HomeKarnatakaಹೆಸ್ಕಾಂ ಅಧಿಕಾರಿಗಳ ಮೇಲೆಯೇ ಹಲ್ಲೆ ನಡೆಸಿದ್ರಾ ಎಂಎಲ್ ಸಿ ಚನ್ನರಾಜ ಹಟ್ಟಿಹೊಳಿ?

ಹೆಸ್ಕಾಂ ಅಧಿಕಾರಿಗಳ ಮೇಲೆಯೇ ಹಲ್ಲೆ ನಡೆಸಿದ್ರಾ ಎಂಎಲ್ ಸಿ ಚನ್ನರಾಜ ಹಟ್ಟಿಹೊಳಿ?

ಬೆಳಗಾವಿ: ತನ್ನ ಆಪ್ತನ ಕ್ರಷರ್ ವಿದ್ಯುತ್ ಬಾಕಿ ಇದ್ದಿದ್ದಕ್ಕೆ ಕಲ್ಲು ಕ್ರಷರ್​​ಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದ ಹೆಸ್ಕಾಂ ಅಧಿಕಾರಿಗಳ ಮೇಲೆಯೇ ಹಲ್ಲೆ ನಡೆಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಮಾಜಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರ ಸಹೋದರನಾಗಿರುವ ಎಂಎಲ್ ಸಿ ಚನ್ನರಾಜ್ ಹಟ್ಟಿಹೊಳಿ ಮನೆಗೆ ಕರೆಸಿ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

ಬೆಳಗಾವಿಯ ಕುವೆಂಪು ನಗರದಲ್ಲಿರುವ ಚನ್ನರಾಜ್ ಅವರ ನಿವಾಸದಲ್ಲಿ ಎಇಇ ದೀಪಕ್, ಸೆಕ್ಷನ್ ಆಫೀಸರ್ ರಾಜು ಮೇಲೆ ಹಲ್ಲೆ ನಡೆದಿದೆ ಎಂದು ದೂರಲಾಗಿದೆ. ಮೂರು ತಿಂಗಳ ₹77,360 ಕರೆಂಟ್​ ಬಿಲ್ ಬಾಕಿ ಹಿನ್ನೆಲೆಯಲ್ಲಿ ಚನ್ನರಾಜ್ ಹಟ್ಟಿಹೊಳಿ ಆಪ್ತನಾಗಿರುವ ಪ್ರಮೋದ್ ಜಾಧವ್ ಎಂಬವರಿಗೆ ಸೇರಿದ ಲಕ್ಷ್ಮೀ ಸ್ಟೋನ್​ ಕ್ರಷರ್​ಗೆ ಕರೆಂಟ್ ಸಂಪರ್ಕ​ ಕಟ್ ಮಾಡಲಾಗಿತ್ತು. ​ಬೆಳಗಾವಿ ತಾಲೂಕಿನ ತಾರಿಹಾಳ ಗ್ರಾಮದಲ್ಲಿರುವ ಕ್ರಷರ್​​ಗೆ ಏಕೆ ವಿದ್ಯುತ್​ ಸಂಪರ್ಕ ಕಡಿತಗೊಳಿಸಿದ್ದೀರಿ ಎಂದು ಪ್ರಶ್ನಿಸಿ, ಅವಾಚ್ಯ ಶಬ್ದದಿಂದ ನಿಂದಿಸಿ ಎಂಎಲ್​ಸಿ ಚನ್ನರಾಜ ಹಟ್ಟಿಹೊಳಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹೆಬ್ಬಾಳ್ಕರ್ ಮೇಡಂ ಪಿಎ ಅಂತಾ ಹಿರೇಮಠ ಕರೆ ಮಾಡಿದ್ದರು. ಬೆಳಗ್ಗೆ ಎಂಎಲ್​ಸಿ ಚನ್ನರಾಜ್ ಮನೆಗೆ ಬರುವಂತೆ ಹೇಳಿದ್ದರು. ಅದರಂತೆ ನಾವು ಅವರ ಮನೆಗೆ ಹೋದಾಗ ಹಲ್ಲೆ ನಡೆಸಿದ್ದಾರೆ ಎಂದು ಹೆಸ್ಕಾಂ ಎಇಇ ತಿಳಿಸಿದ್ದು, ಬೆಳಗಾವಿ ಎಪಿಎಂಸಿ ಪೊಲೀಸ್ ಠಾಣೆ ಮುಂದೆ ಸಿಬ್ಬಂದಿ ಪ್ರತಿಭಟನೆ ನಡೆಸಿದರು.

