HomeInternationalನೈಜೀರಿಯಾದಲ್ಲಿ ಘೋರ ದುರಂತ ; ಅಕ್ರಮ ಪೆಟ್ರೋಲಿಯಂ ಕಳ್ಳತನದ ವೇಳೆ ವಿಷಕಾರಿ ಅನಿಲ ಸೇವಿಸಿ 43...

ನೈಜೀರಿಯಾದಲ್ಲಿ ಘೋರ ದುರಂತ ; ಅಕ್ರಮ ಪೆಟ್ರೋಲಿಯಂ ಕಳ್ಳತನದ ವೇಳೆ ವಿಷಕಾರಿ ಅನಿಲ ಸೇವಿಸಿ 43 ಮಂದಿ ಸಾವು

ನೈಜೀರಿಯಾದಲ್ಲಿ ಅಕ್ರಮವಾಗಿ ಪೆಟ್ರೋಲಿಯಂ ಉತ್ಪನ್ನ ಕಳ್ಳತನ ಮಾಡಲು ಮುಂದಾದ ವೇಳೆ ಭೀಕರ ದುರಂತ ಸಂಭವಿಸಿದೆ. ವಿಷಕಾರಿ ಹೊಗೆಯನ್ನು ಸೇವಿಸಿ ಕನಿಷ್ಠ 43 ಮಂದಿ ಮೃತಪಟ್ಟಿದ್ದು, ಹಲವರು ಪ್ರಜ್ಞೆ ಕಳೆದುಕೊಂಡು ನದಿಗೆ ಬಿದ್ದು ಮುಳುಗಿದ್ದಾರೆ. ರಫ್ತಿಗಾಗಿ ಪೆಟ್ರೋಲಿಯಂ ಉತ್ಪನ್ನಗಳನ್ನು ತುಂಬುತ್ತಿದ್ದ ಸ್ಥಳದಲ್ಲಿ 200ಕ್ಕೂ ಹೆಚ್ಚು ಯುವಕರು ದೋಣಿಗಳ ಮೂಲಕ ಕಳ್ಳತನಕ್ಕೆ ಯತ್ನಿಸಿದ ವೇಳೆ ಈ ಘಟನೆ ನಡೆದಿದೆ.

ನೈಜೀರಿಯಾದ ದಕ್ಷಿಣ ಭಾಗದ ರಿವರ್ಸ್ ರಾಜ್ಯದಲ್ಲಿ ಅಕ್ರಮವಾಗಿ ಪೆಟ್ರೋಲಿಯಂ ಉತ್ಪನ್ನಗಳನ್ನು ಕಳ್ಳತನ ಮಾಡುವ ವೇಳೆ ವಿಷಕಾರಿ ಹೊಗೆಯನ್ನು ಸೇವಿಸಿ ಕನಿಷ್ಠ 43 ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗುರುವಾರ ಮಧ್ಯರಾತ್ರಿ ಈ ಘಟನೆ ಸಂಭವಿಸಿದೆ. ಒಕ್ರಿಕಾ ಸ್ಥಳೀಯಾಡಳಿತ ಪ್ರದೇಶದ ಒಕಾರಿ ಜೆಟ್ಟಿಯಲ್ಲಿ ಘಟನೆ ನಡೆದಿದ್ದು, ಅಲ್ಲಿನ ಹಡಗೊಂದರಲ್ಲಿ ಪೆಟ್ರೋಲಿಯಂ ಉತ್ಪನ್ನಗಳನ್ನು ರಫ್ತು ಮಾಡಲು ತುಂಬಲಾಗುತ್ತಿತ್ತು ಎಂದು ವರದಿಯಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಒಕ್ರಿಕಾ ಮತ್ತು ಸುತ್ತಮುತ್ತಲಿನ ಪ್ರದೇಶಗಳ 200ಕ್ಕೂ ಹೆಚ್ಚು ಯುವಕರು ಮರದ ದೋಣಿಗಳಲ್ಲಿ ಸ್ಥಳಕ್ಕೆ ಆಗಮಿಸಿ, ಪೈಪ್‌ಲೈನ್‌ಗೆ ಅಕ್ರಮವಾಗಿ ಸಂಪರ್ಕ ಕಲ್ಪಿಸಿದ್ದ ಟ್ಯಾಪಿಂಗ್ ಪಾಯಿಂಟ್‌ನಿಂದ ಪೆಟ್ರೋಲಿಯಂ ಉತ್ಪನ್ನಗಳನ್ನು ಕಳ್ಳತನ ಮಾಡಲು ಯತ್ನಿಸಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಆದರೆ, ಪೆಟ್ರೋಲಿಯಂ ಉತ್ಪನ್ನಗಳನ್ನು ದೋಣಿಗಳಿಗೆ ತುಂಬುತ್ತಿದ್ದ ವೇಳೆ ಹೆಚ್ಚಿನ ಪ್ರಮಾಣದ ವಿಷಕಾರಿ ಹೊಗೆ ಆವರಿಸಿಕೊಂಡಿದ್ದು, ಹಲವರು ಪ್ರಜ್ಞೆ ಕಳೆದುಕೊಂಡಿದ್ದಾರೆ. ಕೆಲವರು ನದಿಗೆ ಬಿದ್ದು ಮುಳುಗಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

