ಹಾಸನ: ಹಾಸನ ಜಿಲ್ಲಾಧಿಕಾರಿ ಲತಾಕುಮಾರಿ ಹಾಗೂ ಉಸ್ತುವಾರಿ ಸಚಿವ ಶಿವಲಿಂಗೇಗೌಡ ವಿರುದ್ಧ ಕೇಂಫ಼್ದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಲಂಚದ ಆರೋಪ ಮಾಡಿ ವಾಟ್ಸಾಪ್ ಚಾಟ್ ಬಿಡುಗಡೆ ಮಾಡಿದ್ದರು. ಇದರ ಬೆನ್ನಲ್ಲೇ ಕೇಂದ್ರ ಸಚಿವರ ಆರೋಪಕ್ಕೆ ಪ್ರತಿಕ್ರಿಯಿಸಿರುವ ಡಿಸಿ ಲತಾಕುಮಾರಿ ಖಡಕ್ ಉತ್ತರ ನೀಡಿದ್ದಾರೆ.
ಹೆಚ್.ಡಿ ಕುಮಾರಸ್ವಾಮಿ ಅವರ ಆರೋಪಗಳೆಲ್ಲವೂ ಸಂಪೂರ್ಣ ಸುಳ್ಳು. ಕರ್ತವ್ಯಕ್ಕೆ ಹಾಜರಾದ ಮೊದಲ ದಿನದಿಂದಲೂ ನನ್ನನ್ನು ಟಾರ್ಗೆಟ್ ಮಾಡಿದ್ದಾರೆ. ನಾವ್ ಇದಕ್ಕೆಲ್ಲ ಹೆದರಲ್ಲ, ಎಲ್ಲದಕ್ಕೂ ರೆಡಿ ಆಗಿನೇ ಬಂದಿರ್ತೀವಿ. ಅದಕ್ಕೆ ಟ್ರೈನಿಂಗ್ ಕೂಡ ಆಗಿರುತ್ತೆ ಎಂದು ತಿಳಿಸಿದ್ದಾರೆ.
ನನ್ನನ್ನ ಟಾರ್ಗೆಟ್ ಮಾಡಿದ್ದಾರೆ, ಡೇ 1 ನಿಂದ ಇದನ್ನ ಅನುಭವಿಸುತ್ತಲೇ ಬಂದಿದ್ದೇನೆ. ಇನ್ನೂ ಏನೇನು ಆರೋಪಗಳು ಬರುತ್ತವೆಯೋ ಗೊತ್ತಿಲ್ಲ. ಆದ್ರೆ ನಾವ್ ಇದಕ್ಕೆಲ್ಲ ಹೆದರಲ್ಲ, ಎಲ್ಲದಕ್ಕೂ ರೆಡಿ ಆಗಿದ್ದೀನಿ. ಕುಮಾರಸ್ವಾಮಿ ಅವರ ಆರೋಪಗಳೆಲ್ಲವೂ ಸಂಪೂರ್ಣ ಸುಳ್ಳು, ಹೆಣ್ಣುಮಕ್ಕಳನ್ನ ತೇಜೋವಧೆ ಮಾಡುವ ಕೆಲಸ ಮಾಡಲಾಗ್ತಿದೆ. ಜನ ಇದನ್ನ ನಂಬಬೇಡಿ ಎಂದು ಮನವಿ ಮಾಡಿದ್ದಾರೆ.
