ಹೊಸ ವಾಹನ ಖರೀದಿಸಿದ ಬಳಿಕ ಹಲವರು ಸುರಕ್ಷತೆಗಾಗಿ ಅಥವಾ ತಮ್ಮ ವಾಹನ ವಿಭಿನ್ನವಾಗಿ ಕಾಣಬೇಕು ಎಂಬ ಕಾರಣಕ್ಕೆ ಹೆಚ್ಚುವರಿ ಆಕ್ಸೆಸರೀಸ್‌ಗಳನ್ನು ಅಳವಡಿಸಿ ವಾಹನವನ್ನು ಮಾಡಿಫೈ ಮಾಡಿಸುತ್ತಾರೆ. ಆದರೆ ಇಂತಹ ಹೆಚ್ಚುವರಿ ಮಾರ್ಪಾಡುಗಳು ಕೆಲವೊಮ್ಮೆ ಕಾನೂನು ತೊಡಕುಗಳಿಗೆ ಕಾರಣವಾಗಬಹುದು ಎಂಬುದು ಹಲವರಿಗೆ ತಿಳಿದಿರುವುದಿಲ್ಲ.
ಶೋರೂಮ್‌ನಿಂದ ಖರೀದಿಸಿದ ವಾಹನಗಳಿಗೆ ಹೆಚ್ಚುವರಿ ಆಕ್ಸೆಸರೀಸ್‌ಗಳನ್ನು ಅಳವಡಿಸಿ ಇತರರ ಸುರಕ್ಷತೆಗೆ ಅಪಾಯ ಉಂಟುಮಾಡುವುದು ಕಾನೂನುಬಾಹಿರವಾಗಬಹುದು ಎಂದು ಸಂಚಾರ ಪೊಲೀಸರು ಎಚ್ಚರಿಸಿದ್ದಾರೆ. ಹೀಗಾಗಿ ಮೋಟಾರು ವಾಹನ ಕಾಯ್ದೆಯ ಪ್ರಕಾರ ವಾಹನಗಳಿಗೆ ಯಾವ ಆಕ್ಸೆಸರೀಸ್‌ಗಳನ್ನು ಅಳವಡಿಸಬಹುದು ಮತ್ತು ಯಾವುದರ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂಬುದನ್ನು ತಿಳಿದುಕೊಳ್ಳುವುದು ಅಗತ್ಯ.
ಹೆಚ್ಚುವರಿ ಬಂಪರ್‌ಗಳು
ಕಾರು ಖರೀದಿಸಿದ ತಕ್ಷಣ ಹಲವರು ವಾಹನಕ್ಕೆ ಯಾವುದೇ ಹಾನಿಯಾಗಬಾರದು ಎಂಬ ಉದ್ದೇಶದಿಂದ ಮುಂಭಾಗ ಮತ್ತು ಹಿಂಭಾಗದಲ್ಲಿ ಹೆಚ್ಚುವರಿ ಸ್ಟೀಲ್ ಬಂಪರ್‌ಗಳನ್ನು ಅಳವಡಿಸುತ್ತಾರೆ. ಆದರೆ ಈ ರೀತಿಯ ಹೆಚ್ಚುವರಿ ಬಂಪರ್‌ಗಳನ್ನು ಅಳವಡಿಸುವುದು ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 52ರ ಅಡಿಯಲ್ಲಿ ನಿಷೇಧಿತ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಪಘಾತದ ಸಂದರ್ಭದಲ್ಲಿ ಇಂತಹ ಬಂಪರ್‌ಗಳಿಂದ ಏರ್‌ಬ್ಯಾಗ್‌ಗಳು ಸರಿಯಾದ ಸಮಯದಲ್ಲಿ ತೆರೆಯಲು ಅಡ್ಡಿಯಾಗಬಹುದು. ಅಲ್ಲದೆ, ಪಕ್ಕದಿಂದ ಸಂಚರಿಸುವ ದ್ವಿಚಕ್ರ ವಾಹನಗಳು ಬಂಪರ್‌ಗೆ ಡಿಕ್ಕಿಯಾಗಿ ಕೆಳಗೆ ಬೀಳುವ ಅಪಾಯವೂ ಇದೆ ಎಂದು ಎಚ್ಚರಿಸಲಾಗಿದೆ.
