ರವಿವಾರ ಬಂತೆಂದರೆ ಮಾಂಸಾಹಾರಿಗಳ ಮನೆಯಲ್ಲಿ ಮುದ್ದೆ ಮತ್ತು ಕೋಳಿ ಸಾರಿನದ್ದೇ ಕಾರುಬಾರು. ಅದರಲ್ಲೂ ಹಳ್ಳಿ ಶೈಲಿಯಲ್ಲಿ ಮಸಾಲೆ ಅರೆದು ಮಾಡಿದ ನಾಟಿ ಕೋಳಿ ಸಾರಿನ ರುಚಿಗೆ ಸಾಟಿಯೇ ಇಲ್ಲ. ಹೋಟೆಲ್‌ಗಳಲ್ಲಿ ಸಿಗುವ ಗ್ರೇವಿಗಳಿಗಿಂತ ಮನೆಯಲ್ಲೇ ಸಾಂಪ್ರದಾಯಿಕ ಶೈಲಿಯಲ್ಲಿ ಮಾಡುವ ಸಾರು ಆರೋಗ್ಯಕ್ಕೂ ಒಳ್ಳೆಯದು, ನಾಲಿಗೆಗೂ ಹಿತ. ಹಾಗಾದರೆ ಬಾಯಲ್ಲಿ ನೀರೂರಿಸುವ ಅಪ್ಪಟ ಹಳ್ಳಿ ಶೈಲಿಯ ನಾಟಿ ಕೋಳಿ ಸಾರನ್ನು ಸುಲಭವಾಗಿ ಹೇಗೆ ಮಾಡಬಹುದು ಎಂಬುದರ ಮಾಹಿತಿ ಇಲ್ಲಿದೆ.
ಬೇಕಾಗುವ ಮುಖ್ಯ ಸಾಮಗ್ರಿಗಳು
ಅರ್ಧ ಕೆಜಿ ನಾಟಿ ಕೋಳಿ ಮಾಂಸ, ಎರಡು ದೊಡ್ಡ ಈರುಳ್ಳಿ, ಎರಡು ಟೊಮೆಟೊ, ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್, ಹಸಿರು ಮೆಣಸಿನಕಾಯಿ ಹಾಗೂ ಕೊತ್ತಂಬರಿ ಸೊಪ್ಪು. ಮಸಾಲೆ ತಯಾರಿಸಲು ಒಣ ಮೆಣಸಿನಕಾಯಿ, ಧನಿಯಾ ಬೀಜ, ಜೀರಿಗೆ, ಕಾಳುಮೆಣಸು, ಚಕ್ಕೆ, ಲವಂಗ, ಗಸಗಸೆ ಮತ್ತು ಹಸಿ ತೆಂಗಿನಕಾಯಿ ತುರಿ ಅಗತ್ಯವಿರುತ್ತದೆ.
ಮಸಾಲೆ ಸಿದ್ಧಪಡಿಸುವ ಕ್ರಮ
ಮೊದಲು ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಬಿಸಿ ಮಾಡಿ ಒಣ ಮೆಣಸಿನಕಾಯಿ, ಧನಿಯಾ, ಜೀರಿಗೆ, ಕಾಳುಮೆಣಸು, ಚಕ್ಕೆ ಮತ್ತು ಲವಂಗವನ್ನು ಹದವಾಗಿ ಹುರಿದುಕೊಳ್ಳಬೇಕು. ಇವು ತಣ್ಣಗಾದ ನಂತರ ಹಸಿ ತೆಂಗಿನಕಾಯಿ ತುರಿ ಮತ್ತು ಸ್ವಲ್ಪ ನೀರು ಸೇರಿಸಿ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿ ಮಸಾಲೆ ಸಿದ್ಧವಾಗಿಟ್ಟುಕೊಳ್ಳಿ.
ಸಾರು ತಯಾರಿಸುವ ವಿಧಾನ
ಕುಕ್ಕರ್ ಅಥವಾ ದಪ್ಪ ತಳದ ಪಾತ್ರೆಗೆ ಎಣ್ಣೆ ಹಾಕಿ ಬಿಸಿಯಾದ ನಂತರ ಸಣ್ಣಗೆ ಹೆಚ್ಚಿದ ಈರುಳ್ಳಿ ಮತ್ತು ಹಸಿರು ಮೆಣಸಿನಕಾಯಿ ಹಾಕಿ ಚೆನ್ನಾಗಿ ಹುರಿಯಬೇಕು. ಈರುಳ್ಳಿ ಹೊಂಬಣ್ಣಕ್ಕೆ ತಿರುಗಿದಾಗ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಹಸಿ ವಾಸನೆ ಹೋಗುವವರೆಗೆ ಕೈಾಡಿಸಬೇಕು. ನಂತರ ತೊಳೆದು ಸ್ವಚ್ಛಗೊಳಿಸಿದ ನಾಟಿ ಕೋಳಿ ಮಾಂಸವನ್ನು ಹಾಕಿ, ಅದಕ್ಕೆ ಅರಿಶಿನ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಬೇಕು. ಮಾಂಸದಲ್ಲಿನ ನೀರೆಲ್ಲಾ ಬಿಟ್ಟುಕೊಂಡು ಡ್ರೈ ಆಗುವವರೆಗೆ ಐದರಿಂದ ಹತ್ತು ನಿಮಿಷ ಬೇಯಲು ಬಿಡಬೇಕು.
ಇದಾದ ಬಳಿಕ ಹೆಚ್ಚಿದ ಟೊಮೆಟೊ ಹಾಕಿ ಮೃದುವಾಗುವವರೆಗೆ ಹುರಿಯಿರಿ. ನಂತರ ಮೊದಲೇ ರುಬ್ಬಿಟ್ಟುಕೊಂಡ ಮಸಾಲೆಯನ್ನು ಮಾಂಸಕ್ಕೆ ಸೇರಿಸಿ ಚೆನ್ನಾಗಿ ಕೈಾಡಿಸಬೇಕು. ನಿಮಗೆ ಸಾರು ಎಷ್ಟು ಗಟ್ಟಿ ಬೇಕೋ ಅಷ್ಟು ನೀರನ್ನು ಸೇರಿಸಿ ಮಿಕ್ಸ್ ಮಾಡಿ. ನಾಟಿ ಕೋಳಿ ಬೇಯಲು ಬ್ರಾಯ್ಲರ್ ಕೋಳಿಗಿಂತ ಕೊಂಚ ಹೆಚ್ಚು ಸಮಯ ತೆಗೆದುಕೊಳ್ಳುವುದರಿಂದ ಕುಕ್ಕರ್‌ನಲ್ಲಿ ನಾಲ್ಕರಿಂದ ಐದು ಸೀಟಿ ಕೂಗಿಸುವುದು ಉತ್ತಮ. ಕೊನೆಯಲ್ಲಿ ಸಾರು ಚೆನ್ನಾಗಿ ಕುದಿ ಬಂದಾಗ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಉದುರಿಸಿದರೆ ಬಿಸಿ ಬಿಸಿ ನಾಟಿ ಕೋಳಿ ಸಾರು ಸವಿಯಲು ಸಿದ್ಧವಾಗುತ್ತದೆ. ಇದು ಬಿಸಿ ಮುದ್ದೆ, ಚಪಾತಿ ಅಥವಾ ದೋಸೆ ಜೊತೆ ಸವಿಯಲು ಅತ್ಯುತ್ತಮ ಕಾಂಬಿನೇಷನ್ ಆಗಿದೆ.

