ಬೆಂಗಳೂರು: ಮೆಟ್ರೋ ಹಳಿಗಳ ಮೇಲೆ ಸಾರ್ವಜನಿಕರ ಅನಧಿಕೃತ ಪ್ರವೇಶ, ಆಕಸ್ಮಿಕ ಅಪಘಾತಗಳು ಹಾಗೂ ಆತ್ಮಹತ್ಯೆ ಪ್ರಕರಣಗಳಿಗೆ ಶಾಶ್ವತ ಬ್ರೇಕ್ ಹಾಕಲು ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) ಬೃಹತ್ ಮಾಸ್ಟರ್ ಪ್ಲಾನ್ ಒಂದನ್ನು ಸಿದ್ಧಪಡಿಸಿದೆ. ತನ್ನ ಜಾಲದ ಒಟ್ಟು 177 ನಿಲ್ದಾಣಗಳಲ್ಲಿ ಸುಮಾರು ₹1,274 ಕೋಟಿ ರೂಪಾಯಿ ವೆಚ್ಚದಲ್ಲಿ ಪ್ಲಾಟ್‌ಫಾರ್ಮ್ ಸ್ಕ್ರೀನ್ ಡೋರ್ಸ್‌ಗಳನ್ನು (PSD – ಸ್ವಯಂಚಾಲಿತ ಗೇಟ್‌ಗಳು) ಅಳವಡಿಸಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.
ಮೆಟ್ರೋದ ಹಂತ-3ಎ (ಹೆಬ್ಬಾಳ-ಸರ್ಜಾಪುರ) ಯೋಜನೆಗಾಗಿ ಸಿದ್ಧಪಡಿಸಲಾಗಿರುವ ವಿಸ್ತೃತ ಯೋಜನಾ ವರದಿಯಲ್ಲಿ (DPR) ಈ ಮಹತ್ವದ ನಿರ್ಧಾರವನ್ನು ಸೇರಿಸಲಾಗಿದ್ದು, ಇಡೀ ಮೆಟ್ರೋ ನೆಟ್‌ವರ್ಕ್ ಅನ್ನು ಸುರಕ್ಷಿತ ವಲಯವನ್ನಾಗಿ ಮಾಡಲು BMRCL ಮುಂದಾಗಿದೆ.
ಪ್ರಸ್ತುತ ಬೆಂಗಳೂರು ಮೆಟ್ರೋದಲ್ಲಿ ಪ್ರತಿನಿತ್ಯ ಸುಮಾರು 10 ಲಕ್ಷಕ್ಕೂ ಅಧಿಕ ಪ್ರಯಾಣಿಕರು ಸಂಚರಿಸುತ್ತಿದ್ದು, ಜನದಟ್ಟಣೆ ಹೆಚ್ಚಾದಂತೆ ಹಳಿಗಳ ಬಳಿ ಸಂಭವಿಸುವ ಅವಘಡಗಳ ಸಂಖ್ಯೆಯೂ ಆತಂಕಕಾರಿಯಾಗಿ ಏರಿಕೆಯಾಗಿದೆ. ಡಿಪಿಆರ್ ವರದಿಯ ಪ್ರಕಾರ ಕಳೆದ ಎರಡು ವರ್ಷಗಳ ಅಂಕಿ-ಅಂಶಗಳು ಹೀಗಿವೆ:
2024 ರ ವರದಿ: 8 ಬಾರಿ ಹಳಿಗಳ ಮೇಲೆ ಅನಧಿಕೃತ ಪ್ರವೇಶ, 7 ಆತ್ಮಹತ್ಯೆ ಸಾವುಗಳು, 2 ಆತ್ಮಹತ್ಯೆ ಯತ್ನಗಳು ಹಾಗೂ 2 ಆಕಸ್ಮಿಕವಾಗಿ ಬಿದ್ದ ಪ್ರಕರಣಗಳು ದಾಖಲಾಗಿವೆ.
2025 ರ ವರದಿ: 5 ಬಾರಿ ಹಳಿಗಳ ಮೇಲೆ ಅನಧಿಕೃತ ಪ್ರವೇಶ, 5 ಆತ್ಮಹತ್ಯೆ ಸಾವುಗಳು, 2 ಆತ್ಮಹತ್ಯೆ ಯತ್ನಗಳು, 2 ಆಕಸ್ಮಿಕವಾಗಿ ಬಿದ್ದ ಪ್ರಕರಣಗಳು ಹಾಗೂ ವಿದ್ಯುತ್ ಸ್ಪರ್ಶದಿಂದ (Electrocution) ಒಬ್ಬರು ಮೃತಪಟ್ಟಿದ್ದಾರೆ.
