿಸಿದರು.
ಹೂವಿನ ಅಲಂಕಾರ ಮಾಡುವ ಸಂದರ್ಭದಲ್ಲಿ ಎಚ್ಚರಿಕೆ ವಹಿಸಬೇಕು ಹಾಗೂ ವಿದ್ಯುತ್ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸೂಚಿಸಿದರು.
ಅ. 29ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು
ಮಹಾನಗರ ಪಾಲಿಕೆ ಆವರಣದಲ್ಲಿ ಅಕ್ಟೋಬರ್ 29ರಂದು ಸಂಜೆ 6 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಪಾಳಿಗಳಲ್ಲಿ ಕರ್ತವ್ಯ ನಿರ್ವಹಿಸಲು ಸಿಬ್ಬಂದಿಯನ್ನು ನೇಮಿಸಿ, ಅವರ ಹಾಜರಾತಿಯನ್ನು ಕಡ್ಡಾಯವಾಗಿ ದಾಖಲಿಸಬೇಕು. ತಾತ್ಕಾಲಿಕ ಶೌಚಾಲಯಗಳು, ದೇವಸ್ಥಾನದ ಒಳ ಮತ್ತು ಹೊರ ಆವರಣ, ಸರತಿ ಸಾಲಿನ ಪ್ರದೇಶಗಳು ಹಾಗೂ ಪ್ರಸಾದ ವಿತರಣಾ ಸ್ಥಳಗಳಲ್ಲಿ ಸ್ವಚ್ಛತೆ ಕಾಪಾಡಬೇಕು. ಸ್ವಚ್ಛತಾ ಕಾರ್ಯದಲ್ಲಿ ತೊಡಗುವ ಸಿಬ್ಬಂದಿಯ ಹೆಸರು ಮತ್ತು ಮೊಬೈಲ್ ಸಂಖ್ಯೆಗಳ ಪಟ್ಟಿಯನ್ನು ಸಿದ್ಧಪಡಿಸಬೇಕು ಎಂದು ಸೂಚಿಸಿದರು.
ರಂಗೋಲಿ ಸ್ಪರ್ಧೆಗೆ ಈಗಾಗಲೇ ನೋಂದಾಯಿಸಿಕೊಂಡಿರುವ 154 ಸ್ಪರ್ಧಿಗಳಿಗೆ ಮಹಾನಗರ ಪಾಲಿಕೆ ಆವರಣ, ಹೇಮಾವತಿ ಉದ್ಯಾನವನ ಹಾಗೂ ಬಸ್ ನಿಲ್ದಾಣದಲ್ಲಿ ಸ್ಪರ್ಧೆಯ ದಿನಾಂಕ ಮತ್ತು ಸಮಯವನ್ನು ನಿಗದಿಪಡಿಸಲಾಗುತ್ತದೆ ಎಂದು ತಿಳಿಸಿದರು.
ಭಕ್ತರು ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ, ಪ್ರವಾಸಿ ಮಂದಿರ ಹಾಗೂ ವಾಹನ ನಿಲುಗಡೆ ಸ್ಥಳಗಳಲ್ಲಿ ಪಾದರಕ್ಷೆಗಳನ್ನು ಇರಿಸಲು ಸ್ಟ್ಯಾಂಡ್ಗಳ ವ್ಯವಸ್ಥೆ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಜಾತ್ರಾ ಮಹೋತ್ಸವದಲ್ಲಿ ವಿವಿಧ ಸ್ಪರ್ಧೆಗಳು
ಮಹಾನಗರ ಪಾಲಿಕೆ ಆವರಣದಲ್ಲಿ ನಡೆಯಲಿರುವ ವಿವಿಧ ಕಾರ್ಯಕ್ರಮಗಳ ವಿವರ ಹೀಗಿದೆ:
-
ಅಕ್ಟೋಬರ್ 31, ಸಂಜೆ 4 ಗಂಟೆ: ಜೋಡೆತ್ತು ಪ್ರದರ್ಶನ.