ಕುಮಾರಸ್ವಾಮಿ ಅವರದ್ದು ಸುಳ್ಳು ಆರೋಪ, ಈ ಬಗ್ಗೆ ಸೈಬರ್ ಕ್ರೈಂ ವಿಭಾಗಕ್ಕೆ ದೂರು ಕೊಟ್ಟಿದ್ದೇನೆ. ಎಫ್ಐಆರ್ ಕೂಡ ಮಾಡಿಸಿದ್ದೇನೆ. ಸುಳ್ಳು ಆರೋಪಗಳಿಗೆ ಏನ್ ಉತ್ತರ ಕೊಡೋಕಾಗುತ್ತೆ. ಅಲ್ಲದೇ ಈ ರೀತಿ ಹಿರಿಯರು ಸುಳ್ಳು ಆರೋಪ ಮಾಡಿದ್ರೆ, ಯಾವ ರೀತಿ ಕ್ರಮ ತಗೋಬೇಕು ಅಂತಾ ಮುಖ್ಯಕಾರ್ಯದರ್ಶಿಗಳ ಗಮನಕ್ಕೆ ತರುತ್ತೇನೆ, ಅವರಿಗೆ ಪತ್ರ ಬರೆಯುತ್ತೇನೆ. ಜೊತೆಗೆ ಪಿಡಿಎಫ್ ಯಾರು ಬಿಡುಗಡೆ ಮಾಡಿದರು ಅವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.
ಕುಮಾರಸ್ವಾಮಿಯವರು ಕೆಲಸ ಮಾಡೋದು ಬಿಟ್ಟು ಯಾಕೆ ಹೀಗೆ ಅಧಿಕಾರಿಗಳಿಗೆ ಹಿಂಸೆ ಮಾಡ್ತಿದ್ದಾರೆ ಅಂತಾ ಎಂದು ಡಿಸಿ ಪ್ರಶ್ನಿಸಿದ್ದಾರೆ.
ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ, ಬೆಳಿಗ್ಗೆ ಹಾಸನದ ಶಾಸಕ ಹೆಚ್.ಪಿ ಸ್ವರೂಪ್ಪ್ರಕಾಶ್ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಜಿಲ್ಲಾಧಿಕಾರಿ ಕೆ.ಎಸ್ ಲತಾಕುಮಾರಿ ಹಾಗೂ ಉಸ್ತುವಾರಿ ಸಚಿವ ಶಿವಲಿಂಗೇಗೌಡ ವಿರುದ್ಧ ಲಂಚದ ಆರೋಪ ಮಾಡಿದ್ದರು. ಇದೇ ವೇಳೆ ಡಿಸಿ ಪಿಎ ಶಶಿಕಿರಣ್ ಅವರದ್ದು ಎನ್ನಲಾದ ವಾಟ್ಸಾಪ್ ಚಾಟ್ ಬಿಡುಗಡೆ ಮಾಡಿದ್ದರು.
ಹಾಸನ ಡಿಸಿ, ಸಚಿವ ಶಿವಲಿಂಗೇಗೌಡ ವಿರುದ್ಧ ಲಂಚದ ಆರೋಪ: ವಾಟ್ಸಾಪ್ ಚಾಟ್ ಬಹಿರಂಗಪಡಿಸಿದ ಹೆಚ್.ಡಿ.ಕುಮಾರಸ್ವಾಮಿ
ಹಾಸನ: ಹಾಸನ ಜಿಲ್ಲಾಧಿಕಾರಿ ಹಾಗೂ ಸಚಿವ ಶಿವಲಿಂಗೇಗೌಡ ವಿರುದ್ಧ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಲಂಚದ ಆರೋಪ ಮಾಡಿದ್ದಾರೆ.
ಸುದ್ದಿಗೋಷ್ಠಿ ನಡೆಸಿದ ಹೆಚ್.ಡಿ.ಕುಮಾರಸ್ವಾಮಿ, ಹಾಸನ ಡಿಸಿ ಪಿಎ ಶಶಿಕಿರಣ್ ಅವರದ್ದು ಎನ್ನಲಾದ ವಾಟ್ಸಾಪ್ ಚಾಟ್ ಪ್ರಿಂಟ್ನ ಕುಮಾರಸ್ವಾಮಿ ಓದಿ ಹೇಳಿದ್ದು, ಇದು ಒಂದು ಜಿಲ್ಲೆ ಅಲ್ಲ. ಎಲ್ಲಾ ಕಡೆ ಇದೇ ವಾತಾವರಣ ಇದೆ. ಸಿಎಂ 10 ರೂ. ಲಂಚ ಕೇಳಿದರೂ ಫೋನ್ ಕರೆ ಮಾಡಿ ಅಂತಾರೆ. ಆದ್ರೆ ಇಲ್ಲಿನ ಸಚಿವರು ಗೌರವಯುತವಾಗಿ ಕೊಡಿ ಎಂದಿದ್ದರು ಎಂದು ವಾಗ್ದಾಳಿ ನಡೆಸಿದ್ದಾರೆ.
ಡಿಸಿ ಅವರ ಪಿಎ ಶಶಿಕಿರಣ್ ಅವರ ವಾಟ್ಯಾಪ್ ಚಾಟ್ ಪ್ರಕಾರ, ಮೂರು ಕ್ರಷರ್ ಫೈಲ್ ಬಗ್ಗೆ ಚರ್ಚೆ ನಡೆದಿದೆ. ಕಳೆದ ಮೂರು ವರ್ಷದಿಂದ ನಿಮ್ ಹತ್ತಿರ ಎಷ್ಟು ಕೆಲಸ ಮಾಡಿಸಿದ್ದೇನೆ. ಕೇಳಿದ ಹಾಗೆ ಹಣ ಕೊಟ್ಟಿದ್ದೀನಿ, ಈಗ ಇಷ್ಟೊಂದು ಹಣ ಕೇಳ್ತಿದ್ದೀರಿ ಎಂದು ಇನ್ನೊಂದು ಕಡೆಯಿಂದ ಮೆಸೇಜ್ ಬಂದಿದೆ. ಅದಕ್ಕೆ ಈ ಕಡೆಯಿಂದ, ನೀವು ಕೊಡವಷ್ಟು ದುಡ್ಢನ್ನು ನಾವು ಡಿಸಿಯವರಿಗೆ ಕೊಡಬೇಕು. ಮಿಕ್ಕಿದ ಸಣ್ಣ ಹಣದಲ್ಲಿ ನಾನು ನನ್ನ ಸೆಕ್ಷನ್ಗೆ ಹಂಚಬೇಕು. ಎಲ್ಲರಿಗೂ ಕೊಟ್ಟು ಮಿಕ್ಕೋದು ಮೂರು ನಾಮ ಮಾತ್ರ ಎಂದಿದ್ದಾರೆ. ಏಪ್ರಿಲ್ ಅಲ್ಲಿ ಒಂದು ಕೆಲಸಕ್ಕೆ ಹಠ ಹಿಡಿದು 15 ಲಕ್ಷ ಇಸ್ಕೊಂಡ್ರು. ಕೇಳಿದ್ರೆ ಡಿಸಿ ಮೇಡಂ ಒಂದು ರೂಪಾಯಿ ಕಡಿಮೆ ಆದರೂ ಆಗಲ್ಲ ಅಂತಾರೆ. ಇನ್ನೇನು ಡಿಸಿ ಮೇಡಂ ತಾನು ಇಸ್ಕೋತೀನಿ ಎಂದು ಪ್ರೆಸ್ಮೀಟ್ ಮಾಡಿ ಹೇಳ್ತಾರಾ? ಹಿಂದೆ ಇದ್ದ ಸತ್ಯಭಾಮ ಅವರೇ ಪರವಾಗಿಲ್ಲ. ಸ್ವಲ್ಪ ಮಾತ್ರ ಕೆಲಸ ಹೇಳೋರು. ದುಡ್ಡು ಅಷ್ಟೇ ಕಡಿಮೆ. ಈ ಡಿಸಿ ಬಂದಮೇಲೆ ನಮಗೂ ಖರ್ಚು ಮಾಡಿ ಸಾಕಾಗಿದೆ ಎಂದು ಹೇಳಿದ್ದು ಕೂಡ ಚಾಟ್ಗಳಲ್ಲಿವೆ.
