HomeLatest Newsಭಿಕ್ಷೆ ಬೇಡಲ್ಲ, ದುಡಿದು ತಿನ್ನುತ್ತೇನೆ: ಮುಂಬೈ ಅಜ್ಜಿಯ ಸ್ವಾಭಿಮಾನದ ಬದುಕು ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್

ಭಿಕ್ಷೆ ಬೇಡಲ್ಲ, ದುಡಿದು ತಿನ್ನುತ್ತೇನೆ: ಮುಂಬೈ ಅಜ್ಜಿಯ ಸ್ವಾಭಿಮಾನದ ಬದುಕು ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್

ಮುಂಬೈನ ಜನನಿಬಿಡ ಲೋಕಲ್ ಟ್ರೈನ್‌ನಲ್ಲಿ ದಿನನಿತ್ಯ ಸಾವಿರಾರು ಜನರು ಪ್ರಯಾಣಿಸುತ್ತಾರೆ. ಆದರೆ ಅವರ ನಡುವೆ 89 ವರ್ಷದ ವೃದ್ಧೆಯೊಬ್ಬರು ಕೈಯಲ್ಲಿ ಹಿಡಿದಿರುವ ಮಣಿಗಳ ಸರ ಮತ್ತು ಬಳೆಗಳು ಕೇವಲ ವ್ಯಾಪಾರವಲ್ಲ, ಅದು ಅವರ ಬದುಕಿನ ಹೋರಾಟ. ನಲಸೋಪಾರ ನಿವಾಸಿಯಾದ ಕಮಲಾಬೆನ್ ಮೆಹ್ತಾ ಎಂಬುವವರ ಈ ಜೀವನಗಾಥೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ಪ್ರತಿಯೊಬ್ಬರ ಕಣ್ಣಂಚನ್ನು ಒದ್ದೆ ಮಾಡುತ್ತಿದೆ.

ವಯಸ್ಸಾದ ಮೇಲೆ ಮಕ್ಕಳು, ಮೊಮ್ಮಕ್ಕಳ ಜೊತೆ ಆರಾಮವಾಗಿ ಇರಬೇಕಾದ ವಯಸ್ಸಿನಲ್ಲಿ ಈ ಅಜ್ಜಿ ಬಿಸಿಲಿನಲ್ಲಿ ರೈಲು ಹತ್ತಿ ವ್ಯಾಪಾರ ಮಾಡುತ್ತಾರೆ. ಇತ್ತೀಚೆಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರೊಬ್ಬರು ಈ ಅಜ್ಜಿಯನ್ನು ಮಾತನಾಡಿಸಿದಾಗ ಹೊರಬಿದ್ದ ಸತ್ಯ ಎಲ್ಲರನ್ನೂ ದಂಗಾಗಿಸಿದೆ. “ನಾನು ಈ ವಯಸ್ಸಿನಲ್ಲೂ ಕೆಲಸ ಮಾಡುವುದು ಯಾಕೆಂದರೆ, ನಾನು ನನ್ನ ಕುಟುಂಬದ ಜೊತೆ ಇರಲು ಅವರಿಗೆ ಹಣ ನೀಡಬೇಕಿದೆ” ಎಂದು ಅಜ್ಜಿ ಹೇಳಿದ್ದಾರೆ. ಅಂದರೆ, ತನ್ನವರ ಜೊತೆ ತನಗೆ ಆಶ್ರಯ ಸಿಗಬೇಕೆಂದರೆ ಆಕೆ ದಿನವಿಡೀ ಕಷ್ಟಪಟ್ಟು ದುಡಿದು ಹಣ ಕೊಡಬೇಕಾದ ಪರಿಸ್ಥಿತಿ ಇದೆ.

ಕಮಲಾಬೆನ್ ಅವರ ಈ ಪರಿಸ್ಥಿತಿಯನ್ನು ಕಂಡು ಅನೇಕರು ಮರುಗುತ್ತಿದ್ದಾರೆ. ಮದುವೆಯಾದ ಕೇವಲ ಒಂದು ತಿಂಗಳಲ್ಲೇ ಪತಿಯನ್ನು ಕಳೆದುಕೊಂಡ ಕಮಲಾಬೆನ್, ಕಳೆದ ಆರು ದಶಕಗಳಿಂದ ಇದೇ ರೀತಿ ರೈಲಿನಲ್ಲಿ ವ್ಯಾಪಾರ ಮಾಡಿಕೊಂಡು ಸ್ವಾಭಿಮಾನದ ಬದುಕು ನಡೆಸುತ್ತಿದ್ದಾರೆ. ವಿಶೇಷವೆಂದರೆ, ಮನೆಯವರು ಸಮಾಜದಲ್ಲಿ ಅವಮಾನ ಎದುರಿಸಬಾರದು ಎಂಬ ಕಾರಣಕ್ಕೆ ಅವರು ತಮ್ಮ ಮನೆಯ ವಿಳಾಸವನ್ನು ಯಾರಿಗೂ ಬಿಟ್ಟುಕೊಡುತ್ತಿಲ್ಲ. ತನ್ನನ್ನು ಭಾರ ಎಂದು ಭಾವಿಸುವವರ ನಡುವೆಯೂ ಅಜ್ಜಿ ಯಾರಿಗೂ ಕೈ ಚಾಚದೆ ದುಡಿದು ತಿನ್ನುತ್ತಿರುವುದು ಅವರ ಧೈರ್ಯಕ್ಕೆ ಸಾಕ್ಷಿಯಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ವಿಡಿಯೋ ವೈರಲ್ ಆದ ಬೆನ್ನಲ್ಲೇ ಸಾವಿರಾರು ಜನರು ಅಜ್ಜಿಯ ಸ್ಫೂರ್ತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. “ಯುವಕರಿಗೇ ಮುಂಬೈ ಲೋಕಲ್ ಟ್ರೈನ್ ಪ್ರಯಾಣ ಕಷ್ಟ, ಅಂತಹದ್ದರಲ್ಲಿ 89 ವರ್ಷದ ಈ ಮಾತೆ ಅಷ್ಟು ಎತ್ತರದ ರೈಲು ಹತ್ತಿ ವ್ಯಾಪಾರ ಮಾಡುತ್ತಿರುವುದು ಅದ್ಭುತ” ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ಅಜ್ಜಿಯ ಬಳಿ ಇರುವ ಒಂದೊಂದು ಬಳೆಯ ಬೆಲೆ ಕೇವಲ 40 ರೂಪಾಯಿ ಇರಬಹುದು, ಆದರೆ ಆಕೆಯ ಸ್ವಾಭಿಮಾನ ಮತ್ತು ಕಠಿಣ ಪರಿಶ್ರಮ ಅಳೆಯಲಾರದಷ್ಟು ದೊಡ್ಡದು.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

Most Popular