ಅಕ್ರಮ ಆನ್‌ಲೈನ್ ಬೆಟ್ಟಿಂಗ್ ಹಾಗೂ ಜೂಜಿನ ಆ್ಯಪ್‌ಗಳ ಪ್ರಚಾರಕ್ಕೆ ಸಂಬಂಧಿಸಿದಂತೆ ಸಿನಿರಂಗದ ನಟ-ನಟಿಯರ ಮೇಲಿನ ತನಿಖೆ ತೀವ್ರಗೊಂಡಿದ್ದು, ಚಿತ್ರನಟಿ ನಿಧಿ ಅಗರ್ವಾಲ್ ಬುಧವಾರ ಹೈದರಾಬಾದ್‌ನಲ್ಲಿರುವ ಜಾರಿ ನಿರ್ದೇಶನಾಲಯದ (ಇಡಿ) ಕಚೇರಿಗೆ ವಿಚಾರಣೆಗೆ ಹಾಜರಾಗಿದ್ದಾರೆ.
ಸೂಕ್ತ ಪೊಲೀಸ್ ಭದ್ರತೆಯೊಂದಿಗೆ ಇಡಿ ಕಚೇರಿಗೆ ಆಗಮಿಸಿದ ನಟಿಯನ್ನು ಅಧಿಕಾರಿಗಳು ಸುದೀರ್ಘ ವಿಚಾರಣೆಗೆ ಒಳಪಡಿಸಿದ್ದಾರೆ. ಈ ಹಿಂದೆ ತೆಲಂಗಾಣ ಸಿಐಡಿ ಕೂಡ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ನೋಟಿಸ್ ನೀಡಿದ್ದ ಹಿನ್ನೆಲೆಯಲ್ಲಿ ನಟಿ ವಿಚಾರಣೆಗೆ ಮುಖಾಮುಖಿಯಾಗಿದ್ದರು.
ಸಾಮಾಜಿಕ ಜಾಲತಾಣಗಳ ಮೂಲಕ ಅಕ್ರಮ ಜೂಜಿನ ಆ್ಯಪ್‌ಗಳನ್ನು ಪ್ರಚಾರ ಮಾಡಿದ ಆರೋಪದ ಮೇಲೆ ಈಗಾಗಲೇ 21 ಪ್ರಮುಖ ಚಿತ್ರತಾರೆಯರು ಮತ್ತು ಸಾಮಾಜಿಕ ಜಾಲತಾಣ ಪ್ರಭಾವಿಗಳ ವಿರುದ್ಧ ಹೈದರಾಬಾದ್‌ನ ಮಿಯಾಪುರ ಪೊಲೀಸ್ ಠಾಣೆಯಲ್ಲಿ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಾಗಿದೆ. ಪಿ.ಎಂ. ಫಣೀಂದ್ರ ಶರ್ಮಾ ಎಂಬ ಉದ್ಯಮಿ ನೀಡಿದ ದೂರಿನ ಆಧಾರದ ಮೇಲೆ ಸಾರ್ವಜನಿಕ ಜೂಜು ಕಾಯ್ದೆ 1867ರ ಅಡಿಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಯುವಜನತೆಯನ್ನು ತಪ್ಪುದಾರಿಗೆ ಎಳೆದು ಹಣ ಕಳೆದುಕೊಳ್ಳುವಂತೆ ಈ ಆ್ಯಪ್‌ಗಳ ಮೂಲಕ ಪ್ರಚೋದಿಸಲಾಗುತ್ತಿದೆ ಎಂಬುದು ದೂರುದಾರರ ಆರೋಪವಾಗಿದೆ.
ಈ ಪ್ರಕರಣದಲ್ಲಿ ರಾಣಾ ದಗ್ಗುಬಾಟಿ, ಪ್ರಕಾಶ್ ರಾಜ್, ವಿಜಯ್ ದೇವರಕೊಂಡ, ಮಂಚು ಲಕ್ಷ್ಮಿ, ಪ್ರಣೀತಾ, ನಿಧಿ ಅಗರ್ವಾಲ್, ಅನನ್ಯ ನಾಗಳ್ಳ, ಸಿರಿ ಹನುಮಂತು, ಶ್ರೀಮುಖಿ ಹಾಗೂ ವರ್ಷಿಣಿ ಸೌಂದರ್‌ರಾಜನ್ ಸೇರಿದಂತೆ ಹಲವು ಪ್ರಮುಖರ ಹೆಸರುಗಳು ಎಫ್‌ಐಆರ್‌ನಲ್ಲಿ ಸೇರಿವೆ. ಮತ್ತೊಂದೆಡೆ, ಆನ್‌ಲೈನ್ ಮತ್ತು ಆಫ್‌ಲೈನ್ ಬೆಟ್ಟಿಂಗ್ ಆ್ಯಪ್‌ಗಳ ಮೇಲೆ ಕಠಿಣ ನಿಯಂತ್ರಣ ಹೇರುವಂತೆ ಸಲ್ಲಿಕೆಯಾಗಿರುವ ಅರ್ಜಿಗಳ ಅಂತಿಮ ವಿಚಾರಣೆಯನ್ನು ಶೀಘ್ರದಲ್ಲೇ ಕೈಗೆತ್ತಿಕೊಳ್ಳುವುದಾಗಿ ಸುಪ್ರೀಂ ಕೋರ್ಟ್ ತಿಳಿಸಿದೆ.
“>