ಆಗ ಇನ್ನೊಂದು ಕಡೆಯವರು, ಅವೆಲ್ಲ ಬಿಡಿ ಸರ್. ಆ ಮೂರು ಫೈಲ್ದು ಒಂದು ಫೈನಲ್ ಅಮೌಂಟ್ ಹೇಳಿ ಎಂದಿದ್ದಾರೆ. ಅದಕ್ಕೆ ಹೇಳಿದ್ನಲ್ಲ ಹೋದ ವಾರವೇ, ಒಟ್ಟು 60 ಲಕ್ಷ ಕೊಡೋದಿದ್ದರೆ ಮಾತಾಡಿ. ಇಲ್ಲಂದ್ರೆ ಹಿಂಸೆಕೊಡಬೇಡಿ ಎಂದು ಇವರು ಹೇಳಿದ್ದಾರೆ. ಸಚಿವರು, ಸಂದರ ಬಳಿ ಬೇಕಿದ್ರೆ ಹೇಳಿಸುತ್ತೀನಿ ಎಂದಿದ್ದಕ್ಕೆ, ಶಿವಲಿಂಗೇಗೌಡರು ಡಿಸಿ ಬದಲಾವಣೆ ಮಾಡಿಸ್ತೀನಿ ಅಂತಿದ್ದರು. ಕೊನೆಗೆ ಡಿಸಿ ಮೇಡಂ ಅರಸೀಕೆರೆ ತಹಶೀಲ್ದಾರ್ ಸಂತೋಷ್ ಕಡೆ ಮಾತಾಡಿಸಿ 75 ಲಕ್ಷ ಕೊಟ್ಟು ಸುಮ್ಮನಿರಿಸಿದ್ದು. ಆ ಹಣವನ್ನು ನಾನು ಎಲ್ಲೆಲ್ಲೋ ಹೊಂದಿಸಿ ಕೊಟ್ಟುಬಂದೆ ಎಂದು ಹೇಳಿರುವುದು ಇದರಲ್ಲಿವೆ ಎಂದು ಕುಮಾರಸ್ವಾಮಿ ವಾಟ್ಸಾಪ್ ಚಾಟ್ ಓದಿ ಹೇಳಿದ್ದಾರೆ.
ಈ ಎಲ್ಲ ದಾಖಲೆಗಳನ್ನು ತನಗೆ ಯಾರೋ ಒಬ್ಬರು ಕೊಟ್ಟು ಹೋಗಿದ್ದಾರೆ ಎಂದು ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಈ ರೀತಿ ಪ್ರತಿ ಜಿಲ್ಲೆಗಳಲ್ಲಿಯೂ ನಡೆಯುತ್ತಿದೆ. ಈ ಚಾಟ್ಗಳ ಬಗ್ಗೆ ಡಿಜಿ ಮತ್ತು ಐಜಿಪಿ ಡಾ.ಎಂ.ಎ.ಸಲೀಂ ಅವರು ತನಿಖೆ ಮಾಡಿಸ್ತಾರಾ? ಯಾರು ಈ ಮಧ್ಯವರ್ತಿಗಳು? ಯಾರ್ಯಾರಿಗೆ ದುಡ್ಡು ಹೋಗ್ತಿದೆ? ಹಾಸನಕ್ಕೆ ಬಂದ ಸಿಎಂ ಈ ಬಗ್ಗೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಈ ಬಗ್ಗೆ ಕಡಿವಾಣ ಹಾಕ್ತಾರೋ ಇಲ್ಲವೋ ಎಂದು ಕೇಳಬೇಕಿದೆ. ಇಂತಹ ವಿಚಾರವನ್ನು ಮಾತನಾಡಿ ಮಾತನಾಡಿ ಬೇಸರ ಆಗಿದೆ. ಯಾರೂ ಅನ್ಯತಾ ಭಾವಿಸಬೇಡಿ. ಸರ್ಕಾರದಲ್ಲಿ ಏನು ನಡೆಯುತ್ತಿದೆ ಅದನ್ನು ಜನರ ಮುಂದೆ ಇಟ್ಟಿದ್ದೇನೆ ಎಂದವರು ತಿಳಿಸಿದ್ದಾರೆ.