“ಘಟನೆಯ ತೀವ್ರತೆ ಮತ್ತು ಸಂಪೂರ್ಣ ವಿವರಗಳನ್ನು ತಿಳಿದುಕೊಳ್ಳಲು ತನಿಖೆ ನಡೆಯುತ್ತಿದೆ” ಎಂದು ಪೊಲೀಸ್ ವಕ್ತಾರ ಬ್ಲೆಸ್ಸಿಂಗ್ ಅಗಾಬೆ ತಿಳಿಸಿದ್ದಾರೆ.

ನೈಜರ್ ಡೆಲ್ಟಾ ಪ್ರದೇಶದ ಪರಿಸರ ಮತ್ತು ಮಾನವ ಹಕ್ಕುಗಳ ಸಂಘಟನೆಯಾದ Youths and Environmental Advocacy Centre (YEAC-Nigeria) ಕೂಡ ಹಲವು ಮಂದಿ ಮೃತಪಟ್ಟಿರುವುದನ್ನು ದೃಢಪಡಿಸಿದೆ.

ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಫೈನ್‌ಫೇಸ್ ಡುಮ್ನಮೆನೆ ಫೈನ್‌ಫೇಸ್ ಅವರ ಪ್ರಕಾರ, ಇಂಡೋರಮಾ ಎಲೆಮೆ ಪೆಟ್ರೋಕೆಮಿಕಲ್ಸ್ ಪ್ರದೇಶದಿಂದ ಪೋರ್ಟ್ ಹಾರ್ಕೋರ್ಟ್ ರಿಫೈನರಿ ಕಾರಿಡಾರ್ ಮೂಲಕ ರಫ್ತಿಗಾಗಿ ಉತ್ಪನ್ನಗಳನ್ನು ತುಂಬುತ್ತಿದ್ದ ಹಡಗುಗಳತ್ತ ಪೆಟ್ರೋಲಿಯಂ ಉತ್ಪನ್ನಗಳನ್ನು ಸಾಗಿಸುವ ಪೈಪ್‌ಲೈನ್‌ನ ಟ್ಯಾಪಿಂಗ್ ಪಾಯಿಂಟ್‌ಗೆ ಯುವಕರು ಅಕ್ರಮವಾಗಿ ಪೈಪ್ ಸಂಪರ್ಕ ಕಲ್ಪಿಸಿದ್ದರು.

ಪೈಪ್‌ಲೈನ್‌ನಲ್ಲಿ ಹೆಚ್ಚಿನ ಒತ್ತಡದಲ್ಲಿ ಪೆಟ್ರೋಲಿಯಂ ಉತ್ಪನ್ನಗಳನ್ನು ಪಂಪ್ ಮಾಡಲಾಗುತ್ತಿತ್ತು. ಅದೇ ಸಮಯದಲ್ಲಿ ಯುವಕರು ಅವುಗಳನ್ನು ದೋಣಿಗಳಿಗೆ ತುಂಬುತ್ತಿದ್ದರಿಂದ ವಿಷಕಾರಿ ಹೊಗೆಗೆ ತೀವ್ರವಾಗಿ ಒಡ್ಡಿಕೊಂಡಿದ್ದಾರೆ ಎಂದು ಫೈನ್‌ಫೇಸ್ ತಿಳಿಸಿದ್ದಾರೆ.