ನಂಬರ್ ಪ್ಲೇಟ್‌ಗಳಲ್ಲಿ ಬದಲಾವಣೆ ಬೇಡ
ದೇಶಾದ್ಯಂತ ಒಂದೇ ರೀತಿಯ ನಂಬರ್ ಪ್ಲೇಟ್‌ಗಳನ್ನು ಜಾರಿಗೆ ತರುವ ಉದ್ದೇಶದಿಂದ ಸರ್ಕಾರ ಹೈ ಸೆಕ್ಯುರಿಟಿ ನಂಬರ್ ಪ್ಲೇಟ್‌ಗಳನ್ನು ಪರಿಚಯಿಸಿದೆ. ಆದರೆ ಕೆಲವರು ನಂಬರ್ ಪ್ಲೇಟ್‌ನ ವಿನ್ಯಾಸವನ್ನೇ ಬದಲಾಯಿಸುತ್ತಾರೆ.
ಕೆಲವು ಅಕ್ಷರಗಳನ್ನು ದೊಡ್ಡದಾಗಿ, ಕೆಲವು ಅಕ್ಷರಗಳನ್ನು ಚಿಕ್ಕದಾಗಿ ಬರೆಯಿಸುವುದು, ನಂಬರ್ ಪ್ಲೇಟ್ ಮೇಲೆ ಬೇರೆ ಹೆಸರುಗಳು ಅಥವಾ ಸ್ಟಿಕ್ಕರ್‌ಗಳನ್ನು ಅಂಟಿಸುವುದು ಕಾನೂನುಬಾಹಿರ ಎಂದು ಪೊಲೀಸರು ತಿಳಿಸಿದ್ದಾರೆ. ಇಂತಹ ಬದಲಾವಣೆಗಳು ವಾಹನದ ಬಗ್ಗೆ ಪೊಲೀಸರಿಗೆ ಅನುಮಾನ ಮೂಡಿಸಬಹುದು.
ವಾಹನದ ಗಾಜುಗಳ ಮೇಲೆ ಸ್ಟಿಕ್ಕರ್‌ಗಳು ಬೇಡ
ಬಹಳಷ್ಟು ಮಂದಿ ಕಾರಿನ ಗಾಜುಗಳ ಮೇಲೆ ದೊಡ್ಡ ಸ್ಟಿಕ್ಕರ್‌ಗಳು, ದೇವರ ಹೆಸರುಗಳು, ಫೋಟೋಗಳು ಅಥವಾ ಇತರ ಬರಹಗಳನ್ನು ಹಾಕಿಸಿಕೊಳ್ಳುತ್ತಾರೆ. ಆದರೆ ವಾಹನದ ಮುಂಭಾಗ ಮತ್ತು ಹಿಂಭಾಗದ ಗಾಜುಗಳ ಮೇಲೆ ರೇಡಿಯಂ, ಹೆಸರುಗಳು ಅಥವಾ ಫೋಟೋಗಳನ್ನು ಅಳವಡಿಸಬಾರದು ಎಂದು ಅಧಿಕಾರಿಗಳು ಸೂಚಿಸಿದ್ದಾರೆ.
ಅಲ್ಲದೆ, ವಾಹನದ ಗಾಜುಗಳಲ್ಲಿ ಕನಿಷ್ಠ ಶೇ.70ರಷ್ಟು ಬೆಳಕು ಪ್ರವೇಶಿಸುವಂತಿರಬೇಕು ಎಂದು ನಿಯಮಗಳು ಹೇಳುತ್ತವೆ. ಕಾರಿನ ಗಾಜಿನ ಮೇಲೆ ಹೆಸರುಗಳನ್ನು ಬರೆಯಿಸುವುದು ಸೇರಿದಂತೆ ನಿಯಮ ಉಲ್ಲಂಘನೆ ಮಾಡಿದರೆ ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 177ರ ಅಡಿಯಲ್ಲಿ ದಂಡ ವಿಧಿಸುವ ಸಾಧ್ಯತೆ ಇದೆ.
