ಕೊಪ್ಪಳ: ಕೊಪ್ಪಳ ಜಿಲ್ಲೆಯ ಪ್ರವಾಸದಲ್ಲಿದ್ದ ಮುಜರಾಯಿ, ಮೀನುಗಾರಿಕೆ ಬಂದರು ಮತ್ತು ಒಳನಾಡು ಜಲ ಸಾರಿಗೆ ಸಚಿವರಾದ ಕೆ.ಎಸ್.ಬಸವಂತಪ್ಪ ಅವರು ಸೆಪ್ಟೆಂಬರ್ 1ರಂದು ಕೊಪ್ಪಳ ತಾಲೂಕಿನ ಹುಲಿಗಿಯ ಶ್ರೀ ಹುಲಿಗೆಮ್ಮ ದೇವಸ್ಥಾನಕ್ಕೆ ಭೇಟಿ ನೀಡಿ ಶ್ರೀ ಹುಲಿಗೆಮ್ಮ ದೇವಿಯ ದರ್ಶನ ಪಡೆದ ಬಳಿಕ ದೇವಸ್ಥಾನದ ಸ್ಥಿತಿಗತಿ ಮತ್ತು ಆಡಳಿತ ಕಾರ್ಯ ವ್ಯವಸ್ಥೆಯ ಬಗ್ಗೆ ಖುದ್ದು ಪರಿಶೀಲಿಸಿದರು.
ಸಂಸದ ಕೆ. ರಾಜಶೇಖರ ಹಿಟ್ನಾಳ ಅವರೊಂದಿಗೆ ದೇವಸ್ಥಾನದ ಆವರಣದಲ್ಲಿ 1 ಗಂಟೆ ಕಾಲ ವಿವಿಧೆಡೆ ಬಿರುಸಿನ ಸಂಚಾರ ನಡೆಸಿದ ಸಚಿವರು, ದೇವಸ್ಥಾನ ಆವರಣದ ಎಲ್ಲ ಕಡೆಗಳಲ್ಲೂ ಕಣ್ಣಿಗೆ ಅಶುಚಿತ್ವ ಕಾಣುತ್ತಿದೆ. ನಿಮ್ಮ ಕಾರ್ಯವೈಖರಿ ಸರಿಯಿಲ್ಲ, ದೇವಸ್ಥಾನ ನಿರ್ವಹಣೆಯನ್ನು ಸರಿಯಾಗಿ ಮಾಡುತ್ತಿಲ್ಲ ಎಂದು ದೇವಸ್ಥಾನದ ಆಡಳಿತ ಕಚೇರಿಯ ಅಧಿಕಾರಿಗಳು ಮತ್ತು ಸಿಬ್ಬಂದಿಯ ಬೇಜವಾಬ್ದಾರಿಯ ಕಾರ್ಯವೈಖರಿ ಬಗ್ಗೆ ತೀವ್ರ ಅಸಮಧಾನ ವ್ಯಕ್ತಪಡಿಸಿದರು.
ಪವಿತ್ರವಾದ ದೇವರ ಸೇವೆಯಲ್ಲಿ ನಾವಿದ್ದೇವೆ. ಇದು ದೇವಸ್ಥಾನದ ಆವರಣ. ಹುಲಿಗೆಮ್ಮ ತಾಯಿಯ ಪವಿತ್ರ ಸ್ಥಾನವಿದು, ಇಲ್ಲಿಗೆ ನಿತ್ಯ ಸಾವಿರಾರು ಭಕ್ತರು ಬರುತ್ತಾರೆ. ಅವರಿಗೆ ಅನುಕೂಲ ಮಾಡಬೇಕು ಎಂದು ನಿಮಗೆ ಅನ್ನಿಸುವುದಿಲ್ಲವೇ? ಎಲ್ಲಾ ಕಡೆಗೆ ಅಶುಚಿತ್ವ ವ್ಯವಸ್ಥೆ ಹಾಗೆಯೇ ಇರಬೇಕೆ? ಎಂದು ದೇವಸ್ಥಾನದ ಆಡಳಿತ ಅಧಿಕಾರಿ ಎಂ.ಎಚ್. ಪ್ರಕಾಶರಾವ್ ಮತ್ತು ಆಡಳಿತ ಕಚೇರಿಯ ಸಿಬ್ಬಂದಿಯನ್ನು ಪ್ರಶ್ನಿಸಿ ತರಾಟೆ ತೆಗೆದುಕೊಂಡರು.
