ಮೈಸೂರು: ಮೈಸೂರು ಅರಮನೆ ಬಳಿ ಸಂಭವಿಸಿದ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ ಪರಿಹಾರ ಘೋಷಿಸಿದ್ದಾರೆ.
ಡಿ.25 ರಂದು ಅರಮನೆ ಮುಂಭಾಗ ಹೀಲಿಯಂ ಗ್ಯಾಸ್ ಬ್ಲಾಸ್ಟ್ ಆದ ಪರಿಣಾಮ ಮೂವರು ಮೃತಪಟ್ಟಿದ್ದರು. ಈ ಸ್ಪೋಟದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ತಲಾ 5 ಲಕ್ಷ ರೂ ಪರಿಹಾರ ಪರಿಹಾರ ಘೋಷಿಸಿದ್ದಾರೆ.
ಮೈಸೂರಿನ ಅಂಬಾವಿಲಾಸ ಅರಮನೆಯ ಎದುರು ಜಯ ಮಾರ್ಯಾಂಡ ದ್ವಾರದ ಬಳಿ ಡಿ. 25 ರಂದು ರಾತ್ರಿ ಬಲೂನ್ ಗೆ ಹೀಲಿಯಂ ತುಂಬುವ ಸಿಲಿಂಡರ್ ಸ್ಫೋಟ ದುರಂತದಲ್ಲಿ ಮೂವರು ಮೃತಪಟ್ಟಿದ್ದರು.
ನಂಜನಗೂಡಿನ ಚಾಮಲಾಪುರ ಬೀದಿ ನಿವಾಸಿ ಮಂಜುಳಾ(28), ಬೆಂಗಳೂರಿನ ಬ್ಯಾಡರಹಳ್ಳಿ ಲಕ್ಷ್ಮಿ(41) ಉತ್ತರ ಪ್ರದೇಶದ ಜಿಲ್ಲೆಯ ತೋಫಿಯಾ ಗ್ರಾಮದ ಸಲೀಂ(40) ಅರಮನೆ ಸಮೀಪ ಸೈಕಲ್ ನಲ್ಲಿ ಹೀಲಿಯಂ ಬಲೂನ್ ಮಾರುತಿದ್ದಾಗ ಸ್ಪೋಟ ಸಂಭವಿಸಿ ಮೃತಪಟ್ಟಿದ್ದರು. ಈ ಪ್ರಕರಣದ ತನಿಖೆಯನ್ನು ಎನ್ ಐ ಎ ನಡೆಸುತ್ತಿತ್ತು.
ಹುಬ್ಬಳ್ಳಿ ಮರ್ಯಾದಾ ಹತ್ಯೆ ಬಗ್ಗೆ ಸಿಎಂ ಪ್ರತಿಕ್ರಿಯೆ
ಹುಬ್ಬಳ್ಳಿ ತಾಲ್ಲೂಕಿನ ಇನಾಂ ವೀರಾಪುರದ ಮಾನ್ಯ ಎಂಬ ಯುವತಿಯ ಮರ್ಯಾದಾಗೇಡು ಹತ್ಯೆಗೆ ಸಂಬಂಧಿಸಿದಂತೆ ಪ್ರಕರಣದ ತ್ವರಿತ ವಿಚಾರಣೆ ನಡೆದು, ಸಂತ್ರಸ್ತರಿಗೆ ನ್ಯಾಯ ದೊರಕಿಸಿಕೊಡುವುದು ನಮ್ಮ ಪ್ರಮುಖ ಆದ್ಯತೆ. ಈ ಹಿನ್ನೆಲೆಯಲ್ಲಿ ತ್ವರಿತಗತಿ ನ್ಯಾಯಾಲಯ ರಚನೆಗೆ ಸರ್ಕಾರ ಕ್ರಮ ಕೈಗೊಳ್ಳಲಿದೆ.
ಇಲ್ಲಿ ದಲಿತರ ಮೇಲಿನ ದೌರ್ಜನ್ಯ ಹಾಗೂ ಕೊಲೆ ಪ್ರಕರಣ ದಾಖಲಾಗಿದೆ. ಇದು ಅಟ್ರಾಸಿಟಿ ಪ್ರಕರಣವಾಗಿರುವುದರಿಂದ 60 ದಿನಗಳ ಒಳಗಾಗಿ ದೋಷರೋಪ ಪಟ್ಟಿ ಸಲ್ಲಿಸಬೇಕಾಗಿದೆ. ಹೀಗಾಗಿ ಖಾಸಗಿ ಪ್ರಾಸಿಕ್ಯೂಟರ್ರನ್ನು ನೇಮಕ ಮಾಡಿಕೊಳ್ಳಲು ಕ್ರಮ ವಹಿಸಲಾಗಿದೆ.
ಹೆಣ್ಣುಮಗಳೊಬ್ಬಳ ನಿಲುವಿಗೆ ವಿರುದ್ಧವಾಗಿ ಮದುವೆಗೆ ಬಲವಂತಪಡಿಸುವುದು ಅಥವಾ ಮದುವೆ ನಿರಾಕರಿಸುವುದು, ಜಾತಿಯಾಧಾರಿತ ಹಿಂಸೆ -ಹಲ್ಲೆ, ಮರ್ಯಾದಾಗೇಡು ಹತ್ಯೆಯಂತಹ ಘಟನೆಗಳು ಇಡೀ ಮಾನವ ಸಮಾಜ ತಲೆತಗ್ಗಿಸುವಂತಹ ಹೀನ ಕೃತ್ಯಗಳು. ಯಾವುದೇ ಕಾರಣಕ್ಕೂ ನಮ್ಮ ಸರ್ಕಾರ ಇದನ್ನು ಸಹಿಸುವುದಿಲ್ಲ. ಮುಂದೆ ಇಂತಹ ಘಟನೆಗಳಿಗೆ ಕಡಿವಾಣ ಹಾಕುವ ಹಾಗೂ ಜನರಲ್ಲಿ ಕಾನೂನಿನ ಬಗ್ಗೆ ಅರಿವು ಮೂಡಿಸುವಉದ್ದೇಶದಿಂದ ವಿಶೇಷ ಕಾನೂನು ರಚನೆ ಮಾಡಲಾಗುವುದು. ಈ ಬಗ್ಗೆ ವಿಧಾನ ಮಂಡಲದ ಮುಂದಿನ ಅಧಿವೇಶನದಲ್ಲಿ ಚರ್ಚಿಸಿ, ಸೂಕ್ತ ನಿರ್ಣಯ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ.

