ಬೆಂಗಳೂರು: ರಾಜ್ಯದ ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವ ಡಿ. ಸುಧಾಕರ್ ಅವರ ಆರೋಗ್ಯ ಸ್ಥಿತಿ ಕಳವಳಕಾರಿಯಾಗಿದ್ದು, ಶ್ವಾಸಕೋಶ ಕಸಿ (Lung Transplant) ಮಾಡುವ ಕುರಿತು ವೈದ್ಯರು ನಾಳೆ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ. ಇಂದು ಎಲೆಕ್ಟ್ರಾನಿಕ್ ಸಿಟಿಯ ಕಿಮ್ಸ್ (KIMS) ಆಸ್ಪತ್ರೆಗೆ ಭೇಟಿ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಚಿವರ ಆರೋಗ್ಯ ವಿಚಾರಿಸಿದರು.
ಆಸ್ಪತ್ರೆ ಭೇಟಿಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, “ಸಚಿವರಿಗೆ ಇನ್ನೂ ಪ್ರಜ್ಞೆ ಬಂದಿಲ್ಲ. ಶ್ವಾಸಕೋಶ ಕಸಿ ಮಾಡಬೇಕಾದರೆ ಮೆದಳು ಪ್ರಜ್ಞೆಯಲ್ಲಿರಬೇಕು. ಈ ಬಗ್ಗೆ ವೈದ್ಯರು ನಾಳೆ ತೀರ್ಮಾನಿಸಲಿದ್ದಾರೆ” ಎಂದು ಮಾಹಿತಿ ನೀಡಿದರು.
ಸದ್ಯ ಸಚಿವರನ್ನು ವೆಂಟಿಲೇಟರ್‌ನಲ್ಲಿ ಇರಿಸಲಾಗಿದ್ದು, ಇತರ ಅಂಗಾಂಗಗಳು ಸ್ಥಿರವಾಗಿವೆ. ಆದರೆ ಮೆದಳು ಮಾತ್ರ ಇನ್ನೂ ಸಕ್ರಿಯವಾಗಿಲ್ಲ. ನಾಳೆ ವೈದ್ಯರು ಸಿಟಿ ಸ್ಕ್ಯಾನ್ ನಡೆಸಲಿದ್ದು, ಅದರ ವರದಿಯ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು . ಕೆಲ ದಿನಗಳ ಹಿಂದೆ ಸಾಮಾನ್ಯ ಮೊಣಕಾಲು ಶಸ್ತ್ರಚಿಕಿತ್ಸೆಗಾಗಿ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದ ಸುಧಾಕರ್ ಅವರಿಗೆ, ಶಸ್ತ್ರಚಿಕಿತ್ಸೆಯ ನಂತರ ಹಠಾತ್ತನೆ ಶ್ವಾಸಕೋಶದ ಸೋಂಕು (Lung Infection) ಕಾಣಿಸಿಕೊಂಡಿತ್ತು. ಸೋಂಕು ಗಂಭೀರ ಸ್ವರೂಪಕ್ಕೆ ತಿರುಗಿದ ಕಾರಣ ಹೆಚ್ಚಿನ ಚಿಕಿತ್ಸೆಗಾಗಿ ಕಿಮ್ಸ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

