HomeIndiaದುಪ್ಪಟ್ಟಾವನ್ನೇ ಹಗ್ಗವಾಗಿಸಿ ಬೈಕ್‌ ಸವಾರನ ಪ್ರಾಣ ಉಳಿಸಿದ ನವವಧು | Watch

ದುಪ್ಪಟ್ಟಾವನ್ನೇ ಹಗ್ಗವಾಗಿಸಿ ಬೈಕ್‌ ಸವಾರನ ಪ್ರಾಣ ಉಳಿಸಿದ ನವವಧು | Watch

ಹಿಮಾಚಲ ಪ್ರದೇಶದ ಚಂಬಾ ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ ರಸ್ತೆಗಳೆಲ್ಲ ನದಿಯಂತಾಗಿದ್ದು, ಭೀಕರ ಪ್ರವಾಹದ ನೀರಿನ ಸೆಳೆತದಲ್ಲಿ ಕೊಚ್ಚಿಹೋಗುತ್ತಿದ್ದ ಬೈಕ್ ಸವಾರನೊಬ್ಬನನ್ನು ನವವಿವಾಹಿತೆಯೊಬ್ಬಳು ತನ್ನ ಸಮಯಪ್ರಜ್ಞೆಯಿಂದ ರಕ್ಷಿಸಿರುವ ರೋಚಕ ಘಟನೆ ನಡೆದಿದೆ. ಮಹಿಳೆ ತನ್ನ ದುಪ್ಪಟ್ಟಾವನ್ನೇ ರಕ್ಷಣಾ ಹಗ್ಗದಂತೆ ನೀಡಿ ಸವಾರನ ಜೀವ ಉಳಿಸಿದ್ದು, ಈ ಸಾಹಸದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.

ಸಮಯಪ್ರಜ್ಞೆ ಮೆರೆದ ಕುಟುಂಬ ಚಂಬಾ ಜಿಲ್ಲೆಯ ರಸ್ತೆಯೊಂದರಲ್ಲಿ ಭಾರೀ ಮಳೆಯಿಂದಾಗಿ ದಿಢೀರ್ ಪ್ರವಾಹ ಉಂಟಾಗಿ ರಸ್ತೆಯ ಮೇಲೆ ರಭಸವಾಗಿ ನೀರು ಹರಿಯುತ್ತಿತ್ತು. ಈ ವೇಳೆ ರಸ್ತೆ ದಾಟಲು ಯತ್ನಿಸಿದ ಬೈಕ್ ಸವಾರನೊಬ್ಬ ನೀರಿನ ಪ್ರಬಲ ರಭಸಕ್ಕೆ ಸಿಲುಕಿ ನಿಯಂತ್ರಣ ತಪ್ಪಿ ಪರದಾಡುತ್ತಿದ್ದನು. ಅದೇ ಮಾರ್ಗವಾಗಿ ಕಾರಿನಲ್ಲಿ ತೆರಳುತ್ತಿದ್ದ ಕುಟುಂಬವೊಂದು ಬೈಕರ್ ಸಂಕಷ್ಟದಲ್ಲಿರುವುದನ್ನು ಕಂಡು ತಕ್ಷಣ ವಾಹನ ನಿಲ್ಲಿಸಿದೆ.

ಕಾರಿನಲ್ಲಿದ್ದ ವ್ಯಕ್ತಿಯೊಬ್ಬರು ತಕ್ಷಣ ನೀರಿಗಿಳಿದು ಸವಾರನನ್ನು ರಕ್ಷಿಸಲು ಯತ್ನಿಸಿದರಾದರೂ, ನೀರಿನ ಸೆಳೆತ ವಿಪರೀತವಾಗಿದ್ದ ಕಾರಣ ಸವಾರನ ಬಳಿಗೆ ಸಮೀಪಿಸಲು ಸಾಧ್ಯವಾಗಲಿಲ್ಲ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಜೀವ ಉಳಿಸಿದ ದುಪ್ಪಟ್ಟಾ! ಪರಿಸ್ಥಿತಿ ಕೈಮೀರುತ್ತಿರುವುದನ್ನು ಗಮನಿಸಿದ ಅದೇ ಕಾರಿನಲ್ಲಿದ್ದ ನವವಧು, ಕ್ಷಣಮಾತ್ರವೂ ಯೋಚಿಸದೆ ತನ್ನ ದುಪ್ಪಟ್ಟಾವನ್ನು ಬಿಚ್ಚಿ ರಭಸದ ನೀರಿನಲ್ಲಿ ಸಿಲುಕಿದ್ದ ಸವಾರನತ್ತ ಚಾಚಿದ್ದಾಳೆ. ಸವಾರನು ಆ ದುಪ್ಪಟ್ಟಾವನ್ನು ಗಟ್ಟಿಯಾಗಿ ಹಿಡಿದುಕೊಂಡ ತಕ್ಷಣ, ಆಕೆಯ ಕುಟುಂಬಸ್ಥರು ಆತನನ್ನು ಎಳೆದುಕೊಂಡು ಸುರಕ್ಷಿತ ಸ್ಥಳಕ್ಕೆ ತಂದಿದ್ದಾರೆ. ಆಕೆಯ ಈ ತ್ವರಿತ ನಿರ್ಧಾರದಿಂದಾಗಿ ಬೈಕರ್ ಕೂದಲೆಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಬರೆಗುಡ್ಡ ಕುಸಿತ, ಸಂಚಾರ ಅಸ್ತವ್ಯಸ್ತ ಹಿಮಾಚಲ ಪ್ರದೇಶದ ಪರ್ವತ ಪ್ರದೇಶಗಳಲ್ಲಿ ನಿರಂತರ ಮಳೆಯಿಂದಾಗಿ ಪ್ರವಾಹ ಮತ್ತು ಭೂಕುಸಿತದ ಆತಂಕ ಹೆಚ್ಚಾಗಿದೆ. ಚಂಬಾ ಜಿಲ್ಲೆಯ ಕೊಡ್ಲಾ-ಉರೈ ರಸ್ತೆಯಲ್ಲೂ ಬೃಹತ್ ಪ್ರಮಾಣದಲ್ಲಿ ಗುಡ್ಡ ಕುಸಿದು ಬಂಡೆಗಳು ಮತ್ತು ಮಣ್ಣು ರಸ್ತೆಗೆ ಬಿದ್ದ ಪರಿಣಾಮ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಆದರೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.

ನವವಧುವಿನ ಚಾಣಾಕ್ಷತೆ ಹಾಗೂ ಮಾನವೀಯತೆಗೆ ನೆಟ್ಟಿಗರು ವ್ಯಾಪಕ ಮೆಚ್ಚುಗೆ ವ್ಯಕ್ತಪಡಿಸಿದ್ದು, “ನಿಜವಾದ ಸಾಹಸ ಮತ್ತು ಸಮಯಪ್ರಜ್ಞೆ ಎಂದರೆ ಇದೇ” ಎಂದು ಕೊಂಡಾಡುತ್ತಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular