ಕೋಲ್ಕತ್ತಾ: ಪಶ್ಚಿಮ ಬಂಗಾಳ ಚುನಾವಣೆ ಸಂದರ್ಭದಲ್ಲಿ ದುರ್ನಡತೆ ತೋರಿದ ಐವರು ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಿ ಅವರ ವಿರುದ್ಧ ಶಿಸ್ತು ಕ್ರಮಕ್ಕೆ ಚುನಾವಣಾ ಆಯೋಗ ಆದೇಶ ನೀಡಿದೆ.
ಡೈಮಂಡ್ ಹಾರ್ಬರ್ ನಲ್ಲಿ ನಿಯೋಜನೆಗೊಂಡಿದ್ದ ಐವರು ಪೊಲೀಸ್ ಅಧಿಕಾರಿಗಳ ನಡವ್ಳಿಕೆ ಕುರಿತು ಸಲ್ಲಿಸಿದ್ದ ವರದಿಯನ್ನು ಆಧರಿಸಿ ಚುನಾವಣಾ ಆಯೋಗ ಈ ನಿರ್ಧಾರ ಕೈಗೊಂಡಿದೆ. ಈ ಬಗ್ಗೆ ಸರ್ಕಾರಕ್ಕೆ ಮಾಹಿತಿ ನೀಡಲಾಗಿದೆ.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಂದೀಪ್ ಗರೈ, ಎಸ್ ಡಿಪಿಒ ಸಜಲ್ ಮೊಂಡಲ್, ಡೈಮಂಡ್ ಹಾರ್ಬರ್ ಪೊಲೀಸ್ ಠಾಣೆಯ ಉಸ್ತುವಾರಿ ಇನ್ಸ್ ಪೆಕ್ಟರ್ ಮೌಸಮ್ ಚಕ್ರವರ್ತಿ, ಫಾಲ್ಜಾ ಪೊಲೀಸ್ ಠಾಣೆಯ ಉಸ್ತುವಾರಿ ಇನ್ಸ್ ಪೆಕ್ಟರ್ ಅಜಯ್ ಬಾಗ್ ಹಾಗೂ ಉಸ್ಥಿ ಪೊಲೀಸ್ ಠಾಣೆಯ ಉಸ್ತುವಾರಿ ಅಧಿಕಾರಿ ಸುಬೇಚಾ ಬಾಗ್ ವಿರುದ್ಧ ಕ್ರಮಕ್ಕೆ ಸೂಚನೆ ನೀಡಲಾಗಿದೆ.
ಪಶ್ಚಿಮ ಬಂಗಾಳ ಚುನಾವಣೆಯ ವೇಳೆ ದುಷ್ಕೃತ್ಯ ಮತ್ತು ತಟಸ್ಥತೆಯನ್ನು ಕಾಯ್ದುಕೊಳ್ಳಲು ವಿಫಲರಾದ ಹಿನ್ನೆಲೆಯಲ್ಲಿ ತಕ್ಷಣ ಈ ಅಧಿಕಾರಿಗಳನ್ನು ಅಮನತುಗೊಳಿಸಲಾಗಿದೆ. ಪೊಲೀಸ್ ವರಿಷ್ಠಾಧಿಕಾರಿ ಗರೈ ಅವರ ಬಗ್ಗೆ ಗೃಹ ಸಚಿವಾಲಯದಲ್ಲಿರುವ ಅವರ ಕೇಡರ್ ನಿಯಂತ್ರಣ ಪ್ರಾಧಿಕಾರಕ್ಕೆ ವರದಿಯನ್ನು ಕಳುಹಿಸುವಂತೆ ಆಯೋಯ ಸರ್ಕಾರಕ್ಕೆ ತಿಳಿಸಿದೆ.

