ಬೆಂಗಳೂರು: ಸಿಲಿಕಾನ್ ಸಿಟಿಯ ಗುಂಡಿ ಬಿದ್ದ ರಸ್ತೆಗಳು ಹಾಗೂ ಅವ್ಯವಸ್ಥಿತ ಕಾಮಗಾರಿಗಳು ಸಾರ್ವಜನಿಕರ ಪಾಲಿಗೆ ಮೃತ್ಯುಪಾಶವಾಗುತ್ತಲೇ ಇವೆ. ಈಗ ಹೊರಮಾವಿನ ಹಳೆಹಳ್ಳಿ ರಸ್ತೆಯಲ್ಲಿ ಹದಗೆಟ್ಟ ರಸ್ತೆಯಿಂದಾಗಿ ಕೇವಲ 2 ವರ್ಷದ ಮಗು ಪ್ರಾಣ ಕಳೆದುಕೊಂಡಿರುವ ದಾರುಣ ಘಟನೆ ನಡೆದಿದೆ.
ಘಟನೆಯ ವಿವರ:
ಮೃತಪಟ್ಟ ಮಗುವನ್ನು ತ್ರಿಶೂಲ್ (2) ಎಂದು ಗುರುತಿಸಲಾಗಿದೆ. ಮಗುವಿನ ಪೋಷಕರು ಧಾರ್ಮಿಕ ಕಾರ್ಯ ನಿಮಿತ್ತ ಮಧ್ಯಪ್ರದೇಶದ ಉಜ್ಜಯಿನಿಗೆ ತೆರಳಿದ್ದರು. ಈ ಸಮಯದಲ್ಲಿ ಮಗು ಮನೆಯವರ ಬಳಿ ಇತ್ತು ಎನ್ನಲಾಗಿದೆ. ಹಳೆಹಳ್ಳಿ ರಸ್ತೆಯು ಅತ್ಯಂತ ಕೆಟ್ಟದಾಗಿದ್ದು, ರಸ್ತೆಯ ಗುಂಡಿ ಅಥವಾ ಹದಗೆಟ್ಟ ಸ್ಥಿತಿಯಿಂದಾಗಿ ಸಂಭವಿಸಿದ ಅಪಘಾತದಲ್ಲಿ ಮಗು ಸಾವನ್ನಪ್ಪಿದೆ. ಮಗುವಿನ ಸಾವಿನ ಸುದ್ದಿ ಕೇಳಿ ಉಜ್ಜಯಿನಿಯಲ್ಲಿದ್ದ ಹೆತ್ತವರು ಆಘಾತಕ್ಕೊಳಗಾಗಿದ್ದಾರೆ. ರಸ್ತೆಗುಂಡಿಯಿಂದ ಬೈಕ್ ನಿಯಂತ್ರಣ ತಪ್ಪಿ ಬಿದ್ದಿದೆ.ಬೈಕ್ ನಿಂದ ಕೆಳಗೆ ಬಿದ್ದ ಮಗುವಿನ ಮೇಲೆ ಕಾರು ಹರಿದಿದೆ.ಶಿವರಾತ್ರಿ ಹಬ್ಬದ ಹಿನ್ನೆಲೆ ಮಗು ಸಂಬಂಧಿಕರ ಜೊತೆ ದೇವಸ್ಥಾನಕ್ಕೆ ಹೋಗುವಾಗ ಈ ದುರ್ಘಟನೆ ನಡೆದಿದೆ ಎನ್ನಲಾಗಿದೆ.
ಘಟನೆಯಿಂದ ಆಕ್ರೋಶಗೊಂಡ ಹಳೆಹಳ್ಳಿ ಹಾಗೂ ಮಹದೇವಪುರ ಭಾಗದ ನಿವಾಸಿಗಳು ರಸ್ತೆ ತಡೆದು ಬೃಹತ್ ಪ್ರತಿಭಟನೆ ನಡೆಸುತ್ತಿದ್ದಾರೆ.ಹಲವು ಬಾರಿ ಮನವಿ ಮಾಡಿದರೂ ರಸ್ತೆ ದುರಸ್ತಿ ಮಾಡದ ಬಿಬಿಎಂಪಿ ಅಧಿಕಾರಿಗಳ ನಿರ್ಲಕ್ಷ್ಯವೇ ಈ ಮಗುವಿನ ಸಾವಿಗೆ ಕಾರಣ” ಎಂದು ಸ್ಥಳೀಯರು ಕಿಡಿಕಾರಿದ್ದಾರೆ.ರಸ್ತೆಯಲ್ಲೇ ಕುಳಿತು ಪ್ರತಿಭಟನೆ ನಡೆಸುತ್ತಿರುವ ಜನರು, ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಬರಬೇಕು ಮತ್ತು ರಸ್ತೆ ಸರಿಪಡಿಸಬೇಕು ಎಂದು ಪಟ್ಟು ಹಿಡಿದಿದ್ದಾರೆ.ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಇನ್ನೆಷ್ಟು ಬಲಿಗಳು ಬೇಕು?” ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಬೆಂಗಳೂರಿನ ರಸ್ತೆಗಳ ಗುಂಡಿಗಳಿಂದಾಗಿ ಸಾವು-ನೋವುಗಳು ಸಂಭವಿಸುತ್ತಿದ್ದರೂ ಸಹ ಆಡಳಿತ ಮಂಡಳಿ ಎಚ್ಚೆತ್ತುಕೊಳ್ಳದಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.