ನದಿಯಲ್ಲಿ ಹಲವು ಮೃತದೇಹಗಳು ತೇಲುತ್ತಿರುವುದು ಕಂಡುಬಂದಿದ್ದು, ಇನ್ನೂ ಕೆಲವರು ನಾಪತ್ತೆಯಾಗಿದ್ದಾರೆ ಎಂದು ಅವರು ಹೇಳಿದ್ದಾರೆ.

ಈ ದುರಂತವು ತೈಲ ಸಂಪತ್ತಿನಿಂದ ಕೂಡಿರುವ ನೈಜರ್ ಡೆಲ್ಟಾ ಪ್ರದೇಶದಲ್ಲಿ ಅಕ್ರಮ ತೈಲ ಕಳ್ಳತನ ಮತ್ತು ಅಕ್ರಮ ತೈಲ ಸಂಗ್ರಹಣೆಯಿಂದ ಉಂಟಾಗುತ್ತಿರುವ ಅಪಾಯಗಳನ್ನು ಮತ್ತೊಮ್ಮೆ ಎತ್ತಿ ತೋರಿಸಿದೆ.

ರಿವರ್ಸ್ ರಾಜ್ಯ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಚ್ಚಾ ತೈಲ ಕಳ್ಳತನ, ಅಕ್ರಮ ಸಂಸ್ಕರಣೆ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ಅಕ್ರಮ ಸಾಗಾಟದ ವಿರುದ್ಧ ಭದ್ರತಾ ಪಡೆಗಳು ನಿರಂತರ ಕಾರ್ಯಾಚರಣೆ ನಡೆಸುತ್ತಿವೆ.

ಏಪ್ರಿಲ್‌ನಲ್ಲಿ ನೈಜೀರಿಯಾ ಸೇನೆ ರಿವರ್ಸ್, ಡೆಲ್ಟಾ ಮತ್ತು ಅಕ್ವಾ ಇಬೋಮ್ ರಾಜ್ಯಗಳಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ 10 ಅಕ್ರಮ ತೈಲ ಸಂಸ್ಕರಣಾ ಘಟಕಗಳನ್ನು ಧ್ವಂಸಗೊಳಿಸಿ, ಒಂಬತ್ತು ಶಂಕಿತ ತೈಲ ಕಳ್ಳರನ್ನು ಬಂಧಿಸಿತ್ತು. ಈ ವೇಳೆ 1.30 ಲಕ್ಷ ಲೀಟರ್‌ಗೂ ಹೆಚ್ಚು ಕಳವು ಮಾಡಲಾದ ಕಚ್ಚಾ ತೈಲ ಹಾಗೂ 26,000 ಲೀಟರ್‌ಗೂ ಹೆಚ್ಚು ಆಟೋಮೋಟಿವ್ ಗ್ಯಾಸ್ ಆಯಿಲ್ ವಶಪಡಿಸಿಕೊಂಡಿರುವುದಾಗಿ ಸೇನೆ ತಿಳಿಸಿತ್ತು.

ಇತ್ತೀಚೆಗೆ, ಆಗಸ್ಟ್ 28ರಂದು ನೈಜೀರಿಯಾ ನೌಕಾಪಡೆ ರಿವರ್ಸ್ ರಾಜ್ಯದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಎರಡು ಅಕ್ರಮ ತೈಲ ಸಂಸ್ಕರಣಾ ಘಟಕಗಳನ್ನು ಧ್ವಂಸಗೊಳಿಸಿ, ಸುಮಾರು 34,000 ಲೀಟರ್ ಅಕ್ರಮವಾಗಿ ಸಂಸ್ಕರಿಸಲಾಗಿದ್ದ ಆಟೋಮೋಟಿವ್ ಗ್ಯಾಸ್ ಆಯಿಲ್ ವಶಪಡಿಸಿಕೊಂಡಿರುವುದಾಗಿ ತಿಳಿಸಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular