HomeKarnatakaಕೇಂದ್ರ ಬಜೆಟ್ 2026: ಹೈಸ್ಪೀಡ್ ರೈಲು ಕಾರಿಡಾರ್ ಕರ್ನಾಟಕಕ್ಕೆ ಲಾಭವೇ ಇಲ್ಲ!

ಕೇಂದ್ರ ಬಜೆಟ್ 2026: ಹೈಸ್ಪೀಡ್ ರೈಲು ಕಾರಿಡಾರ್ ಕರ್ನಾಟಕಕ್ಕೆ ಲಾಭವೇ ಇಲ್ಲ!

ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ 2026-27ನೇ ಸಾಲಿನ ಬಜೆಟ್‌ ಮಂಡನೆ ಮಾಡಿದ್ದಾರೆ. ಬಜೆಟ್‌ ಭಾಷಣದಲ್ಲಿ 7 ಹೈಸ್ಪೀಡ್ ರೈಲು ಕಾರಿಡಾರ್‌ಗಳನ್ನು ಘೋಷಣೆ ಮಾಡಲಾಗಿದೆ.

ಈ 7 ಕಾರಿಡಾರ್‌ಗಳಲ್ಲಿ ಹೈದರಾಬಾದ್-ಬೆಂಗಳೂರು, ಚೆನ್ನೈ-ಬೆಂಗಳೂರು ಸಹ ಸೇರಿವೆ. ಈ ಮೂಲಕ ಕರ್ನಾಟಕ ರಾಜ್ಯಕ್ಕೆ ಬಜೆಟ್‌ನಲ್ಲಿ  ಕೊಡುಗೆ ನೀಡಲಾಗಿದೆ. ಆದರೆ ಈ ಯೋಜನೆ ನಿಜಕ್ಕೂ ಲಾಭತರಲಿದೆಯೇ?.

ಬಜೆಟ್ ಕುರಿತು ಪ್ರತಿಕ್ರಿಯೆ ನೀಡಿರುವ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ, “ಹೈ-ಸ್ಪೀಡ್ ರೈಲು ಪ್ರಾದೇಶಿಕ ಆರ್ಥಿಕತೆಯನ್ನು ಅಭಿವೃದ್ಧಿ ಮಾಡಬೇಕಿದೆ. ಆದರೆ ಅದನ್ನು ದುರ್ಬಲಗೊಳಿಸಬಾರದು” ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

“ಪ್ರಸ್ತಾವಿತ ಹೈದರಾಬಾದ್-ಬೆಂಗಳೂರು ಮತ್ತು ಚೆನ್ನೈ-ಬೆಂಗಳೂರು ರೈಲು ಕಾರಿಡಾರ್‌ಗಳು ತೆಲಂಗಾಣ, ಆಂಧ್ರ ಪ್ರದೇಶ ಮತ್ತು ತಮಿಳುನಾಡು ರಾಜ್ಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಸಹಾಯಕವಾಗಲಿದೆ. ಅವರಿಗೆ ಬೆಂಗಳೂರು ನಗರಕ್ಕೆ ಸಂಪರ್ಕ ಸುಲಭವಾಗಲಿದೆ” ಎಂದು ಹೇಳಿದ್ದಾರೆ.

“ನಮ್ಮ ನಿಜವಾದ ಅಗತ್ಯ ಬೆಂಗಳೂರು-ಮುಂಬೈ ಅಥವಾ ಬೆಂಗಳೂರು-ಪುಣೆ ಹೈ-ಸ್ಪೀಡ್ ಕಾರಿಡಾರ್ ಆಗಿತ್ತು. ಇದು ತಂತ್ರಜ್ಞಾನ, ಹಣಕಾಸು, ಉತ್ಪಾದನೆ ಮತ್ತು ಜಾಗತಿಕ ವ್ಯಾಪಾರಕ್ಕೆ ಕರ್ನಾಟಕ ಮತ್ತು ರಾಷ್ಟ್ರೀಯ ಆರ್ಥಿಕತೆಗೆ ನಿಜವಾಗಿ ಪ್ರಯೋಜನವನ್ನು ನೀಡುತ್ತಿತ್ತು” ಎಂದು ಸಿದ್ದರಾಮಯ್ಯ ತಿಳಿಸಿದರು.

“ಈ ಪ್ರಸ್ತಾವನೆಯಡಿಯಲ್ಲಿ ಇತರ ರಾಜ್ಯಗಳ ಜನರು ಬೆಂಗಳೂರಿನ ಅವಕಾಶಗಳನ್ನು ಸುಲಭವಾಗಿ ಬಳಸಿಕೊಳ್ಳಬಹುದು. ಆದರೆ ಕರ್ನಾಟಕದ ಒಳಗಿನ ಜನರು ಹೊರಗಡೆ ವಿಸ್ತರಿಸಲು ಇರುವ ಅವಕಾಶಗಳು ಅಷ್ಟಾಗಿ ಬಲಗೊಂಡಿಲ್ಲ. ಮೂಲಸೌಕರ್ಯವು ಸಮತೋಲಿತ ಬೆಳವಣಿಗೆ ಮತ್ತು ಹಂಚಿಕೆಯ ಸಮೃದ್ಧಿಯನ್ನು ಸೃಷ್ಟಿಸಬೇಕು. ಇಲ್ಲದಿದ್ದರೆ, ಅದು ಕೆಲವು ರಾಜ್ಯಗಳಿಗೆ ಅನುಕೂಲ ಮಾಡಿಕೊಟ್ಟು ಇತರರ ಮೇಲೆ ಅನ್ಯಾಯದ ಹೊರೆಯನ್ನು ಹೊರಿಸುತ್ತದೆ” ಎಂದರು.

ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಸಹ ಪ್ರಸ್ತಾವಿತ ಯೋಜನೆ ಬಗ್ಗೆ ಮಾತನಾಡಿದ್ದು, “ಬೆಂಗಳೂರು–ಹೈದರಾಬಾದ್, ಬೆಂಗಳೂರು–ಚೆನ್ನೈ ಹೈಸ್ಪೀಡ್ ರೈಲು ಸ್ವಾಗತಾರ್ಹವಾದರೂ, ಕರ್ನಾಟಕದೊಳಗೆ 100 ಕಿಮೀ ಕೂಡ ಓಡದ ಮಾರ್ಗಗಳಿಂದ ರಾಜ್ಯಕ್ಕೆ ಏನು ಲಾಭ?. ಬದಲಿಗೆ ಬೆಂಗಳೂರು-ಪುಣೆ ಹೈಸ್ಪೀಡ್ ರೈಲು ಕಾರಿಡಾರ್ ಅಗತ್ಯವಾಗಿತ್ತು. ಇದಕ್ಕಾಗಿ ಕರ್ನಾಟಕ-ಮಹಾರಾಷ್ಟ್ರ ಸಂಸದರು ಪಕ್ಷಾತೀತವಾಗಿ ಧ್ವನಿ ಎತ್ತಬೇಕು” ಎಂದು ಹೇಳಿದ್ದಾರೆ.

7 ಹೈಸ್ಪೀಡ್ ಕಾರಿಡಾರ್‌ಗಳು

  • ಮುಂಬೈ-ಪುಣೆ
  • ಪುಣೆ-ಹೈದರಾಬಾದ್
  • ಹೈದರಾಬಾದ್-ಬೆಂಗಳೂರು
  • ಹೈದರಾಬಾದ್-ಚೆನ್ನೈ
  • ಚೆನ್ನೈ-ಬೆಂಗಳೂರು
  • ದೆಹಲಿ-ವಾರಣಾಸಿ
  • ವಾರಣಾಸಿ-ಸಿಲಿಗುರಿ

ಬೆಂಗಳೂರು ಭಾರತದ ಟೆಕ್ ರಾಜಧಾನಿ. ಬೆಂಗಳೂರು ಮತ್ತು ವಾಣಿಜ್ಯ ನಗರಿ ಮುಂಬೈ ನಡುವಿನ ರಸ್ತೆ ಮಾರ್ಗದ ದೂರ ಸುಮಾರು 985 ಕಿ.ಮೀ ಆಗಿದ್ದು, ರಾಷ್ಟ್ರೀಯ ಹೆದ್ದಾರಿ-48ರ (NH-48) ಮೂಲಕ ಪ್ರಯಾಣಿಸಲು 14-18 ಗಂಟೆಗಳ ಸಮಯ ಬೇಕು.