-
ನವೆಂಬರ್ 3, ಬೆಳಿಗ್ಗೆ 11 ಗಂಟೆಯಿಂದ: ಟಗರು ಮತ್ತು ಓತ ಪ್ರದರ್ಶನ.
-
ನವೆಂಬರ್ 5, ಬೆಳಿಗ್ಗೆ 11 ಗಂಟೆ: ಪಾಕ ಸ್ಪರ್ಧೆ.
-
ನವೆಂಬರ್ 6, ಸಂಜೆ 5 ಗಂಟೆ: ಹಾಲು ಕರೆಯುವ ಸ್ಪರ್ಧೆ.
-
ನವೆಂಬರ್ 8, ಬೆಳಿಗ್ಗೆ 11 ಗಂಟೆಯಿಂದ: ಮುದ್ದು ಸಾಕುಪ್ರಾಣಿಗಳ ಪ್ರದರ್ಶನ.
ಈ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ಹಾಗೂ ಪ್ರಶಸ್ತಿ ಪತ್ರಗಳನ್ನು ವಿತರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.
ಅಕ್ಟೋಬರ್ 30ರಂದು ಸಂಜೆ 6 ಗಂಟೆಗೆ ಮಹಾನಗರ ಪಾಲಿಕೆ ಆವರಣದಲ್ಲಿ ಹಾಸನಾಂಬ ಸಾವಯವ ಮೇಳವನ್ನು ಉದ್ಘಾಟಿಸಲಾಗುತ್ತದೆ. ಇದೇ ಸಂದರ್ಭದಲ್ಲಿ ಪರಿಸರ ಸ್ನೇಹಿ ಕೃಷಿಕರ ಬಳಗಕ್ಕೆ ಚಾಲನೆ ನೀಡಲಾಗುತ್ತದೆ ಎಂದು ತಿಳಿಸಿದರು.
ನವೆಂಬರ್ 5ರಂದು ನಡೆಯುವ ಪಾಕ ಸ್ಪರ್ಧೆಯಲ್ಲಿ ಜಿಲ್ಲೆಯ ಎಂಟು ತಾಲ್ಲೂಕುಗಳ ವಿವಿಧ ಪ್ರದೇಶಗಳ ಸಿಹಿ ಮತ್ತು ಖಾರ ಖಾದ್ಯಗಳನ್ನು ಮನೆಯಲ್ಲಿಯೇ ತಯಾರಿಸಿಕೊಂಡು ಬಂದು ಪ್ರದರ್ಶಿಸಲು ಅವಕಾಶವಿದೆ. ಸ್ಥಳೀಯ ಪರಂಪರೆಯ ಹಳೆಯ ಹಾಗೂ ವಿಶೇಷ ಖಾದ್ಯಗಳನ್ನು ಪರಿಚಯಿಸಲು ಇದು ಉತ್ತಮ ಅವಕಾಶವಾಗಿದೆ ಎಂದು ಹೇಳಿದರು.
ಸಿಸಿಟಿವಿ ಅಳವಡಿಕೆ, ಧ್ವನಿವರ್ಧಕದ ಮೂಲಕ ಮಾಹಿತಿ
ಜನದಟ್ಟಣೆ ನಿರ್ವಹಣೆ ಹಾಗೂ ಭಕ್ತರ ಸುರಕ್ಷತೆಯ ದೃಷ್ಟಿಯಿಂದ ಅಗತ್ಯವಿರುವ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕು. ಭಕ್ತರಿಗೆ ಅಗತ್ಯ ಮಾಹಿತಿ ಒದಗಿಸಲು ಆಗಾಗ್ಗೆ ಧ್ವನಿವರ್ಧಕಗಳ ಮೂಲಕ ಪ್ರಕಟಣೆಗಳನ್ನು ನೀಡಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ, ಉಪವಿಭಾಗಾಧಿಕಾರಿ ಜಗದೀಶ್ ಗಂಗಣ್ಣನವರ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

