ಮೈಸೂರು: ಮೈಸೂರಿನಲ್ಲಿ ಮತ್ತೊಂದು ಗೋಲ್ಡ್ ಸ್ಕ್ಯಾಮ್(ಚಿನ್ನ ವಂಚನೆ) ಪ್ರಕರಣ ಪತ್ತೆಯಾಗಿದೆ. ಚಿನ್ನತಂಬಿ ಚಿನ್ನ ವಂಚನೆ ಹಗರಣದ ಬೆನ್ನಲ್ಲೇ ಮತ್ತೊಂದು ಕೇಸ್ ಪತ್ತೆಯಾಗಿದೆ.
ಚಿನ್ನ ಕೊಡುವುದಾಗಿ ಮಾಸಿಕ ಕಂತು ಕಟ್ಟಿಸಿಕೊಂಡು ಜನರಿಗೆ ವಂಚನೆ ಮಾಡಲಾಗಿದೆ. ಮೋಹನ್ ಲಾಲ್ ಎಂಬಾತ ನಿಂದ ನೂರಾರು ಗ್ರಾಹಕರಿಗೆ ಮೋಸ ಮಾಡಲಾಗಿದೆ. 80ಕ್ಕೂ ಹೆಚ್ಚು ಗ್ರಾಹಕರು ಚಿನ್ನದ ಆಸೆಗೆ ಹಣ ಕಟ್ಟಿ ಕಳೆದುಕೊಂಡಿದ್ದಾರೆ. ಮೈಸೂರಿನ ವಿವೇಕಾನಂದ ವೃತ್ತದಲ್ಲಿರುವ ಮೋಹನ್ ಜ್ಯುವೆಲರಿ ಶಾಪ್ ನಲ್ಲಿ ವಂಚನೆ ನಡೆದಿದೆ.
ಎರಡು ಆವೃತ್ತಿಯಲ್ಲಿ ಹಣ ಕಟ್ಟಿಸಿಕೊಂಡು ಚಿನ್ನ ನೀಡಿ ನಂಬಿಕೆ ಸಂಪಾದನೆ ಮಾಡಿದ್ದ ಮೋಹನ್ ಲಾಲ್ ಬಳಿ ಈ ಬಾರಿ ಚಿನ್ನದಾಸೆಗೆ ಗ್ರಾಹಕರು ಮತ್ತಷ್ಟು ಹಣ ಹೂಡಿಕೆ ಮಾಡಿದ್ದರು. ಕಳೆದ ಒಂದು ವಾರದಿಂದ ಜ್ಯುವೆಲರಿ ಶಾಪ್ ಬಂದ್ ಮಾಡಿ ಮನೆ ಖಾಲಿ ಮಾಡಿದ್ದಾರೆ ಎನ್ನಲಾಗಿದೆ.
ಕುವೆಂಪು ನಗರ ಠಾಣೆಯಲ್ಲಿ ಹಲವರಿಂದ ವಂಚನೆ ದೂರು ದಾಖಲಾಗಿದೆ. ನಮ್ಮ ಹಣ ವಾಪಸ್ ಕೊಡಿಸಿ ಎಂದು ಪೊಲೀಸರ ಬಳಿ ವಂಚನೆಗೊಳಗಾದವರು ಮನವಿ ಮಾಡಿದ್ದಾರೆ. ಸದ್ಯ ಜ್ಯುವೆಲರಿ ಮಾಲೀಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

