ಬಾಲಿವುಡ್ನ ಸدا ಹಸಿರು ನಟ ಅನಿಲ್ ಕಪೂರ್ ತಮ್ಮ ದೃಢವಾದ ಫಿಟ್ನೆಸ್ ಹಾಗೂ ನಟನೆಯಿಂದ ಇಂದಿಗೂ ಯುವ ನಟರಿಗೆ ಸ್ಪೂರ್ತಿಯಾಗಿದ್ದಾರೆ. 1987ರಲ್ಲಿ ಬಿಡುಗಡೆಯಾಗಿ ಭಾರತೀಯ ಚಿತ್ರರಂಗದಲ್ಲೇ ಮೈಲಿಗಲ್ಲು ಸ್ಥಾಪಿಸಿದ ಕಲ್ಟ್ ಕ್ಲಾಸಿಕ್ ಸಿನಿಮಾ ‘ ಇಂಡಿಯಾ’ ಚಿತ್ರ ತೆರೆಕಂಡು ಬರೋಬ್ಬರಿ 39 ವರ್ಷಗಳು ಕಳೆದಿವೆ. ಇದೀಗ ವಿಶೇಷ ಟೆಲಿವಿಷನ್ ಶೋ ಒಂದರಲ್ಲಿ ಅನಿಲ್ ಕಪೂರ್ ತಮ್ಮ ಹಳೆಯ ‘ಮಿಸ್ಟರ್ ಇಂಡಿಯಾ‘ ಗೆಟಪ್ ಅನ್ನು ಮರುಸೃಷ್ಟಿಸುವ ಮೂಲಕ ಅಭಿಮಾನಿಗಳನ್ನು ನಿಮ್ಮಿಷಗಳ ಕಾಲ ಭೂತಕಾಲಕ್ಕೆ ಕೊಂಡೊಯ್ದಿದ್ದಾರೆ.
ಅಚ್ಚರಿಯ ಸಂಗತಿಯೆಂದರೆ, ಅನಿಲ್ ಕಪೂರ್ ಅವರು 39 ವರ್ಷಗಳ ಹಿಂದೆ ಸಿನಿಮಾದಲ್ಲಿ ಧರಿಸಿದ್ದ ಅಸಲಿ ಶರ್ಟ್, ಪ್ಯಾಂಟ್ ಹಾಗೂ ಜಾಕೆಟ್ ಅನ್ನು ಇಂದಿಗೂ ಅತ್ಯಂತ ಜೋಪಾನವಾಗಿ ಕಾಪಾಡಿಕೊಂಡು ಬಂದಿದ್ದಾರೆ. ವಿಶೇಷ ಅತಿಥಿಯಾಗಿ ‘ಇಂಡಿಯಾ ಕೆ ಟಾಪ್ 1%’ ಶೋನಲ್ಲಿ ಭಾಗವಹಿಸಿದ್ದ ಅವರು, ಅದೇ ಹಳೆಯ ಉಡುಗೆಯನ್ನು ಧರಿಸಿ ಎಲ್ಲರನ್ನು ಅಚ್ಚರಿಗೊಳಿಸಿದರು.
ಈ ಕುರಿತು ಮಾತನಾಡಿದ ಅನಿಲ್ ಕಪೂರ್, “ಆ ಶರ್ಟ್, ಪ್ಯಾಂಟ್ ಮತ್ತು ಜಾಕೆಟ್ ಇಂದಿಗೂ ನನಗೆ ಸರಿಯಾಗಿ ಫಿಟ್ ಆಗುತ್ತದೆ. ಸುಮಾರು 39 ವರ್ಷಗಳ ಬಳಿಕವೂ ಎಲ್ಲವೂ ನನಗೆ ಆರಾಮವಾಗಿ ಒಗ್ಗಿಕೊಳ್ಳುತ್ತಿರುವುದು ಖುಷಿ ತಂದಿದೆ. ಶೋನವರು ‘ಮಿ. ಇಂಡಿಯಾ’ ಕಾಸ್ಟ್ಯೂಮ್ ಸಿಕ್ಕರೆ ಚೆನ್ನಾಗಿತ್ತು ಎಂದಾಗ, ನಾನು ಅದನ್ನು ಸಂರಕ್ಷಿಸಿಟ್ಟಿರುವುದಾಗಿ ತಿಳಿಸಿದೆ” ಎಂದಿದ್ದಾರೆ. ಅಲ್ಲದೆ, ಸಿನಿಮಾದಲ್ಲಿ ತಾನು ಧರಿಸಿದ್ದ ಆ ಪ್ರಸಿದ್ಧ ಜಾಕೆಟ್ ಅನ್ನು ಮುಂಬೈನ ಪ್ರಸಿದ್ಧ ‘ಚೋರ್ ಬಜಾರ್’ (Chor Bazaar) ನಿಂದ ಖರೀದಿಸಿದ್ದಾಗಿ ಹಳೆಯ ನೆನಪುಗಳನ್ನು ಮೆಲಕು ಹಾಕಿದ್ದಾರೆ.
ಶೇಖರ್ ಕಪೂರ್ ನಿರ್ದೇಶನದಲ್ಲಿ ಮೂಡಿಬಂದ ‘ಮಿ. ಇಂಡಿಯಾ’ ಚಿತ್ರದಲ್ಲಿ ಅನಿಲ್ ಕಪೂರ್ ಜೊತೆಗೆ ದಿವಂಗತ ನಟಿ ಶ್ರೀದೇವಿ ಹಾಗೂ ಖಳನಾಯಕನಾಗಿ ಅಮ್ರಿಶ್ ಪುರಿ ಅಭಿನಯಿಸಿದ್ದರು. ಸಿನಿಮಾದಲ್ಲಿ ಅಮ್ರಿಶ್ ಪುರಿ ಪಾತ್ರದ ‘ಮೊಗಂಬೋ ಖುಶ್ ಹುವಾ’ ಡೈಲಾಗ್ ಇಂದಿಗೂ ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿದೆ.

