ನರಸಿಂಗ್‌ಪುರ: ಸಾರ್ವಜನಿಕ ಸ್ಥಳಗಳಲ್ಲಿ ಹೆಣ್ಣುಮಕ್ಕಳಿಗೆ ಕಿರುಕುಳ ನೀಡುವ ಪುಂಡರ ವಿರುದ್ಧ ಮಧ್ಯಪ್ರದೇಶದ ಪೊಲೀಸರು ವಿಭಿನ್ನ ರೀತಿಯಲ್ಲಿ ಬಿಸಿ ಮುಟ್ಟಿಸಿದ್ದಾರೆ. ಬಸ್ ನಿಲ್ದಾಣದಲ್ಲಿ ವಿದ್ಯಾರ್ಥಿನಿಯರನ್ನು ಅವಹೇಳನಕಾರಿಯಾಗಿ ಚೇಡಿಸುತ್ತಿದ್ದ ಇಬ್ಬರು ಯುವಕರನ್ನು ಬಂಧಿಸಿರುವ ಪೊಲೀಸರು, ಅವರಿಗೆ ಮರೆಯಲಾಗದ ರೀತಿಯಲ್ಲಿ ಪಾಠ ಕಲಿಸಿದ್ದಾರೆ.
ಏನಿದು ಘಟನೆ? ನರಸಿಂಗ್‌ಪುರದ ಬಸ್ ನಿಲ್ದಾಣದ ಬಳಿ ಬೈಕ್‌ನಲ್ಲಿ ಸುತ್ತಾಡುತ್ತಿದ್ದ ಇಬ್ಬರು ಯುವಕರು, ಶಾಲಾ ಸಮವಸ್ತ್ರದಲ್ಲಿದ್ದ ವಿದ್ಯಾರ್ಥಿನಿಯರನ್ನು ಕಂಡು ಅಸಭ್ಯವಾಗಿ ಮಾತನಾಡಿದ್ದರು. “ಮಾಲ್ ಮಾಲ್” ಎಂದು ಕೂಗುತ್ತಾ ಹುಡುಗಿಯರನ್ನು ಚೇಡಿಸುತ್ತಿದ್ದ ಇವರು, ಈ ಕೃತ್ಯವನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದರು. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಕೂಡಲೇ ಕಾರ್ಯಾಚರಣೆ ನಡೆಸಿದ ಪೊಲೀಸರು ಇಬ್ಬರು ಕಿಡಿಗೇಡಿಗಳನ್ನು ಹೆಡೆಮುರಿ ಕಟ್ಟಿದ್ದಾರೆ.
ಪೊಲೀಸರ ವಿಭಿನ್ನ ಶಿಕ್ಷೆ! ಬಂಧಿತ ಪುಂಡರಿಗೆ ಪೊಲೀಸರು ಸಾರ್ವಜನಿಕವಾಗಿಯೇ ಮುಖಭಂಗ ಮಾಡಿದ್ದಾರೆ. ಈ ಕಿಡಿಗೇಡಿಗಳ ಅರ್ಧ ಮೀಸೆ ಕತ್ತರಿಸಿ, ತಲೆಯ ಕೂದಲಿಗೆ ಸಾಲು ಸಾಲು ಜುಟ್ಟುಗಳನ್ನು ಹಾಕಿ ವಿಚಿತ್ರವಾಗಿ ಅಲಂಕರಿಸಲಾಗಿತ್ತು. ಇದೇ ವಿಚಿತ್ರ ರೂಪದಲ್ಲಿ ಇಬ್ಬರನ್ನೂ ಸಾರ್ವಜನಿಕವಾಗಿ ರಸ್ತೆಯಲ್ಲಿ ನಡೆಸಿಕೊಂಡು ಹೋಗುವ ಮೂಲಕ ಮೆರವಣಿಗೆ ಮಾಡಲಾಯಿತು. ಈ ದೃಶ್ಯ ಕಂಡು ಹಾದಿಹೋಕರು ಕೂಡ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
‘ಮಾಲ್’ ನಿಂದ ‘ದೀದಿ’ ವರೆಗೆ! ಯಾವ ಯುವಕರು ಹುಡುಗಿಯರನ್ನು ಅವಮಾನಿಸಿದ್ದರೋ, ಅವರಿಂದಲೇ ಪೊಲೀಸರು ಸಾರ್ವಜನಿಕವಾಗಿ ಕ್ಷಮೆ ಕೇಳಿಸಿದ್ದಾರೆ. ರಸ್ತೆಯ ಮೇಲೆ ಕುಳಿತು ಕಿವಿಯನ್ನು ಹಿಡಿದುಕೊಂಡು “ನಮ್ಮಿಂದ ದೊಡ್ಡ ತಪ್ಪಾಗಿದೆ, ಅಕ್ಕಂದಿರ ಬಗ್ಗೆ ನಾವು ಕೆಟ್ಟದಾಗಿ ಮಾತನಾಡಬಾರದಿತ್ತು. ದಯವಿಟ್ಟು ನಮ್ಮನ್ನು ಕ್ಷಮಿಸಿ” ಎಂದು ಇಬ್ಬರೂ ಕೈಮುಗಿದು ಬೇಡಿಕೊಂಡಿದ್ದಾರೆ. ಮಹಿಳೆಯರ ಸುರಕ್ಷತೆ ಮತ್ತು ಗೌರವದ ವಿಚಾರದಲ್ಲಿ ಯಾರೂ ಕಾನೂನು ಕೈಗೆತ್ತಿಕೊಳ್ಳಬಾರದು, ಅಸಭ್ಯ ವರ್ತನೆಯನ್ನು ಸಹಿಸುವುದಿಲ್ಲ ಎಂದು ಪೊಲೀಸರು ಈ ಮೂಲಕ ಖಡಕ್ ಸಂದೇಶ ರವಾನಿಸಿದ್ದಾರೆ.