ಬ್ಲ್ಯಾಕ್ ಫಿಲ್ಮ್, ಸನ್‌ಶೇಡ್‌ಗಳ ಬಳಕೆಯಲ್ಲೂ ಎಚ್ಚರ
ದೇಶದ ಭದ್ರತೆಯ ದೃಷ್ಟಿಯಿಂದ ವಾಹನಗಳ ಗಾಜಿನ ಮೇಲೆ ಬ್ಲ್ಯಾಕ್ ಫಿಲ್ಮ್ ಅಳವಡಿಸುವುದನ್ನು ಈಗಾಗಲೇ ನಿಷೇಧಿಸಲಾಗಿದೆ. ಆದರೆ ಕೆಲವರು ಅದರ ಬದಲಿಗೆ ಸನ್‌ಶೇಡ್‌ಗಳು ಮತ್ತು ಮ್ಯಾಗ್ನೆಟಿಕ್ ಕರ್ಟನ್‌ಗಳನ್ನು ಬಳಸುತ್ತಿದ್ದಾರೆ.
ಇಂತಹ ಪರದೆಗಳ ಬಳಕೆಯೂ ನಿಯಮಬಾಹಿರವಾಗಬಹುದು ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ. ಕಾರು ತಿರುವು ತೆಗೆದುಕೊಳ್ಳುವಾಗ ಅಥವಾ ಸೈಡ್ ಮಿರರ್‌ಗಳನ್ನು ಸರಿಹೊಂದಿಸುವಾಗ ಇವು ದೃಶ್ಯತೆಗೆ ಅಡ್ಡಿಯಾಗಬಹುದು. ಇದರಿಂದ ಅಪಘಾತದ ಅಪಾಯ ಹೆಚ್ಚಾಗುವ ಸಾಧ್ಯತೆ ಇದೆ.
ಆಕ್ಸೆಸರೀಸ್ ಅಳವಡಿಸುವ ಮುನ್ನ ಎಚ್ಚರ!
ವಾಹನಕ್ಕೆ ಹೆಚ್ಚುವರಿ ಆಕ್ಸೆಸರೀಸ್‌ಗಳನ್ನು ಅಳವಡಿಸುವಾಗ ಅದರ ಮೂಲ ವಿನ್ಯಾಸ, ವೇಗ, ಶಬ್ದ ಹಾಗೂ ಸುರಕ್ಷತಾ ವ್ಯವಸ್ಥೆಗಳಲ್ಲಿ ಯಾವುದೇ ಬದಲಾವಣೆ ಆಗದಂತೆ ನೋಡಿಕೊಳ್ಳಬೇಕು ಎಂದು ಸಂಚಾರ ಪೊಲೀಸರು ಸೂಚಿಸಿದ್ದಾರೆ.
ನಿಯಮಗಳಿಗೆ ವಿರುದ್ಧವಾಗಿ ಹೆಚ್ಚುವರಿ ಆಕ್ಸೆಸರೀಸ್‌ಗಳನ್ನು ಅಳವಡಿಸುವುದರಿಂದ ವಾಹನದ ವಿಮಾ ಕ್ಲೇಮ್‌ಗೂ ಸಮಸ್ಯೆಯಾಗುವ ಸಾಧ್ಯತೆ ಇದೆ. ಹೀಗಾಗಿ ವಾಹನವನ್ನು ಮಾಡಿಫೈ ಮಾಡುವ ಮುನ್ನ ಸಂಬಂಧಪಟ್ಟ ನಿಯಮಗಳನ್ನು ತಿಳಿದುಕೊಂಡು, ಅನುಮತಿಸಲಾದ ಆಕ್ಸೆಸರೀಸ್‌ಗಳನ್ನು ಮಾತ್ರ ಬಳಸುವುದು ಉತ್ತಮ.