ದೇವಸ್ಥಾನ ಆವರಣದಲ್ಲಿನ ದಾಸೋಹ ಭವನದ ಪಕ್ಕದಲ್ಲಿನ ಚರಂಡಿಯಲ್ಲಿ ಮುಸುರಿ ಬಿದ್ದಿರುವುದನ್ನು ಮತ್ತು ಪಾಚಿ ಗಟ್ಟಿರುವುದನ್ನು ನೋಡಿದ ಸಚಿವರು, ದೇವಸ್ಥಾನದ ಆವರಣದಲ್ಲಿನ ಎಲ್ಲ ಗಟಾರುಗಳಲ್ಲಿ ನೀರು ನಿಂತು ಪಾಚಿಗಟ್ಟುವವರೆಗೆ ನೀವು ಏನು ಮಾಡುವುದಿಲ್ಲವೇ ಎಂದು ಕೇಳಿದರು.
ಭಕ್ತರಿಗೆ ಬಾಡಿಗೆ ಕೊಡುವ ಕೊಠಡಿಗಳ ಸ್ಥಿತಿಗತಿ ಮತ್ತು ಕೊಠಡಿಗಳ ಸುತ್ತಲು ಅಲ್ಲಲ್ಲಿ ಅಶುಚಿತ್ವ ಇರುವುದನ್ನು ನೋಡಿದ ಸಚಿವರು, ದೇವಸ್ಥಾನದ ಆಡಳಿತ ಕಚೇರಿಯ ಅಧಿಕಾರಿ ಮತ್ತು ಸಿಬ್ಬಂದಿಗೆ ಕಾರ್ಯವೈಖರಿಯ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದರು.
ಹರಾಜು ಮಾಡದ್ದಕ್ಕೆ ತರಾಟೆ: ಭಕ್ತರು ದೇವಸ್ಥಾನಕ್ಕೆ ಕಾಣಿಕೆಯಾಗಿ ಸೀರೆ, ಕೊಬರಿ, ಉತ್ತತ್ತಿ ಸೇರಿದಂತೆ ಪೂಜಾ ಸಾಮಗ್ರಿ ನೀಡುವ ಕೊಠಡಿಯ ಸ್ಥಿತಿಗತಿಯನ್ನು ಸಚಿವರು ಖುದ್ದು ನೋಡಿದರು. ಸೀರೆ, ಕೊಬರಿ, ಉತ್ತತ್ತಿ ಇರುವ ಅರಿವೆ ಗಂಟುಗಳನ್ನು ಒಂದೆಡೆ ಕೂಡಿ ಹಾಕಿ ಅವು ಕೊಳೆಯುತ್ತಿರುವುದನ್ನು ಕಂಡು ಸಿಡಿಮಿಡಿಗೊಂಡ ಸಚಿವರು, ಕಡು ಬಡವರಿಗೆ ಕೆಲವೊಮ್ಮೆ ಹೊಸ ಸೀರೆ ಖರೀದಿಸಲು, ಕೊಬ್ಬರಿ ತಿನ್ನಲು ಆಗುವುದಿಲ್ಲ. ದೈವಭಕ್ತಿ ದೊಡ್ಡದೆಂದು ಅವರು ಕೊಟ್ಟಿರುವ ಸೀರೆ, ಕೊಬ್ಬರಿ ಉತ್ತತ್ತಿಯನ್ನು ನೀವು ಹೀಗೆ ಒಂದೆಡೆ ಕೂಡಿ ಹಾಕಿ ಅವುಗಳನ್ನು ಕೊಳೆಯುವಂತೆ ಮಾಡುವುದು ಸರಿ ಕಾಣುತ್ತದೆಯೇ ಎಂದು ದೇವಸ್ಥಾನದ ಆಡಳಿತ ಅಧಿಕಾರಿ ಪ್ರಕಾಶರಾವ್ ಅವರಿಗೆ ಸಚಿವರು ಪ್ರಶ್ನಿಸಿದರು. ನಿಯಮಾನುಸಾರ ಟೆಂಡರ್ ಪ್ರಕ್ರಿಯೆ ನಡೆಸಿ, ಭಕ್ತರು ದೇವಸ್ಥಾನಕ್ಕೆ ನೀಡಿದ ಪೂಜಾ ಸಾಮಗ್ರಿ ಸೀರೆ, ಕೊಬ್ಬರಿ, ಉತ್ತತ್ತಿ ಮತ್ತು ಇನ್ನಿತರ ಪೂಜಾ ಸಾಮಗ್ರಿಗಳನ್ನು ನಿಯಮಾನುಸಾರ ವಿಲೇವಾರಿ ಮಾಡಲು ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
ಶೌಚಾಲಯ ನಿರ್ವಹಣೆಗೆ ಸ್ಥಳೀಯರನ್ನು ನೇಮಿಸಿ: ದೇವಸ್ಥಾನ ಆವರಣದಲ್ಲಿನ ಶೌಚ ಗೃಹಗಳ ವ್ಯವಸ್ಥೆಯನ್ನು ಸಹ ಸಚಿವರು ನೋಡಿದರು. ಶೌಚಾಲಯ ನಿರ್ವಹಣೆ ನೆಪದಲ್ಲಿ ಭಕ್ತರಿಂದ ಹಣ ಕೀಳಬಾರದು. ಪ್ರಾಮಾಣಿಕವಾಗಿ ಕೆಲಸ ಮಾಡುವ ಉತ್ತಮವಾಗಿ ನಿರ್ವಹಣೆ ಮಾಡುವ ವ್ಯಕ್ತಿಗಳಿಗೆ ಶೌಚಾಲಯಗಳ ನಿರ್ವಹಣೆ ಜವಾಬ್ದಾರಿ ನೀಡಬೇಕು ಎಂದು ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಭಕ್ತರು ಪಾದರಕ್ಷೆ ಬಿಡುವ ಕೌಂಟರ್ ಗೆ ಆಗಮಿಸಿದ ಸಚಿವರು, ಪಾದರಕ್ಷೆ ಕೌಂಟರ್ ನಲ್ಲಿ ಭಕ್ತರಿಂದ ಹೆಚ್ಚಿನ ಹಣ ಪಡೆಯಬಾರದು. ಕಡು ಬಡವರು ಕೆಲವೊಮ್ಮೆ ಹಣವಿಲ್ಲ ಎಂದು ಹೇಳಿದಾಗ ಅಂತವರಿಗೆ ವಿನಾಯಿತಿ ನೀಡಿ ಸಹಕಾರ ನೀಡಬೇಕು ಎಂದು ಅಲ್ಲಿನ ಸಿಬ್ಬಂದಿಗೆ ಸಚಿವರು ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಸುರೇಶ್ ಇಟ್ನಾಳ್, ಶ್ರೀ ಹುಲಿಗೆಮ್ಮ ದೇವಿ ಕ್ಷೇತ್ರ ಅಭಿವೃದ್ದಿ ಪ್ರಾಧಿಕಾರದ ಸದಸ್ಯರು ಮತ್ತು ಗ್ರಾಮಸ್ಥರು ಇದ್ದರು.