“ಪ್ರಯಾಣಿಕರ ಸುರಕ್ಷತೆಗೆ ಪ್ಲಾಟ್‌ಫಾರ್ಮ್ ಸ್ಕ್ರೀನ್ ಡೋರ್ಸ್‌ಗಳು ಅತ್ಯಗತ್ಯ. ಇತ್ತೀಚಿನ ಘಟನೆಗಳನ್ನು ಗಮನಿಸಿದರೆ ಇದನ್ನು ಆದಷ್ಟು ಬೇಗ ಅಳವಡಿಸಬೇಕು. ಭವಿಷ್ಯದ ಚಾಲಕರಹಿತ ಮೆಟ್ರೋ ಕಾರ್ಯಾಚರಣೆಗೂ ಇದು ಕಡ್ಡಾಯ” ಎಂದು ಮೆಟ್ರೋ ಕಾರ್ಯಾಚರಣೆಗಳ ಕುರಿತು ನಿರಂತರ ನಿಗಾ ಇಡುವ ‘ಬೆಂಗಳೂರು ಮೆಟ್ರೋ ಟ್ರ್ಯಾಕರ್’ ತನ್ನ ಎಕ್ಸ್ (X) ಖಾತೆಯಲ್ಲಿ ಅಭಿಪ್ರಾಯಪಟ್ಟಿದೆ.
ತಾಂತ್ರಿಕ ಅಪಾಯಗಳು ಮತ್ತು ಕಾರ್ಯಾಚರಣೆಯ ಸವಾಲು
ಮೆಟ್ರೋ ಹಳಿಗಳ ಪಕ್ಕದಲ್ಲೇ 750V DC ಸಾಮರ್ಥ್ಯದ ಲೈವ್ ಥರ್ಡ್ ರೇಲ್ (ವಿದ್ಯುತ್ ಲೈನ್) ಇರುವುದರಿಂದ ಹಳಿಗಳ ಬಳಿಯ ಸುರಕ್ಷತೆ ದೊಡ್ಡ ಸವಾಲಾಗಿದೆ. ಯಾರಾದರೂ ಹಳಿಗಳ ಮೇಲೆ ಬಿದ್ದಾಗ ರಕ್ಷಣಾ ಕಾರ್ಯಕ್ಕಾಗಿ ಎರಡೂ ಬದಿಯ ರೈಲು ಸಂಚಾರವನ್ನು ಸ್ಥಗಿತಗೊಳಿಸಬೇಕಾಗುತ್ತದೆ. ಇದರಿಂದ ಇಡೀ ಮೆಟ್ರೋ ಸೇವೆ ಸಂಪೂರ್ಣ ಅಸ್ತವ್ಯಸ್ತಗೊಳ್ಳುತ್ತದೆ ಎಂದು ಬಿಎಂಆರ್‌ಸಿಎಲ್ ಕಳವಳ ವ್ಯಕ್ತಪಡಿಸಿದೆ.
ಚಾಲಕರಹಿತ ಮೆಟ್ರೋ ಮತ್ತು ಆದಾಯ:
ಈ ಪಿಎಸ್‌ಡಿ ಗೇಟ್‌ಗಳ ಅಳವಡಿಕೆಯಿಂದ ಭವಿಷ್ಯದಲ್ಲಿ ಬರಲಿರುವ ‘GoA4’ (ಚಾಲಕ ರಹಿತ ರೈಲು ಕಾರ್ಯಾಚರಣೆ) ಸೇವೆಗೆ ಸುಲಭ ಹಾದಿ ನಿರ್ಮಾಣವಾಗಲಿದೆ. ಇದಲ್ಲದೆ, ಈ ಸ್ಕ್ರೀನ್ ಡೋರ್‌ಗಳ ಮೇಲೆ ಡಿಜಿಟಲ್ ಜಾಹೀರಾತುಗಳನ್ನು ಪ್ರದರ್ಶಿಸುವ ಮೂಲಕ ಮೆಟ್ರೋ ಸಂಸ್ಥೆ ಹೆಚ್ಚುವರಿ ಟಿಕೆಟೇತರ ಆದಾಯವನ್ನೂ ಗಳಿಸಬಹುದಾಗಿದೆ.
ಹಂತ-ಹಂತವಾಗಿ ವಿಸ್ತರಣೆ: ವೆಚ್ಚದ ವಿವರಗಳು ಹೀಗಿವೆ
ಈ ಯೋಜನೆಯು ಮೆಟ್ರೋದ ಹಂತ-1, ಹಂತ-2, ಹಂತ-2ಎ, ಹಂತ-2ಬಿ, ಹಂತ-3 ಮತ್ತು ಹಂತ-3ಎ ಸೇರಿದಂತೆ ಇಡೀ ಮೆಟ್ರೋ ಜಾಲವನ್ನು ಒಳಗೊಳ್ಳಲಿದ್ದು, ಒಟ್ಟು ₹1,274 ಕೋಟಿ ವೆಚ್ಚದ ಹಂಚಿಕೆ ಹೀಗಿದೆ:
ಉಪಕರಣಗಳ ಖರೀದಿಗಾಗಿ: ₹747 ಕೋಟಿ
ಸಿವಿಲ್ ಕಾಮಗಾರಿಗಳಿಗಾಗಿ: ₹317 ಕೋಟಿ
ಸಿಗ್ನಲಿಂಗ್, ಟೆಲಿಕಾಂ ಮತ್ತು ಎಲೆಕ್ಟ್ರಿಕಲ್ ಬದಲಾವಣೆಗಳು: ₹210 ಕೋಟಿ
ಒಟ್ಟು ಯೋಜನಾ ಮೊತ್ತ: ₹1,274 ಕೋಟಿ

