ಕೋಮುವಾದದ ಕಾರಣ ಕರಾವಳಿಯಲ್ಲಿ ಐಟಿ-ಬಿಟಿ ಕಂಪನಿ ಬಂಡವಾಳ ಹಾಕಲು ಹೆದರುತ್ತಿದೆ ಎಂಬ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆ ಭಾರೀ ಚರ್ಚೆಗೆ ಕಾರಣವಾಗಿದೆ. ಈ ವಿಚಾರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರ ನಡುವೆ ವಾಕ್ಸಮರ ನಡೆಯುತ್ತಿದೆ.
ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಸಾಮಾಜಿಕ ಜಾಲತಾಣದಲ್ಲಿ, ‘ಕರಾವಳಿ ಬಗ್ಗೆ ಮಾತನಾಡುವ ಮುನ್ನ, ಕಲಬುರಗಿಯಲ್ಲಿ ಯಾಕೆ ಐಟಿ-ಬಿಟಿ ಕಂಪನಿಗಳು ಕಾಲಿಟ್ಟಿಲ್ಲ ಎನ್ನುವುದರ ಕಡೆಗೆ ಗಮನ ಹರಿಸಿ. ಕರಾವಳಿಯ ಮಣ್ಣಿನ ಗುಣ ಮತ್ತು ಅಲ್ಲಿನ ಜನರ ಉದ್ಯಮಶೀಲತೆಯನ್ನು, ಪ್ರಗತಿಯನ್ನು, ತಮ್ಮ ಕೀಳು ರಾಜಕೀಯದ ಕಾಮಾಲೆ ಕಣ್ಣಿನಿಂದ ನೋಡದೆ, ವಾಸ್ತವ ನೆಲೆಗಟ್ಟಿನಲ್ಲಿ ಸಚಿವ ಶ್ರೀ ಪ್ರಿಯಾಂಕ್ ಖರ್ಗೆ ಅವರು ನೋಡಲಿ. ಕರಾವಳಿಗೆ ಕೋಮುವಾದದ ಹಣೆಪಟ್ಟಿ ಹಚ್ಚುವ ಅವರ ವ್ಯರ್ಥ ಪ್ರಯತ್ನ ಅವರ ರಾಜಕೀಯ ದಿವಾಳಿತನವನ್ನು ತೋರಿಸುತ್ತದೆ’ ಎಂದು ಪೋಸ್ಟ್ ಹಾಕಿದ್ದರು.
ಶಿವಮೊಗ್ಗ ಸಿಂಗಪುರ ಆಗಲಿಲ್ಲ ಏಕೆ?: ಈ ಪೋಸ್ಟ್‌ಗೆ ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದಾರೆ. ‘ಕಲ್ಯಾಣ ಕರ್ನಾಟಕ ಹಿಂದುಳಿದ ಪ್ರದೇಶ. ಈ ಪ್ರಾದೇಶಿಕ ಅಸಮತೋಲನಕ್ಕೆ ಐತಿಹಾಸಿಕ ಮತ್ತು ಭೌಗೋಳಿಕ ಕಾರಣಗಳಿವೆ ಎಂಬ ವಿಷಯ ತಿಳಿದಿದ್ದರೆ ಆರ್ಟಿಕಲ್ 371ಜೆ ವಿಶೇಷ ಸ್ಥಾನಮಾನ ನೀಡಲು ಬಿಜೆಪಿಯ ಕೇಂದ್ರ ಸರ್ಕಾರ ನಿರಾಕರಿಸುತ್ತಿರಲಿಲ್ಲ. ಹಿಂದುಳಿದ ಈ ಪ್ರದೇಶವನ್ನು ಮುಂದೆ ತರುವ ಇಚ್ಛಾಶಕ್ತಿ ಬಿಜೆಪಿಗೆ ಇರಲಿಲ್ಲವೇಕೆ?, ಆರ್ಟಿಕಲ್ 371ಜೆ ಸ್ಥಾನಮಾನ ನೀಡಲು ಆಡ್ವಾಣಿಯವರು ನಿರಾಕರಿಸಿದ್ದೇಕೆ?, ನಿಮ್ಮ ಸರ್ಕಾರದ ಅವಧಿಯಲ್ಲಿ KKRDB ಅನುದಾನ ಇಳಿಮುಖವಾಗಿದ್ದೇಕೆ?, ಕಲ್ಯಾಣ ಕರ್ನಾಟಕದ ಕಲ್ಯಾಣಕ್ಕೆ ಮೀಸಲಿದ್ದ KKRDB ಅನುದಾನದಲ್ಲಿ ಅಕ್ರಮ ನಡೆಸಿದ್ದೇಕೆ?’ ಎಂದು ಪ್ರಶ್ನೆ ಮಾಡಿದ್ದಾರೆ.
‘ಅಂದಹಾಗೆ, ಬಿ.ವೈ.ವಿಜಯೇಂದ್ರ ಅವರೇ, ನಿಮ್ಮ ತಂದೆಯವರು ನಾಲ್ಕು ಬಾರಿ ಮುಖ್ಯಮಂತ್ರಿಯಾಗಿದ್ದರಲ್ಲವೇ, ಶಿವಮೊಗ್ಗವನ್ನು ಸಿಂಗಾಪುರದಂತೆ ಮಾಡಲಾಗಲಿಲ್ಲವೇಕೆ?. ಹೋಗಲಿ, ಬೆಂಗಳೂರಿನ ಮಟ್ಟಕ್ಕಾದರೂ ತರಲಾಗಲಿಲ್ಲವೇಕೆ?. ಶಾಂತಿ, ಸಹಬಾಳ್ವೆ, ಸಮೃದ್ಧಿಯನ್ನು ಬಯಸುವ ಕರಾವಳಿ ಜನರ ಇಚ್ಛೆಗೆ ವಿರುದ್ಧವಾಗಿ ನಿಮ್ಮ ಕೋಮುವಾದದ ಪ್ರಯೋಗಶಾಲೆ ತೆರೆದು, ದ್ವೇಷದ ನಶೆಯನ್ನು ಮಾರುತ್ತಿದ್ದೀರಿ, ಕರಾವಳಿಯಲ್ಲಿನ ಅಪಾರ ಆರ್ಥಿಕ ಸಾಮರ್ಥ್ಯವನ್ನು, ಅಲ್ಲಿನ ಜನರ ಪ್ರತಿಭೆ ಮತ್ತು ಬೌದ್ಧಿಕ ಸಾಮರ್ಥ್ಯವನ್ನು ಹಿನ್ನೆಲೆಗೆ ತಳ್ಳುವ ಕೆಲಸ ಮಾಡಿದ್ದೀರಿ’ ಎಂದು ಆರೋಪಿಸಿದ್ದಾರೆ.
‘ಆದರೆ ನಮ್ಮ ಸರ್ಕಾರ ಕರಾವಳಿಯ ಸಾಮರ್ಥ್ಯವನ್ನು ಸಮೃದ್ಧಿಯಾಗಿ ಪರಿವರ್ತಿಸಲು ಬದ್ಧವಾಗಿದೆ, ಮತ್ತು ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ. ಆ್ಯಂಟಿ ಕಮ್ಯೂನಲ್ ಟಾಸ್ಕ್ ಫೋರ್ಸ್ ರಚನೆ ಮಾಡಿದದ್ದು ರಂಗೋಲಿ ಬಿಡಿಸಲು ಅಲ್ಲ, ಕೋಮು ಸಂಘರ್ಷಗಳಿಗೆ ಕಡಿವಾಣ ಹಾಕಿ ಶಾಂತಿ-ಸೌಹಾರ್ದತೆ ಕಾಪಾಡಲು’ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