ರೈಲು ಮಾರ್ಗದ ಮೂಲಕ ಉದ್ಯಾನ್ ಎಕ್ಸ್‌ಪ್ರೆಸ್ ಪ್ರಸ್ತುತ ಏಕೈಕ ದೈನಂದಿನ ನೇರ ರೈಲಾಗಿದ್ದು, ಸರಿಸುಮಾರು 1,136 ಕಿ.ಮೀ ದೂರವನ್ನು 31-33 ನಿಲ್ದಾಣಗಳೊಂದಿಗೆ 23 ಗಂಟೆ 35 ನಿಮಿಷಗಳಲ್ಲಿ ಕ್ರಮಿಸುತ್ತದೆ.

ಉಭಯ ನಗರದ ನಡುವಿನ ಸಂಚಾರದ ಅವಧಿ ಕಡಿಮೆ ಮಾಡಲು ಸೂಪರ್‌ ಫಾಸ್ಟ್ ರೈಲು ಪರಿಚಯಿಸುವ ಪ್ರಸ್ತಾವನೆ ಇನ್ನು ಜಾರಿಯಾಗಿಲ್ಲ. ಈ ನಡುವೆ ಬಜೆಟ್‌ನಲ್ಲಿ ಹೈ ಸ್ಪೀಡ್ ರೈಲು ಕಾರಿಡಾರ್ ಘೋಷಣೆ ಮಾಡಲಾಗಿದೆ.

ನ್ಯಾಷನಲ್ ಹೈ-ಸ್ಪೀಡ್ ರೈಲ್ ಕಾರ್ಪೊರೇಷನ್ ಲಿಮಿಟೆಡ್ ಈ ಹಿಂದೆ ಚೆನ್ನೈ, ಬೆಂಗಳೂರು ಮತ್ತು ಮೈಸೂರನ್ನು ಸಂಪರ್ಕಿಸಲು 435 ಕಿ.ಮೀ ಉದ್ದದ ಚೆನ್ನೈ-ಬೆಂಗಳೂರು-ಮೈಸೂರು ಹೈ-ಸ್ಪೀಡ್ ರೈಲು ಯೋಜನೆಯ ಪ್ರಸ್ತಾವನೆ ಮಾಡಿತ್ತು. ಆದರೆ ಕೇಂದ್ರ ಬಜೆಟ್‌ನಲ್ಲಿ ಇದರ ಪ್ರಸ್ತಾಪವೇ ಇಲ್ಲವಾಗಿದೆ.

ಸಂಸದ ತೇಜಸ್ವಿ ಸೂರ್ಯ ಸೇರಿದಂತೆ ಅನೇಕರು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಭೇಟಿಯಾಗಿ ಬೆಂಗಳೂರು-ಮುಂಬೈ ನಡುವೆ ಹುಬ್ಬಳ್ಳಿ, ಬೆಳಗಾವಿ ಮೂಲಕ ಹೈಸ್ಪೀಡ್ ರೈಲು ಓಡಿಸಬೇಕು ಎಂದು ಮನವಿ ಸಲ್ಲಿಸಿದ್ದರು. ಸಚಿವರು ಒಪ್ಪಿಗೆ ನೀಡಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದರು. ಆದರೆ ಈ ಕುರಿತು ಯಾವುದೇ ಘೋಷಣೆ ಮಾಡಿಲ್ಲ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

Most Popular