ಎಂಎಲ್ ಎಸಿ ಯಿಂದ ಅಧಿಕಾರಿಗಳ ಮೇಲೆ ಹಲ್ಲೆ ಖಂಡಿಸಿ ಹೆಸ್ಕಾಂ ಸಿಬ್ಬಂದಿಗಳು ಹಾಗೂ ಅಧಿಕಾರಿಗಳು ಎಪಿಎಂಸಿ ಪೊಲೀಸ್ ಠಾಣೆ ಮುಂದೆ ಸಿಬ್ಬಂದಿ ಪ್ರತಿಭಟನೆ ನಡೆಸಿದರು. ಹಲ್ಲೆಗೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಿಸಲು ಹೆಸ್ಕಾಂ ಸಿಬ್ಬಂದಿ ಒತ್ತಾಯಿಸಿದ್ದು, ಪೊಲೀಸರು ಕೂಡ ಆ ಬಗ್ಗೆ ಪ್ರತಿಭಟನಾಕಾರರಿಗೆ ಭರವಸೆ ನೀಡಿ ಹೆಸ್ಕಾಂ ಸಿಬ್ಬಂದಿಯನ್ನು ಸ್ಥಳದಿಂದ ಕಳುಹಿಸಿದ್ದಾರೆ. ಘಟನೆ ಸಂಬಂಧ ಎಪಿಎಂಸಿ ಠಾಣೆಗೆ ಡಿಸಿಪಿ ನಾರಾಯಣ ಭರಮನಿ ಕೂಡ ಭೇಟಿ ನೀಡಿದ್ದಾರೆ

ಇನ್ನು ಹೆಸ್ಕಾಂ ಸಿಬ್ಬಂದಿ ಮೇಲೆ ಹಲ್ಲೆ ಮಾಡಿರುವ ಆರೋಪವನ್ನು ಚನ್ನರಾಜ ಹಟ್ಟಿಹೊಳಿ ತಳ್ಳಿಹಾಕಿದ್ದಾರೆ. ತಾವು ಯಾವುದೇ ರೀತಿಯ ಹಲ್ಲೆ ಮಾಡಿಲ್ಲ. ತಮ್ಮ ಮೇಲಿನ ಆರೋಪ ಸಂಪೂರ್ಣ ಸುಳ್ಳು ಎಂದು ತಿಳಿಸಿದ್ದಾರೆ.

ರೈತರು ಹಾಗೂ ಕ್ರಷರ್ ಮಾಲೀಕರು ತಮ್ಮನ್ನು ಭೇಟಿ ಮಾಡಿ ವಿದ್ಯುತ್ ಸಮಸ್ಯೆಗಳ ಕುರಿತು ಗಮನ ಸೆಳೆದಿದ್ದರು. ರೈತರಿಗೆ ಸಮರ್ಪಕ ವಿದ್ಯುತ್ ಪೂರೈಕೆಯಾಗುತ್ತಿಲ್ಲ ಹಾಗೂ ಹಲವು ಟ್ರಾನ್ಸ್‌ಫಾರ್ಮರ್‌ಗಳು ಸುಟ್ಟುಹೋಗಿರುವ ಬಗ್ಗೆ ಸಮಸ್ಯೆಗಳನ್ನು ತಿಳಿಸಿದ್ದರು. ಕೆಲ ದಿನಗಳ ಹಿಂದೆ ಬಾಳೆಕುಂದರಗಿ ಬಳಿ ರೈತರು ವಿದ್ಯುತ್ ಸಮಸ್ಯೆ ಕುರಿತು ಪ್ರತಿಭಟನೆ ನಡೆಸಿದ್ದರು. 

ಈ ಹಿನ್ನೆಲೆಯಲ್ಲಿ ಹಾಗೂ ಕ್ರಷರ್‌ಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸಿರುವ ವಿಚಾರದ ಬಗ್ಗೆ ಚರ್ಚಿಸಲು ಹೆಸ್ಕಾಂ ಸಿಬ್ಬಂದಿಯನ್ನು ಕರೆಸಲಾಗಿತ್ತು ಎಂದು ಅವರು ತಿಳಿಸಿದರು.

ನೋಟಿಸ್ ನೀಡಿ, ನಿಯಮಾನುಸಾರವಾಗಿ ವಿದ್ಯುತ್ ಸಂಪರ್ಕ ಕಡಿತಗೊಳಿಸುವಂತೆ ಹೆಸ್ಕಾಂ ಸಿಬ್ಬಂದಿಗೆ ಸೂಚಿಸಿದ್ದೇನೆ. ಸಿಬ್ಬಂದಿಗೆ ಬುದ್ಧಿವಾದ ಹೇಳಿದ್ದು ನಿಜ. ಆದರೆ ಯಾವುದೇ ರೀತಿಯ ಹಲ್ಲೆ ಮಾಡಿಲ್ಲ ಎಂದು ಚನ್ನರಾಜ ಹಟ್ಟಿಹೊಳಿ ತಿಳಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular