ಬೆಂಗಳೂರು: ಅಬಕಾರಿ ಡಿಸಿ ಲೋಕಾಯುಕ್ತ ಬಲೆಗೆ ಬಿದ್ದ ಬೆನ್ನಲ್ಲೇ ಅಬಕಾರಿ ಸಚಿವರಿಗೆ ಸಂಕಷ್ಟ ಎದುರಾಗಿದೆ. ಲಂಚದ ಬಹುಪಾಲು ಹಣವನ್ನು ಸಚಿವರಿಗೆ ಕೊಡಬೇಕು ಎನ್ನುವ ಅಬಕಾರಿ ಡಿಸಿಯ ಆಡಿಯೋ ಆಧಾರದ ಮೇಲೆ ಸಚಿವ ಆರ್.ಬಿ. ತಿಮ್ಮಾಪುರ ಅವರ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಲಾಗಿದೆ.
ಬ್ಯಾಟರಾಯನಪುರದ ಅಬಕಾರಿ ಭವನದಲ್ಲಿ ಶನಿವಾರ ರೂ.25 ಲಕ್ಷ ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ಅಬಕಾರಿ ಡಿಸಿ ಜಗದೀಶ್ ನಾಯಕ್, ಅಧೀಕ್ಷಕ ತಮ್ಮಣ್ಣ, ಕಾನ್ಸ್ಟೇಬಲ್ ಲಕ್ಕಪ್ಪ ಗಣಿ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದರು. ಅವರನ್ನು ನ್ಯಾಯಾಂಗ ಬಂಧನಕ್ಕೆ ವಹಿಸಲಾಗಿದೆ.
ಪ್ರಕರಣದ ದೂರುದಾರ ಲಕ್ಷ್ಮೀನಾರಾಯಣ್ ಲಂಚ ಪ್ರಕರಣದಲ್ಲಿ ಸಚಿವ ಆರ್.ಬಿ. ತಿಮ್ಮಾಪುರ ಪಾತ್ರದ ಕುರಿತು ತನಿಖೆ ನಡೆಸುವಂತೆ ಆಡಿಯೋ ಸಹಿತ ಲೋಕಾಯುಕ್ತ ಎಸ್ಪಿಗೆ ದೂರು ಸಲ್ಲಿಸಿದ್ದಾರೆ. 25 ಲಕ್ಷ ರೂ. ಲಂಚ ಸ್ವೀಕಾರ ಪ್ರಕರಣದಲ್ಲಿ ಮೂವರು ಅಧಿಕಾರಿಗಳು ಬಂಧಿತರಾಗಿದ್ದಾರೆ. ಅಬಕಾರಿ ಡಿಸಿ ಅವರೇ ಸಚಿವರಿಗೆ ಹಣ ಕೊಡಬೇಕೆಂಬುದರ ಬಗ್ಗೆ ಪ್ರಸ್ತಾಪಿಸಿದ್ದು, ಈ ಬಗ್ಗೆ ಆಡಿಯೋ ದಾಖಲೆಗಳನ್ನು ಲೋಕಾಯುಕ್ತ ಪೊಲೀಸರಿಗೆ ಸಲ್ಲಿಸಿ ದೂರು ನೀಡಲಾಗಿದೆ ಎಂದು ದೂರುದಾರ ಲಕ್ಷ್ಮಿ ನಾರಾಯಣ ತಿಳಿಸಿದ್ದು, ಸಚಿವರ ಪಾತ್ರದ ಕುರಿತಾಗಿ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ.
ಆದರೆ ಲಂಚ ಪ್ರಕರಣದಲ್ಲಿ ತಮ್ಮ ಪಾತ್ರವನ್ನು ಅಲ್ಲಗಳಿದ ಸಚಿವ ಆರ್.ಬಿ.ತಿಮ್ಮಾಪುರ, ನನಗೂ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ. ಇದರ ವಿರುದ್ಧ ಕಾನೂನು ಹೋರಾಟ ನಡೆಸಲಾಗುವುದು. ಯಾರೋ ಹೇಳಿದಾಕ್ಷಣ ನನ್ನ ಪಾತ್ರವಿದೆ ಎಂದು ಅರ್ಥವೇ ಎಂದು ಪ್ರಶ್ನಿಸಿದ್ದಾರೆ.

