“ಇಡೀ ರಾಜ್ಯದ ಜನತೆಗೆ ಗುಣಮಟ್ಟದ ಹಾಗೂ ಸಮಾನ ಆರೋಗ್ಯ ಸೇವೆ ಒದಗಿಸುವ ಬದ್ಧತೆಯೊಂದಿಗೆ ನಮ್ಮ ಸರ್ಕಾರ ಸದಾ ನವೀನ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುತ್ತ ಬಂದಿದೆ” ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಮೈಸೂರಿನ ಜೆಎಸ್‌ಎಸ್ ಕಾಲೇಜ್ ಆಫ್ ಫಾರ್ಮಸಿಯಲ್ಲಿ ಜಪಾನ್-ಭಾರತ ಸಹಯೋಗದ ಜಿಕಾ (JICA) ಬೆಂಬಲಿತ IMPACT-VIP ಕಾರ್ಯಕ್ರಮದಲ್ಲಿ ದೃಷ್ಟಿ ವಿಶೇಷ ಚೇತನರ ಸಬಲೀಕರಣ ಕುರಿತು ನಡೆದ ಅರ್ಥಪೂರ್ಣ ಚರ್ಚೆಯಲ್ಲಿ ಸಚಿವರು ಭಾಗವಹಿಸಿ ಮಾತನಾಡಿದರು.
“ಔಷಧ ಬಳಕೆಯ ಕ್ಷೇತ್ರದಲ್ಲಿಯೂ ದೃಷ್ಟಿ ವಿಶೇಷ ಚೇತನರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕು ಎಂಬ ಉದ್ದೇಶದಿಂದ ಔಷಧ ಪ್ಯಾಕೆಟ್‌ಗಳ ಮೇಲೆ QR ಕೋಡ್ ಅಳವಡಿಸುವ ಮಹತ್ವಾಕಾಂಕ್ಷೆಯ ಯೋಜನೆಯತ್ತ ನಾವು ಗಮನ ಹರಿಸುತ್ತಿದ್ದೇವೆ” ಎಂದು ಸಚಿವರು ತಿಳಿಸಿದರು.
“ಔಷಧ ಪ್ಯಾಕೆಟ್‌ಗಳ ಮೇಲೆ QR ಕೋಡ್ ಬಳಕೆ ಕೇವಲ ದೃಷ್ಟಿ ವಿಶೇಷ ಚೇತನರಿಗೆ ಮಾತ್ರವಲ್ಲ, ಭಾಷಾ ಅಡೆತಡೆ ಎದುರಿಸುವವರಿಗೆ ಸಹ ಮಹತ್ತರ ವರದಾನವಾಗಲಿದೆ. ವಿಶೇಷವಾಗಿ ಫಾರ್ಮಸಿಸ್ಟ್‌ಗಳಾಗಿ ಕಾರ್ಯನಿರ್ವಹಿಸುವ ದೃಷ್ಟಿ ವಿಶೇಷ ಚೇತನರು ಲೇಬಲ್ ಓದುವ ಸಂದರ್ಭದಲ್ಲಿ ಎದುರಿಸುವ ಸಂಕಷ್ಟಗಳಿಗೆ ಇದು ಶಾಶ್ವತ ಪರಿಹಾರವಾಗಲಿದೆ” ಎಂದು ವಿವರಣೆ ನೀಡಿದರು.
“ದಿನನಿತ್ಯ ಔಷಧ ಸೇವನೆಯ ವೇಳೆ ದೃಷ್ಟಿ ವಿಶೇಷ ಚೇತನರು ಎದುರಿಸುವ ಸವಾಲುಗಳನ್ನು ಗಂಭೀರವಾಗಿ ಪರಿಗಣಿಸಿರುವ ನಮ್ಮ ಸರ್ಕಾರ, QR ಕೋಡ್ ಮೂಲಕ ಔಷಧದ ಸಂಪೂರ್ಣ ಮಾಹಿತಿಯನ್ನು ಧ್ವನಿ ಅಥವಾ ಡಿಜಿಟಲ್ ರೂಪದಲ್ಲಿ ಪಡೆಯುವ ವ್ಯವಸ್ಥೆಯನ್ನು ಅಳವಡಿಸಲು ಮುಂದಾಗಿದೆ” ಎಂದರು.
“ಕರ್ನಾಟಕ, ಕೇರಳ ಸೇರಿದಂತೆ 5 ರಾಜ್ಯಗಳ 500ಕ್ಕೂ ಹೆಚ್ಚು ದೃಷ್ಟಿ ವಿಶೇಷ ಚೇತನರಿಂದ ಸಂಗ್ರಹಿಸಿದ ಮಾಹಿತಿಯು ಈ ತಂತ್ರಜ್ಞಾನದ ಅಗತ್ಯತೆ ಮತ್ತು ಪ್ರಾಮುಖ್ಯತೆಯನ್ನು ಸ್ಪಷ್ಟವಾಗಿ ಎತ್ತಿ ತೋರಿಸಿದೆ. ಈ ಸಂಶೋಧನಾ ಫಲಿತಾಂಶಗಳ ಆಧಾರದ ಮೇಲೆ, ಯೋಜನೆಯನ್ನು ಅನುಷ್ಠಾನಗೊಳಿಸುವ ತೀರ್ಮಾನ ಮಾಡಲಾಗುವುದು” ಎಂದು ತಿಳಿಸಿದರು.
“ಜಪಾನ್‌ನ ತಾಂತ್ರಿಕ ಸಹಯೋಗದೊಂದಿಗೆ, ದೃಷ್ಟಿ ವಿಶೇಷ ಚೇತನರ ಅನುಭವ, ಗೌರವ ಮತ್ತು ಅಗತ್ಯಗಳನ್ನು ಕೇಂದ್ರಬಿಂದು ಮಾಡಿಕೊಂಡು ಅವರ ಬದುಕಿನಲ್ಲಿ ಹೊಸ ಬೆಳಕು ತರಲು ನಮ್ಮ ಸರ್ಕಾರ ಬದ್ಧವಾಗಿದೆ. ಈ ಕ್ಷೇತ್ರದಲ್ಲಿ ಇನ್ನಷ್ಟು ಸಂಶೋಧನೆಗಳು ನಡೆಯಲಿ, ತಂತ್ರಜ್ಞಾನವು ಸಮಾಜದ ಪ್ರತಿಯೊಬ್ಬರಿಗೂ ತಲುಪಲಿ ಎಂಬುದೇ ನಮ್ಮ ಆಶಯವಾಗಿದೆ” ಎಂದು ತಿಳಿಸಿದರು.

