ದೈಹಿಕ ಅಂಗವೈಕಲ್ಯ ಹೊಂದಿರುವ ಝೊಮ್ಯಾಟೊ (Zomato) ಡೆಲಿವರಿ ಬಾಯ್ ಒಬ್ಬರು, ಆರ್ಡರ್ ತಲುಪಿಸಲು ಮೆಟ್ಟಿಲುಗಳನ್ನು ಹತ್ತಿ ಗ್ರಾಹಕರ ಮನೆ ಬಾಗಿಲ ಬಳಿ ತಲುಪಿದಾಗ, ಗ್ರಾಹಕರು ಆ ಆರ್ಡರ್ ಅನ್ನು ರದ್ದುಗೊಳಿಸಿರುವ ಅಮಾನವೀಯ ಘಟನೆ ಬೆಳಿಕೆ ಬಂದಿದೆ. ಈ ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ದೈಹಿಕ ಅಂಗವೈಕಲ್ಯ ಹೊಂದಿರುವ ಝೊಮ್ಯಾಟೊ ಡೆಲಿವರಿ ಏಜೆಂಟ್ ಒಬ್ಬರು, ತಾವು ಗ್ರಾಹಕರ ಬಾಗಿಲ ಬಳಿ ತಲುಪಿದ ಕೂಡಲೇ ಅವರು ಆರ್ಡರ್ ರದ್ದುಗೊಳಿಸಿದರು ಎಂದು ಆರೋಪಿಸಿದ್ದಾರೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಆನ್‌ಲೈನ್‌ನಲ್ಲಿ ದೊಡ್ಡ ಚರ್ಚೆ ಹುಟ್ಟಿಕೊಂಡಿದೆ. ಮೆಟ್ಟಿಲು ಹತ್ತಲು ತಮಗೆ ಕಷ್ಟವಾಗುತ್ತದೆ ಎಂದು ಮೊದಲೇ ತಿಳಿಸಿದ್ದರೂ, ಅವರು ಕಷ್ಟಪಟ್ಟು ಎರಡನೇ ಮಹಡಿಯವರೆಗೆ ಹೋದರು. ಆದರೆ ಅಲ್ಲಿಗೆ ತಲುಪಿದಾಗ, ಆರ್ಡರ್ ರದ್ದುಗೊಂಡಿರುವುದು ಅವರಿಗೆ ತಿಳಿಯಿತು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, 26.1 ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ಪಡೆದಿದೆ. ನೆಟ್ಟಿಗರು ಗ್ರಾಹಕರ ಈ ವರ್ತನೆಯನ್ನು ‘ಸಂವೇದನಾಶೂನ್ಯ’ ಎಂದು ಟೀಕಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಝೊಮ್ಯಾಟೊ ಡೆಲಿವರಿ ಏಜೆಂಟ್, ತಾವು ಗ್ರಾಹಕರ ಬಾಗಿಲ ಬಳಿ ತಲುಪಿದಾಗ ಅವರು ಆರ್ಡರ್ ರದ್ದುಗೊಳಿಸಿದರು ಎಂದು ಆರೋಪಿಸಿದ್ದಾರೆ. ಲಿಫ್ಟ್ ಇಲ್ಲದ ಕಾರಣ ತಮಗೆ ಮೆಟ್ಟಿಲು ಹತ್ತಲು ಸಾಧ್ಯವಾಗುವುದಿಲ್ಲ ಎಂದು ಗ್ರಾಹಕರಿಗೆ ತಿಳಿಸಿದ್ದರೂ, ತಮಗೆ ಆರ್ಡರ್ ತಲುಪಿಸುವಂತೆ ಒತ್ತಾಯಿಸಲಾಯಿತು ಎಂದು ಡೆಲಿವರಿ ಏಜೆಂಟ್ ಹೇಳಿಕೊಂಡಿದ್ದಾರೆ. ಗ್ರಾಹಕರ ವರ್ತನೆಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
@handicapzomatorider ಎಂಬ ಇನ್‌ಸ್ಟಾಗ್ರಾಮ್ ಖಾತೆ ಹೊಂದಿರುವ ಈ ಡೆಲಿವರಿ ಏಜೆಂಟ್, ತಮ್ಮ ಅನುಭವವನ್ನು ವಿವರಿಸುವ ವಿಡಿಯೋವೊಂದನ್ನು ಹಂಚಿಕೊಂಡಾಗ ಈ ಘಟನೆ ಬೆಳಕಿಗೆ ಬಂದಿದೆ. ಆರ್ಡರ್ ತಲುಪಿಸಲು ಹೋಗುವ ಮುನ್ನವೇ ತಾವು ಗ್ರಾಹಕರಿಗೆ ಕರೆ ಮಾಡಿ, ತಮ್ಮ ಅಂಗವೈಕಲ್ಯದಿಂದಾಗಿ ಮೆಟ್ಟಿಲು ಹತ್ತುವುದು ಕಷ್ಟ ಎಂದು ವಿವರಿಸಿದ್ದಾಗಿ ಅವರು ತಿಳಿಸಿದ್ದಾರೆ.
ಆದರೆ, ಡೆಲಿವರಿ ಏಜೆಂಟ್ ಅವರ ಪ್ರಕಾರ, ಕೇವಲ 50 ರೂಪಾಯಿ ಮೌಲ್ಯದ ಮ್ಯಾಗಿ (Maggi) ಪ್ಯಾಕೆಟ್ ಪಡೆಯಲು ತಾವೇ ಕೆಳಗೆ ಬರಬೇಕೇ ಎಂದು ಗ್ರಾಹಕರು ಪ್ರಶ್ನಿಸಿದ್ದಾರೆ.
ಇಷ್ಟೆಲ್ಲಾ ನಡೆದರೂ, ಡೆಲಿವರಿ ಏಜೆಂಟ್ ಕಷ್ಟಪಟ್ಟು ಎರಡನೇ ಮಹಡಿಯವರೆಗೆ ಮೆಟ್ಟಿಲು ಹತ್ತಿ ಹೋಗಲು ನಿರ್ಧರಿಸಿದರು. ಆಹಾರದ ಆರ್ಡರ್ ಹಿಡಿದುಕೊಂಡು ಅವರು ಎಚ್ಚರಿಕೆಯಿಂದ ಮೆಟ್ಟಿಲು ಹತ್ತಿ ಹೋಗುವುದನ್ನು ವಿಡಿಯೋದಲ್ಲಿ ಕಾಣಬಹುದು. ಆದರೆ ಗ್ರಾಹಕರ ಬಾಗಿಲ ಬಳಿ ತಲುಪಿದಾಗ, ಆ ಆರ್ಡರ್ ಈಗಾಗಲೇ ರದ್ದುಗೊಂಡಿರುವುದು ಅವರಿಗೆ ತಿಳಿಯಿತು.
ಈ ವಿಡಿಯೋವನ್ನು ಹಂಚಿಕೊಂಡ ಅವರು, “ಗ್ರಾಹಕರ ಮನೆ ಬಾಗಿಲವರೆಗೂ ಪಾರ್ಸೆಲ್ ತೆಗೆದುಕೊಂಡು ಹೋದೆ; ಆದರೆ ಗ್ರಾಹಕರು ಆರ್ಡರ್ ರದ್ದುಗೊಳಿಸಿದರು” ಎಂದು ಬರೆದುಕೊಂಡಿದ್ದಾರೆ.

