ಬೆಂಗಳೂರು: ರಾಜ್ಯ ಸರ್ಕಾರದ ಮಾನವ ಸಂಪನ್ಮೂಲ ನಿರ್ವಹಣಾ ವ್ಯವಸ್ಥೆ (HRMS-2.0) ತಂತ್ರಾಂಶದಲ್ಲಿ ಕಂಡುಬರುವ ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಲು ಆರ್ಥಿಕ ಇಲಾಖೆಯು ಹೊಸ ಮಾರ್ಗಸೂಚಿಯನ್ನು ಹೊರಡಿಸಿದೆ. ಇನ್ಮುಂದೆ ಇಲಾಖಾ ಸಿಬ್ಬಂದಿಗಳು ಸಮಸ್ಯೆಗಳ ಪರಿಹಾರಕ್ಕಾಗಿ ನೇರವಾಗಿ HRMS ಕಚೇರಿಗೆ ಭೇಟಿ ನೀಡುವುದನ್ನು ನಿರ್ಬಂಧಿಸಲಾಗಿದೆ.
ಇತ್ತೀಚಿನ ದಿನಗಳಲ್ಲಿ ವೇತನ ಹಾಗೂ ಇತರ ತಾಂತ್ರಿಕ ಸಮಸ್ಯೆಗಳ ಪರಿಹಾರಕ್ಕಾಗಿ ಇಲಾಖಾ ಸಿಬ್ಬಂದಿಗಳು ನೇರವಾಗಿ HRMS ಕಚೇರಿಯ O&M ತಂಡ ಮತ್ತು P.M.U ವಿಭಾಗಕ್ಕೆ ಭೇಟಿ ನೀಡುತ್ತಿದ್ದಾರೆ. ಇದರಿಂದ ಅಲ್ಲಿನ ಕೆಲಸದ ವಾತಾವರಣಕ್ಕೆ ತೊಂದರೆಯಾಗುತ್ತಿದ್ದು, ಸಿಬ್ಬಂದಿಗಳ ದೈನಂದಿನ ಕಾರ್ಯಕ್ಕೆ ಅಡಚಣೆ ಉಂಟಾಗುತ್ತಿದೆ ಎಂದು ನಿರ್ದೇಶನಾಲಯ ತಿಳಿಸಿದೆ.
ಸರ್ಕಾರದ ಆದೇಶದಲ್ಲಿ ಏನಿದೆ..?
HRMS-2 ತಂತ್ರಾಂಶದಲ್ಲಿ ಲಭ್ಯವಿರುವ ‘Helpdesk Module’ ಮೂಲಕವೇ ಟಿಕೆಟ್ ರೈಸ್ (Ticket Raise) ಮಾಡಿ ಸಮಸ್ಯೆಗಳನ್ನು ಸರಿಪಡಿಸಿಕೊಳ್ಳಬೇಕು ಒಂದು ವೇಳೆ ಟಿಕೆಟ್ ಮೂಲಕ ಸಮಸ್ಯೆ ಬಗೆಹರಿಯದಿದ್ದರೆ, ಸಿಬ್ಬಂದಿಗಳು ಮೊದಲು ತಮ್ಮ ಇಲಾಖೆಯ HRMS ನೋಡಲ್ ಅಧಿಕಾರಿಗಳನ್ನು ಸಂಪರ್ಕಿಸಬೇಕು.ಇಲಾಖಾ ಮಟ್ಟದ ನೋಡಲ್ ಅಧಿಕಾರಿಗಳು ತಮ್ಮ ಹಂತದಲ್ಲೇ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸಬೇಕು. ಸಾಧ್ಯವಾಗದಿದ್ದಲ್ಲಿ ಮಾತ್ರ ಅವರು HRMS ನಿರ್ದೇಶನಾಲಯದೊಂದಿಗೆ ಸಂಪರ್ಕ ಸಾಧಿಸಿ ಸಮಸ್ಯೆ ಪರಿಹರಿಸಬೇಕು.
ತರಬೇತಿ ಮತ್ತು ಸಂಪನ್ಮೂಲಗಳು:
ಈಗಾಗಲೇ 106ಕ್ಕೂ ಹೆಚ್ಚು ಇಲಾಖೆಗಳು HRMS-2ನಲ್ಲಿ ನೋಂದಣಿಯಾಗಿದ್ದು, ಅಧೀನ ಕಚೇರಿಗಳಿಗೆ ತಂತ್ರಾಂಶದ ಬಳಕೆಯ ಬಗ್ಗೆ ತರಬೇತಿ ನೀಡಲಾಗಿದೆ. ಸಹಾಯಕ್ಕಾಗಿ ತಂತ್ರಾಂಶದ ಬಳಕೆ ಕುರಿತ ವಿಡಿಯೋಗಳು, ಮ್ಯಾನ್ಯುಯಲ್ ಮತ್ತು ಯೂಟ್ಯೂಬ್ ಲಿಂಕ್‌ಗಳನ್ನು ಈಗಾಗಲೇ ಒದಗಿಸಲಾಗಿದೆ ಎಂದು ಆರ್ಥಿಕ ಇಲಾಖೆಯ ಯೋಜನಾ ವ್ಯವಸ್ಥಾಪಕರು ತಿಳಿಸಿದ್ದಾರೆ.ಎಲ್ಲಾ ಇಲಾಖಾ ಮುಖ್ಯಸ್ಥರು ತಮ್ಮ ಅಧೀನ ಕಚೇರಿಗಳಿಗೆ ಈ ಬಗ್ಗೆ ಸೂಕ್ತ ಸೂಚನೆ ನೀಡುವಂತೆ ಆದೇಶದಲ್ಲಿ ಕೋರಲಾಗಿದೆ.



