ಮೈಸೂರು: ನಂಜನಗೂಡಿನ ಪಂಚಮಹಾರಥೋತ್ಸವದ ವೇಳೆ ಭೀಕರ ಕಾಲ್ತುಳಿತ ಸಂಭವಿಸಿದ್ದು, ಓರ್ವ ಸಾವನ್ನಪ್ಪಿರುವ ಘಟನೆ ನಡೆದಿದೆ. ತಂದೆ ಹಾಗೂ ಮಗ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಐತಿಹಾಸಿಕ ಶ್ರೀನಂಜುಂದೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಪಂಚಮಹಾರಥೋತ್ಸವ ನಡೆಯುತ್ತಿದ್ದು, ರಥೋತ್ಸವಕ್ಕೆ ಶಸಕ ದರ್ಶನ್ ಪುಟ್ಟಣ್ಣಯ್ಯ ಚಾಲನೆ ನೀಡಿದ್ದಾರೆ. ರಥೋತ್ಸವಕ್ಕೆ ಸಾಗರೋಪಾದಿಯಲ್ಲಿ ಭಕ್ತಸಾಗವೇ ಹರಿದು ಬಂದಿದೆ.
ರಥಬೀದಿಯಲ್ಲಿ ರಥೋತ್ಸವ ಸಾಗುತ್ತಿದ್ದ ವೇಳೆ ನೆರೆದಿದ್ದ ಜನರಲ್ಲಿ ನೂಕು ನುಗ್ಗಲು ಉಂಟಾಗಿದ್ದು, ಕಾಲ್ತುಳಿತ ಸಂಭವಿಸಿದೆ. ಕಾಲ್ತುಳಿತದಲ್ಲಿ ಓರ್ವರು ಮೃತಪಟ್ಟಿದ್ದು, ತಂದೆ-ಮಗ ಇಬ್ಬರು ಗಂಭೀರವಾಗಿ ಗಯಗೊಂಡು ತೀವ್ರ ಅಸ್ವಸ್ಥರಾಗಿದ್ದಾರೆ.
56 ವರ್ಷದ ನಂಜುಂಡಸ್ವಾಮಿ ಮೃತ ದುರ್ದೈವಿ. ರಂಗಸ್ವಾಮಿ ಎಂಬುವವರ ಸ್ಥಿತಿ ಗಂಭೀರವಾಗಿದ್ದು, ಅವರ ಮಗ ಅಪ್ಪು ಎಂಬುವವರಿಗೆ ಕಾಲು ಮುರಿದಿದೆ. ಇಬ್ಬರನ್ನೂ ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ರಥೋತ್ಸವದಲ್ಲಿ ಜನಜಂಗುಳಿಯನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟಿದ್ದಾರೆ.

